‘ಹಲವು ಬೇಡಿಕೆ’ ರೈತ ಸಂಘದಿಂದ ಬೃಹತ್ ಪ್ರತಿಭಟನೆ

 ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ನೇತೃತ್ವದಲ್ಲಿ ಮಂಡ್ಯ ನಗರದಲ್ಲಿ ರೈತ ಸಂಘದಿಂದ ಪ್ರತಿಭಟನೆ ನಡೆಸಲಾಯಿತು. ಬಡಗಲಪುರ ನಾಗೇಂದ್ರ, ಕೆಂಪೂಗೌಡ, ಉಮೇಶ ಇತರರು ಭಾಗಿಯಾಗಿದ್ದರು.
ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ನೇತೃತ್ವದಲ್ಲಿ ಮಂಡ್ಯ ನಗರದಲ್ಲಿ ರೈತ ಸಂಘದಿಂದ ಪ್ರತಿಭಟನೆ ನಡೆಸಲಾಯಿತು. ಬಡಗಲಪುರ ನಾಗೇಂದ್ರ, ಕೆಂಪೂಗೌಡ, ಉಮೇಶ ಇತರರು ಭಾಗಿಯಾಗಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • protest by farmers
ಮಂಡ್ಯ : ಕಬ್ಬಿನ ಬಾಕಿ ಪಾವತಿ ಮಾಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ರೈತ ಸಂಘದಿಂದ ಮಂಗಳವಾರ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ನೇತೃತ್ವದಲ್ಲಿ ಸರ್ ಎಂ.ವಿಶ್ವೇಶ್ವರಯ್ಯ ಪ್ರತಿಮೆ ಬಳಿ ಜಮಾಯಿಸಿದ ಸಂಘದ ಕಾರ್ಯಕರ್ತರು, ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆಯಲ್ಲಿ ತೆರಳಿ ಧರಣಿ ನಡೆಸಿದರು. ನಂತರ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.
ದರ್ಶನ್ ಪುಟ್ಟಣ್ಣಯ್ಯ ಮಾತನಾಡಿ, ಕೃಷಿ ಪಂಪ್‌ಸೆಟ್‌ಗಳ ಅಕ್ರಮ ಸಕ್ರಮಕ್ಕೆ ಈ ಹಿಂದೆ ಇದ್ದ ವ್ಯವಸ್ಥೆಯಲ್ಲೇ ರೈತರಿಂದ ಹಣ ಪಾವತಿ ಮಾಡಿಸಿಕೊಂಡು ಉಳಿದ ವೆಚ್ಚಗಳನ್ನು ಸರ್ಕಾರವೇ ಭರಿಸಬೇಕು. ಹಾಗೂ ಹಗಲು ವೇಳೆ ಕನಿಷ್ಠ 7 ಗಂಟೆ ಗುಣಮಟ್ಟದ ತ್ರಿ ೇಸ್ ವಿದ್ಯುತ್ ಅನ್ನು ಕೃಷಿ ಪಂಪ್‌ಸೆಟ್‌ಗಳಿಗೆ ನೀಡಬೇಕು. ಎನ್‌ಎಚ್ 275 ಹೆದ್ದಾರಿ ಕಳಪೆಯಿಂದ ಕೂಡಿದ್ದು, ಅವೈಜ್ಞಾನಿಕವಾಗಿ ಕಾಮಗಾರಿ ಮಾಡಲಾಗಿದೆ. ಅಪೂರ್ಣವಾಗಿರುವ ಕಾಮಗಾರಿ ಕೆಲಸವನ್ನು ಪೂರ್ಣಗೊಳಿಸಲು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.
ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಗಳಿಗೆ ಕಡಿವಾಣ ಹಾಕಬೇಕು. ಗಣಿ ಮಾಲೀಕರಿಂದ ಸರ್ಕಾರಕ್ಕೆ ಬರಬೇಕಾದ ರಾಜಧನ ಬಡ್ಡಿ ಸಮೇತ ವಸೂಲು ಮಾಡಬೇಕು. ಜಿಲ್ಲಾದ್ಯಂತ ಚಿರತೆಗಳ ಹಾವಳಿ ಹೆಚ್ಚಾಗಿದ್ದು, ಅರಣ್ಯ ಇಲಾಖೆಯವರು ಅವುಗಳ ಬಗ್ಗೆ ಎಚ್ಚರಿಕೆ ವಹಿಸಿ ಜನಸಾಮಾನ್ಯರಿಗೆ ತೊಂದರೆ ಆಗದಂತೆ ನಿಗಾ ವಹಿಸಬೇಕು. ತಾಲೂಕುಗಳ ಕಂದಾಯ ಇಲಾಖೆಯಿಂದ ರೈತರ ಕೆಲಸ ಕಾರ್ಯ ಸಕಾಲದಲ್ಲಿ ಆಗುತ್ತಿಲ್ಲ. ಆದ್ದರಿಂದ ತ್ವರಿತವಾಗಿ ಸರ್ವೇ ಕಾರ್ಯ, ಪೋಡಿ, ಖಾತೆ ಬದಲಾವಣೆ, ದುರಸ್ಥಿ ಸೇವೆ ಮಾಡಲು ಆಯಾಯ ವಿಭಾಗದ ಸಿಬ್ಬಂದಿಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು ಎಂದು ಆಗ್ರಹಿಸಿದರು.
ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ಕೇಂದ್ರ ಸರ್ಕಾರ ಕನಿಷ್ಠ ಬೆಂಬಲ ಬೆಲೆಯನ್ನು ಕಾನೂನಾತ್ಮಕವಾಗಿ ಜಾರಿಗೊಳಿಸಬೇಕು. ಕರಾಳ ಕಾಯ್ದೆಗಳಾದ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ, ವಿದ್ಯುತ್ ಖಾಸಗೀಕರಣ, ಗೋಹತ್ಯೆ ನಿಷೇಧ ಮತ್ತು ಸಂರಕ್ಷಣಾ ಕಾಯ್ದೆಗಳನ್ನು ರದ್ದುಪಡಿಸಬೇಕು. ಬ್ಯಾಂಕುಗಳಲ್ಲಿ ಒತ್ತೆ ಇಟ್ಟಿರುವ ಒಡವೆಗಳನ್ನು ನವೀಕರಿಸಲು ಬಡ್ಡಿ ಪಡೆದು ನವೀಕರಿಸುವಂತೆಯೂ ಸಾಮಾಜಿಕ ಭದ್ರತಾ ಯೋಜನೆಗಳಾದ ವಿಧವಾ ವೇತನ, ಅಂಗವಿಕಲರ ವೇತನ, ಗೃಹಲಕ್ಷ್ಮೀ ಹಣ, ಕಿಸಾನ್ ಸಮ್ಮಾನ್ ಹಣವನ್ನು ಸಾಲಗಳಿಗೆ ಹೊಂದಾಣಿಕೆ ಮಾಡಬಾರದು. ಈ ಸಂಬಂಧ ಕೇಂದ್ರ ಸರ್ಕಾರ ಆರ್‌ಬಿಐನ ಅಧೀನದಲ್ಲಿರುವ ಎಲ್ಲ ಬ್ಯಾಂಕುಗಳಿಗೆ ನಿರ್ದೇಶನ ನೀಡಬೇಕು. ಮೈಕ್ರೋ ೈನಾನ್ಸ್ ಕಂಪನಿಗಳಿಂದ ಸಾರ್ವಜನಿಕರಿಗೆ ಆಗುತ್ತಿರುವ ಕಿರುಕುಳ ಶೋಷಣೆಗಳನ್ನು ತಡೆಗಟ್ಟಲು ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.
ಕಬ್ಬಿಗೆ ಸಂಬಂಧಿಸಿದಂತೆ ಈ ಹಿಂದೆ ಇದ್ದ ಸರ್ಕಾರ ಘೋಷಣೆ ಮಾಡಿದ್ದ 150 ರೂ. ಜತೆಗೆ ಈಗಿರುವ ಸರ್ಕಾರ ಘೋಷಿಸಿರುವ 100 ರೂ.ಗಳನ್ನು ಪಾವತಿಸಲು ಸಂಬಂಧಪಟ್ಟ ಕಾರ್ಖಾನೆಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು. ಕೆ.ಆರ್.ಎಸ್ ಹಾಗೂ ಹೇಮಾವತಿ ಅಚ್ಚುಕಟ್ಟು ಪ್ರದೇಶದ ಎಲ್ಲ ನಾಲೆಗಳಿಗೆ ಇನ್ನು ಎರಡು ಕಟ್ಟು ನೀರನ್ನು ಬಿಡುಗಡೆ ಮಾಡಿ ಹಾಲಿ ಬೆಳೆದಿರುವ ಬೆಳೆಗಳ ರಕ್ಷಣೆ ಮಾಡಬೇಕು. ಹಾಗೂ ಜನ-ಜಾನುವಾರುಗಳ ಕುಡಿಯಲು ಕೆರೆ ಕಟ್ಟೆಗಳಿಗೆ ನೀರು ತುಂಬಿಸಬೇಕು. ಶಿಂಷಾ ಎಡ ಮತ್ತು ಬಲದಂತೆ ನಾಲೆಗಳಿಗೂ ನೀರು ಹರಿಸುವಂತೆ ಆಗ್ರಹಿಸಿದರು.
