ಮಳವಳ್ಳಿ ಪಟ್ಟಣದಲ್ಲಿ ಬೃಹತ್ ರಕ್ತದಾನ ಶಿಬಿರ ಆಯೋಜನೆ ಹಿನ್ನೆಲೆಯಲ್ಲಿ ಪಟ್ಟಣದ ಪ್ರಮುಖ ವೃತ್ತದಲ್ಲಿ ಪ್ರಚಾರ ಫಲಕ ದ್ವಾರವನ್ನು ಕುಂದೂರು ರಸಸಿದ್ದೇಶ್ವರ ಮಠದ ಶ್ರೀ ನಂಜುಂಡ ಸ್ವಾಮೀಜಿ ಉದ್ಘಾಟಿಸಿದರು. ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸಮಾಜ ಸೇವಕರು ಇದ್ದರು.
ಸ್ವಾತಂತ್ರ್ಯ ದಿನದ ಅಂಗವಾಗಿ ಮಳವಳ್ಳಿ ಪಟ್ಟಣದಲ್ಲಿ ಮಳವಳ್ಳಿ ಟೀಮ್ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಆ.15ರಂದು ನಿರಂತರ 26 ಗಂಟೆಗಳ ಕಾಲ ಹಮ್ಮಿಕೊಂಡಿರುವ ಬೃಹತ್ ರಕ್ತದಾನ ಶಿಬಿರದ ಪ್ರಚಾರ ಫಲಕದ ಪ್ರವೇಶ ದ್ವಾರವನ್ನು ಶನಿವಾರ ಉದ್ಘಾಟಿಸಲಾಯಿತು.
ಶಿಬಿರದ ಪ್ರಚಾರಕ್ಕೆ ಸಿದ್ಧಪಡಿಸಿರುವ ಬೃಹತ್ ಪ್ರವೇಶ ದ್ವಾರವನ್ನು ಕುಂದೂರು ರಸಸಿದ್ದೇಶ್ವರ ಮಠದ ಶ್ರಿ ನಂಜುಂಡ ಸ್ವಾಮೀಜಿ ಉದ್ಘಾಟಿಸಿ ಮಾತನಾಡಿ, ರಕ್ತದಾನ ಮಹಾದಾನ. ಒಬ್ಬ ವ್ಯಕ್ತಿ ನೀಡುವ ರಕ್ತದಿಂದ ನಾಲ್ಕು ಜೀವಗಳನ್ನು ಉಳಿಸಬಹುದು. ಸ್ವಾತಂತ್ರ್ಯ ದಿನದಂದು ದೇಶಕ್ಕಾಗಿ ರಕ್ತ ಕೊಟ್ಟ ಯೋಧರನ್ನು ನಾವು ಸ್ಮರಿಸುತ್ತೇವೆ. ಅದೇ ದಿನ ರೋಗಿಗಳಿಗಾಗಿ ರಕ್ತ ನೀಡಿದರೆ ನಿಜವಾದ ದೇಶಸೇವೆ ಮಾಡಿದಂತಾಗುತ್ತದೆ ಎಂದು ತಿಳಿಸಿದರು.
ಮಳವಳ್ಳಿ ಟೀಮ್‌ನ ಯುವಕರು 26 ಗಂಟೆಗಳ ಕಾಲ ನಿರಂತರ ಶಿಬಿರ ಮಾಡುವ ಮೂಲಕ ಮಾನವೀಯತೆಗೆ ಹೊಸ ಮಾದರಿ ಹಾಕಿದ್ದಾರೆ ಎಂದು ಪ್ರಶಂಸಿದರು.
ಟೀಮ್‌ನ ಪದಾಧಿಕಾರಿಗಳು ಮಾತನಾಡಿ, ಆ.14 ರಾತ್ರಿ 10 ಗಂಟೆಯಿಂದ ಆ,15ರ ರಾತ್ರಿ 12 ಗಂಟೆಯವರೆಗೆ ನಿರಂತರವಾಗಿ ಶಿಬಿರ ನಡೆಯಲಿದೆ. 2026 ಯುನಿಟ್ ರಕ್ತ ಸಂಗ್ರಹಿಸುವ ಗುರಿ ಹೊಂದಿದ್ದೇವೆ ಎಂದು ಮಾಹಿತಿ ನೀಡಿದರು.
ಶಿಬಿರದಲ್ಲಿ ರಕ್ತ ನೀಡುವ ಎಲ್ಲ ದಾನಿಗಳಿಗೆ ಪ್ರಮಾಣಪತ್ರ ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಗುವುದು ಎಂದರು.
ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸಮಾಜ ಸೇವಕರು, ಯುವಕರು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.