ಪೌರಕಾರ್ಮಿಕರಿಗೆ ವಿಮಾ ಸೌಲಭ್ಯ ಕಲ್ಪಿಸಿ: ಜಿಲ್ಲಾಧಿಕಾರಿ ಡಾ.ಕುಮಾರ ಸೂಚನೆ

ಮಂಡ್ಯದಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ ಅಧ್ಯಕ್ಷತೆಯಲ್ಲಿ ಮ್ಯಾನ್ಯುಯಲ್ ಸ್ಕಾೃವೆಂಜರ್‌ಗಳ ಜಾಗೃತಿ ಸಮಿತಿ ಸಭೆ ಆಯೋಜಿಸಲಾಗಿತ್ತು.
ಮಂಡ್ಯದಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ ಅಧ್ಯಕ್ಷತೆಯಲ್ಲಿ ಮ್ಯಾನ್ಯುಯಲ್ ಸ್ಕಾೃವೆಂಜರ್‌ಗಳ ಜಾಗೃತಿ ಸಮಿತಿ ಸಭೆ ಆಯೋಜಿಸಲಾಗಿತ್ತು.
Published on

ಪ್ರಮುಖ ಮುಖ್ಯಾಂಶಗಳು

  • ಮ್ಯಾನ್ಯುಯಲ್ ಸ್ಕಾೃವೆಂಜರ್‌ಗಳ ಜಾಗೃತಿ ಸಮಿತಿ ಸಭೆ

ಮಂಡ್ಯ:

