ಉತ್ಪಾದಕರು ಮತ್ತು ಗ್ರಾಹಕರ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ
ಮಂಡ್ಯ:
ಮನ್‌ಮುಲ್‌ನಲ್ಲಿ ಸಿದ್ಧಪಡಿಸುವ ಹಾಲಿನಪುಡಿ ಸೇರಿದಂತೆ ನಂದಿನಿ ಬ್ರಾೃಂಡ್‌ನ ಉತ್ಪನ್ನಗಳಲ್ಲಿ ಯಾವುದೇ ರೀತಿಯ ಕಲಬೆರಕೆಯಾಗಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಬಿತ್ತರವಾಗುತ್ತಿರುವ ವರದಿ ಸತ್ಯಕ್ಕೆ ದೂರ ಎಂದು ಮನ್‌ಮುಲ್ ಅಧ್ಯಕ್ಷ ಎಂ.ಕೆ.ಹರೀಶ್‌ಬಾಬು ಸ್ಪಷ್ಟಪಡಿಸಿದರು.
ಕೆಎಂಎಫ್ ಉತ್ಪನ್ನಗಳು ಕಲಬೆರಕೆಯಾಗುತ್ತಿವೆ ಎಂಬ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಅಪಪ್ರಚಾರ ಮಾಡಲಾಗುತ್ತಿದೆ. ಇದರಿಂದ ಉತ್ಪಾದಕರು ಮತ್ತು ಗ್ರಾಹಕರ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಗಳಿವೆ ಎಂದು ಸುದ್ದಿಗೋಷ್ಠಿಯಲ್ಲಿ ಆತಂಕ ವ್ಯಕ್ತಪಡಿಸಿದರು.
ಮಂಡ್ಯ ಜಿಲ್ಲಾ ಹಾಲು ಒಕ್ಕೂಟದಲ್ಲಿ ಉತ್ಪಾದನೆಯಾಗುವ ಹಾಲಿನ ಪುಡಿ ಮನ್‌ಮುಲ್ ಆವರಣದಲ್ಲಿರುವ ಗೋದಾಮಿನಲ್ಲಿ ದಾಸ್ತಾನು ಮಾಡಿ ಹೆಚ್ಚಿಗೆಯಾದಲ್ಲಿ ಬಾಡಿಗೆ ಆಧಾರದ ಖಾಸಗಿ ಗೋದಾಮು ಪಡೆದು ಅಲ್ಲಿ ದಾಸ್ತಾನು ಮಾಡಲಾಗುತ್ತದೆ. ಇದಕ್ಕೆ ತನ್ನದೇ ಆದ ನಿಯಮಗಳೂ ಇವೆ. ಅದೇ ರೀತಿ ಗೆಜ್ಜಲಗೆರೆ ಕೈಗಾರಿಕಾ ಪ್ರದೇಶದಲ್ಲಿರುವ ಮಾಸ್ಟರ್ ಇನ್ಸುಲೇಷನ್ ಇಂಕ್ ಕಂಪನಿಗೆ ನಿಯಮಾನುಸಾರ ಗೋದಾಮನ್ನು ಬಾಡಿಗೆ ಆಧಾರದ ಮೇಲೆ ಪಡೆದು ಅಲ್ಲಿ ಹಾಲಿನ ಪುಡಿಯನ್ನು ದಾಸ್ತಾನು ಮಾಡಲಾಗಿತ್ತು ಎಂದರು.
ಮನ್‌ಮುಲ್ ಆವರಣದಲ್ಲಿರುವ ಗೋದಾಮಿನಲ್ಲಿ ದಾಸ್ತಾನು ಖಾಲಿಯಾದ ಕಾರಣ ಖಾಸಗಿ ಗೋದಾಮಿಗೆ ನೀಡುವ ಬಾಡಿಗೆಯನ್ನು ತಪ್ಪಿಸುವ ಸಲುವಾಗಿ ಅಲ್ಲಿಂದ ಹಾಲಿನ ಪುಡಿ ದಾಸ್ತಾನನ್ನು ಎತ್ತುವಳಿ ಮಾಡಲು ಯೋಜಿಸಲಾಗಿತ್ತು. ಅದರಂತೆ ಗೋದಾಮಿನ ಮಾಲೀಕರಿಗೆ ತಿಳಿವಳಿಕೆ ಪತ್ರ ನೀಡಲಾಗಿತ್ತು. ಅದರಂತೆ ಅಲ್ಲಿಗೆ ತೆರಳಿದ ನಮ್ಮ ಅಧಿಕಾರಿಗಳು ಪರಿಶೀಲನೆ ನಡೆಸಿದ ವೇಳೆ ನಮ್ಮಲ್ಲಿ ಉತ್ಪಾದನೆಯಾದ ಹಾಲಿನ ಪೌಡರ್ ಚೀಲದಲ್ಲಿ ಒಂದು ಸ್ಟಿಚ್ ಹಾಕಿರುತ್ತದೆ. ಅಲ್ಲಿ ದಾಸ್ತಾನಾಗಿದ್ದ ಚೀಲಗಳಲ್ಲಿ ಎರಡು ಸ್ಟಿಚ್ ಹಾಕಲಾಗಿದೆ. ಇದು ಅನುಮಾನಕ್ಕೆ ಕಾರಣವಾಗಿದ್ದು, ಪರಿಶೀಲನೆ ನಡೆಸಿದ ವೇಳೆ ಕಳಪೆ ಗುಣಮಟ್ಟದ 55.475 ಮೆ.ಟನ್ ಹಾಲಿನ ಪುಡಿ ಚೀಲಗಳು ಕಂಡುಬಂದವು ಎಂದು ವಿವರಿಸಿದರು.