ಪಡಿತರ ವಿತರಣಾ ವ್ಯವಸ್ಥೆಯಲ್ಲಿ ಕೇವಲ ಅಕ್ಕಿಯನ್ನು ಮಾತ್ರ ವಿತರಣೆ ಮಾಡದೆ ರಾಗಿ ಬೆಳೆಯುವ ಕಡೆಗಳಲ್ಲಿ ರಾಗಿಯನ್ನು ಜೋಳ ಬೆಳೆಯುವ ಕಡೆಗಳಲ್ಲಿ ಜೋಳ ಸೇರಿದಂತೆ ಇತರೆ ಧಾನ್ಯಗಳನ್ನು ವಿತರಿಸುವಂತೆ ಕೃಷಿ ಸಚಿವರೊಂದಿಗೆ ನಡೆದ ಸಭೆಯಲ್ಲಿ ಒತ್ತಾಯಿಸಿದ್ದೇವೆ. ಇದಕ್ಕೆ 9600 ಕೋಟಿ ರೂ. ಅನುದಾನ ಅಗತ್ಯವಿದೆ ಎಂದಿದ್ದಾರೆ. ನಮ್ಮ ಲೆಕ್ಕಾಚಾರದಲ್ಲಿ 6,200 ಕೋಟಿ ರೂ. ಬೇಕಾಗುತ್ತದೆ. ರೈತರಿಂದಲೇ ಖರೀದಿ ಮಾಡಿ ಅದನ್ನು ವಿತರಣೆ ಮಾಡಬೇಕು. ಅದು ಬಿಟ್ಟು ಇವರು ಆಂಧ್ರಪ್ರದೇಶದಿಂದ ಖರೀದಿ ಮಾಡಿ ಇಲ್ಲಿ ವಿತರಣೆ ಮಾಡುವಂತಹ ವ್ಯವಸ್ಥೆ ರೂಪಿಸಿದ್ದಾರೆ. ಇದರಿಂದ ಹೆಚ್ಚುವರಿ ವೆಚ್ಚ ಬರುತ್ತದೆ ಎಂದು ವಿವರಿಸಿದರು.
ನಿವೃತ್ತ ಪ್ರಾಧ್ಯಾಪಕ ಡಾ.ಹುಲ್ಕೆರೆ ಮಹದೇವು ಮಾತನಾಡಿ, ಸರ್ಕಾರ ಕಾವೇರಿ ಜಲಾಶಯಗಳಿಂದ ಬೆಂಗಳೂರಿನ ಜನರಿಗೆ ನೀರೊದಗಿಸುವ ಯೋಜನೆಗಳನ್ನು ರೂಪಿಸುತ್ತಿರುವುದರಿಂದ ಇಲ್ಲಿನ ರೈತರಿಗೆ ತೊಂದರೆಯಾಗುತ್ತದೆ. ಕೃಷಿ ಉಪಯೋಗಕ್ಕಾಗಿ ಕೆ.ಆರ್.ಎಸ್. ಅಣೆಕಟ್ಟೆ ನಿರ್ಮಾಣ ಮಾಡಲಾಗಿದೆ ಎಂಬುದನ್ನು ಇಂದಿನ ರಾಜಕಾರಣಿಗಳು ಮರೆತಂದಿದೆ. ಈ ಬಗ್ಗೆ ರೈತರು ಆಕ್ಷೇಪ ಎತ್ತಿದರೆ ಇವರು ಕುಡಿಯುವ ನೀರನ್ನೂ ಕೊಡದವರು ಎಂಬ ಅಪವಾದ ಹೊರಿಸುತ್ತಾರೆ ಎಂದು ಕಿಡಿಕಾರಿದರು.
ರೈತರು ಸಹ ತಮ್ಮ ಜಮೀನುಗಳಲ್ಲಿ ಎಲ್ಲ ರೀತಿಯ ಮರಗಳನ್ನು ಕಡಿದು ಹಾಕಿ ಕೇವಲ ತೆಂಗಿನ ಮರಗಳನ್ನು ಬೆಳೆಸಲು ಮಾತ್ರ ಆಧ್ಯತೆ ನೀಡುತ್ತಾರೆ. ಇದು ಸರಿಯಾದ ಬೆಳವಣಿಗೆ ಅಲ್ಲ. ರೈತನಿಗೆ ಎಲ್ಲ ರೀತಿಯ ಮರಗಳೂ ಅವಶ್ಯಕ. ಹಾಗಾಗಿ ಪ್ರತಿಯೊಬ್ಬ ರೈತರು ತಮ್ಮ ಜಮೀನುಗಳಲ್ಲಿ ಎಲ್ಲ ರೀತಿಯ ಮರಗಳನ್ನೂ ಬೆಳೆಯುವಂತೆ ಕರೆ ನೀಡಿದರು.
ಪ್ರತಿಭಟನೆಯಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ, ಯು.ಸಿ.ಉಮೇಶ, ಲತಾ ಶಂಕರ್, ವೈ.ಪಿ.ಮಂಜುನಾಥ್, ಜ್ಯೋತಿ, ಅನಿತಾ, ಕುಮಾರ್, ಬೋರಾಪುರ ಶಂಕರೇಗೌಡ, ಎಂ.ಎಸ್.ವಿಜಯಕುಮಾರ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net