ನಗರದ ಸ್ವಚ್ಛತೆ ಹಾಗೂ ಸಾರ್ವಜನಿಕ ಆರೋಗ್ಯ ಕಾಪಾಡುವಲ್ಲಿ ಪೌರಕಾರ್ಮಿಕರು ನಿರ್ವಹಿಸುತ್ತಿರುವ ಸೇವೆ ಅತ್ಯಂತ ಮಹತ್ವದ್ದಾಗಿದೆ. ಅವರ ಆರೋಗ್ಯ, ಸುರಕ್ಷತೆ ಹಾಗೂ ಸಾಮಾಜಿಕ ಭದ್ರತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಕುಮಾರ ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮೊದಲನೇ ತ್ರೈಮಾಸಿಕ ಮ್ಯಾನ್ಯುಯಲ್ ಸ್ಕಾೃವೆಂಜರ್ ವೃತ್ತಿ ನಿಷೇಧ ಮತ್ತು ಅವರ ಪುನರ್ವಸತಿ ಕಾಯ್ದೆ-2013 ಹಾಗೂ ನಿಯಮಗಳು-2013ರನ್ವಯ ಆಯೋಜಿಸಿದ್ದ ಜಿಲ್ಲಾಮಟ್ಟದ ಮ್ಯಾನ್ಯುಯಲ್ ಸ್ಕಾೃವೆಂಜರ್‌ಗಳ ಜಾಗೃತಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪೌರಕಾರ್ಮಿಕರಿಗೆ ನಿಯಮಿತವಾಗಿ ಆರೋಗ್ಯ ತಪಾಸಣಾ ಶಿಬಿರಗಳನ್ನು ಆಯೋಜಿಸಿ, ಅಗತ್ಯ ಆರೋಗ್ಯ ಸೇವೆ ಒದಗಿಸುವುದರ ಜತೆಗೆ ಸೂಕ್ತ ವಿಮಾ ಸೌಲಭ್ಯ ಕಲ್ಪಿಸಲು ಕ್ರಮ ವಹಿಸಬೇಕು. ಕಾರ್ಮಿಕರ ಆರೋಗ್ಯದ ಕುರಿತು ನಿರ್ಲಕ್ಷೃ ವಹಿಸದೆ, ಅವರ ಆರೋಗ್ಯ ಸ್ಥಿತಿಯನ್ನು ನಿಯಮಿತವಾಗಿ ಮೇಲ್ವಿಚಾರಣೆ ಮಾಡಬೇಕು ಎಂದು ಸೂಚಿಸಿದರು.
ಮ್ಯಾನ್ಯುಯಲ್ ಸ್ಕಾೃವೆಂಜರ್‌ಗಳಿಗೆ ಸೂಕ್ತ ವಸತಿ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಬಹುಮಹಡಿ ಕಟ್ಟಡ ನಿರ್ಮಿಸಿ ವಿತರಿಸುವುದು ಹಾಗೂ ಅರ್ಹ ಫಲಾನುಭವಿಗಳಿಗೆ ಹಕ್ಕುಪತ್ರ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಅಂತೆಯೇ ಕೆಲಸ ನಿರ್ವಹಿಸಲು ಅಗತ್ಯವಿರುವ ಸುರಕ್ಷತಾ ಪರಿಕರಗಳನ್ನು ಕಡ್ಡಾಯವಾಗಿ ವಿತರಿಸಬೇಕು. ಜತೆಗೆ ಮೂಲ ಸೌಕರ್ಯಗಳು, ಶುದ್ಧ ಕುಡಿಯುವ ನೀರು, ಶೌಚಗೃಹ ಹಾಗೂ ವಿಶ್ರಾಂತಿ ಗೃಹಗಳಂತಹ ಅಗತ್ಯ ಸೌಲಭ್ಯ ಕಲ್ಪಿಸಬೇಕು ಎಂದು ನಿರ್ದೇಶನ ನೀಡಿದರು.
ಗೃಹ ಭಾಗ್ಯ ಯೋಜನೆಯಡಿ ಮಂಜೂರಾಗಿರುವ ವಸತಿ ಸೌಲಭ್ಯವನ್ನು ಫಲಾನುಭವಿಗಳು ಸ್ವತಃ ಬಳಸಿಕೊಳ್ಳಬೇಕು. ವಸತಿ ಕಟ್ಟಡಗಳನ್ನು ಬಾಡಿಗೆಗೆ ನೀಡುತ್ತಿರುವುದು ಕಂಡುಬಂದಲ್ಲಿ ಅಂತಹವರ ವಿರುದ್ಧ ನಿಯಮಾನುಸಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ನೇರ ಪಾವತಿ ಹಾಗೂ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರಿಗೆ ನಿಗದಿತ ಸಮಯಕ್ಕೆ ವೇತನ ಪಾವತಿಯಾಗುವಂತೆ ಸಂಬಂಧಿಸಿದ ಅಧಿಕಾರಿಗಳು ಕ್ರಮವಹಿಸಬೇಕು. ವೇತನ ಪಾವತಿಯಲ್ಲಿ ಯಾವುದೇ ರೀತಿಯ ವಿಳಂಬವಾಗದಂತೆ ನಿರಂತರ ಮೇಲ್ವಿಚಾರಣೆ ನಡೆಸಬೇಕು ಎಂದು ಸೂಚಿಸಿದರು.
ತಾಲೂಕು ಮಟ್ಟದಲ್ಲಿ ಪೌರಕಾರ್ಮಿಕರ ಕುಂದುಕೊರತೆ ಆಲಿಸಲು ನಿಯಮಿತವಾಗಿ ಸಭೆ ನಡೆಸಬೇಕು. ಕಾರ್ಮಿಕರ ಸಮಸ್ಯೆ ಆಲಿಸಿ, ಸಾಧ್ಯವಾದಷ್ಟು ಸ್ಥಳದಲ್ಲಿಯೇ ಪರಿಹಾರ ಒದಗಿಸುವ ಮೂಲಕ ಅವರಲ್ಲಿ ಆಡಳಿತದ ಮೇಲಿನ ವಿಶ್ವಾಸ ಹೆಚ್ಚಿಸಬೇಕು. ಪೌರಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸುವಾಗ ಅಧಿಕಾರಿಗಳು ಮಾನವೀಯತೆ, ಬದ್ಧತೆ ಹಾಗೂ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು. ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರಿಗೆ ಇಎಸ್‌ಐ ಹಾಗೂ ಪಿಎಫ್ ಮೊತ್ತವನ್ನು ನಿಯಮಿತವಾಗಿ ಪಾವತಿಸಲಾಗುತ್ತಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಕಾರ್ಮಿಕರ ವೇತನ, ಸಾಮಾಜಿಕ ಭದ್ರತೆ ಹಾಗೂ ಕಾನೂನುಬದ್ಧ ಹಕ್ಕುಗಳಿಂದ ಯಾವುದೇ ಕಾರಣಕ್ಕೂ ವಂಚಿತರಾಗದಂತೆ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಸಭೆಯಲ್ಲಿ ಜಿಪಂ ಉಪಕಾರ್ಯದರ್ಶಿ ಪಿ.ಲಕ್ಷ್ಮೀ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಚಂದ್ರಶೇಖರ್, ತಹಸೀಲ್ದಾರ್ ವಿಶ್ವನಾಥ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಶ್ರೀನಿವಾಸ್ ಮತ್ತು ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net