ನಮ್ಮ ಪ್ರಯೋಗಾಲಯದಲ್ಲಿ ಪರಿಶೀಲನೆ ನಡೆಸಿದ ವೇಳೆ ಹಾಲಿನ ಪುಡಿ ಕಳಪೆ ಗುಣಮಟ್ಟದ್ದಾಗಿದ್ದು, ಇವುಗಳನ್ನು ಮಾರ್ಕ್ ಮಾಡಿ ಅದನ್ನು ಮಾರುಕಟ್ಟೆಗೆ ಬಿಡುಗಡೆ ಮಾಡದಂತೆ ತಡೆ ಹಿಡಿಯಲಾಯಿತು. ಈ ಬಗ್ಗೆ ಎಫ್‌ಎಸ್‌ಎಸ್‌ಎಎಲ್‌ಗೆ ಗುಣಮಟ್ಟ ತಪಾಸಣೆಗೆ ಕಳುಹಿಸಲಾಗಿತ್ತು. ಈ ಮಧ್ಯೆ ಗೋದಾಮಿನ ಮಾಲೀಕನ ವಂಚನೆ, ಮೋಸವನ್ನು ಗಮನಿಸಿ ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಯಿತು. ಆತ ಪ್ರಕರಣ ದಾಖಲಾಗುತ್ತಿದ್ದಂತೆ ನಾಪತ್ತೆಯಾಗಿದ್ದ. ಇತ್ತ ಎಫ್‌ಎಸ್‌ಎಸ್‌ಎಎಲ್‌ನಿಂದ ಕಳಪೆ ಗುಣಮಟ್ಟದ ಹಾಲಿನ ಪುಡಿ ಎಂಬ ವರದಿಯೂ ಇತ್ತೀಚೆಗೆ ಬಂತು ಎಂದು ತಿಳಿಸಿದರು.
ಕಳಪೆ ಗುಣಮಟ್ಟದ ಹಾಲಿನ ಪುಡಿಯನ್ನು ಯಾವುದೇ ಕಾರಣಕ್ಕೂ ಮಾರುಕಟ್ಟೆಗೆ ಬಿಡುಗಡೆ ಮಾಡಿಲ್ಲ. ಆದರೆ, ಕೆಲವರು ನಂದಿನಿ ಉತ್ಪನ್ನಗಳಿಗೆ ಕೆಟ್ಟ ಹೆಸರುವ ತರುವ ಉದ್ದೇಶದಿಂದ ಸಾಮಾಜಿಕ ಜಾಲತಾಣದಲ್ಲಿ ಇಲ್ಲ ಸಲ್ಲದ ಆರೋಪಗಳನ್ನು ಮಾಡಿ ಗುಣಮಟ್ಟ ಸರಿಯಿಲ್ಲ ಎಂಬಂತೆ ಮಾಹಿತಿ ಬಿತ್ತರಿಸಿದ್ದಾರೆ. ಇದು ಸತ್ಯಕ್ಕೆ ದೂರವಾದದ್ದು. ನಂದಿನಿ ಉತ್ಪನ್ನಗಳ ಗುಣಮಟ್ಟ ಉತ್ತಮವಾಗಿರುವ ಕಾರಣ ತಿರುಪತಿಯಂತಹ ಧಾರ್ಮಿಕ ಕ್ಷೇತ್ರಕ್ಕೆ ಮನ್‌ಮುಲ್‌ನಿಂದಲೇ ತುಪ್ಪವನ್ನು ಕಳುಹಿಸುತ್ತಿದ್ದೇವೆ. ಅದೂ ಸಹ ಎಫ್‌ಎಸ್‌ಎಸ್‌ಎಎಲ್‌ನಲ್ಲೂ ಉತ್ತಮ ಗುಣಮಟ್ಟದ್ದಾಗಿದೆ ಎಂದು ವರದಿಯೂ ಬಂದಿದೆ. ಪರಿಸ್ಥಿತಿ ಹೀಗಿರುವಾಗ ಜಾಲತಾಣಗಳ ವರದಿಗಳನ್ನು ನಂಬಬಾರದು ಎಂದು ಗ್ರಾಹಕರಲಿ ಮನವಿ ಮಾಡಿದರು.
ಗೋದಾಮಿನಲ್ಲಿ ನಡೆದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ವಿರುದ್ದ ಪೊಲೀಸರಿಗೆ ದೂರು ನೀಡಿದ್ದು, ವಿಚಾರಣಾ ಹಂತದಲ್ಲಿದೆ. ಆತನ ಪರವಾನಗಿಯನ್ನೂ ರದ್ದುಪಡಿಸಿ ಕಪ್ಪು ಪಟ್ಟಿಗೆ ಸೇರಿಸುವಂತೆ ಕೆ.ಎಂ.ಎಫ್. ದೂರು ನೀಡಲಾಗಿದೆ ಎಂದು ತಿಳಿಸಿದರು.
ಮನ್‌ಮುಲ್ ವ್ಯವಸ್ಥಾಪಕ ನಿರ್ದೇಶಕ ಎಚ್.ಆರ್.ರಘು, ನಿರ್ದೇಶಕರಾದ ಎನ್.ಅಪ್ಪಾಜಿಗೌಡ, ಯು.ಸಿ.ಶಿವಕುಮಾರ್ (ಶಿವಪ್ಪ), ಲಕ್ಷ್ಮೀನಾರಾಯಣ್, ಬೋರೇಗೌಡ, ಕೃಷ್ಣೇಗೌಡ ಇತರರಿದ್ದರು.