ಮನ್‌ಮುಲ್ ಹಾಲಿನ ಪುಡಿ ಕಲಬೆರಕೆ

 ಜಿಲ್ಲಾ ಹಾಲು ಒಕ್ಕೂಟ
ಜಿಲ್ಲಾ ಹಾಲು ಒಕ್ಕೂಟ
Published on

ಪ್ರಮುಖ ಮುಖ್ಯಾಂಶಗಳು

  • ಗೋದಾಮು ಮಾಲೀಕರ ವಿರುದ್ಧ ದೂರು
  • 1,43,63,602 ರೂ. ಭರಿಸುವುದಾಗಿ ನೀಡಿದ್ದ ಚೆಕ್‌ಗಳು ಬೌನ್ಸ್
ಮದ್ದೂರು: ಗೆಜ್ಜಲಗೆರೆ ಕೈಗಾರಿಕಾ ಪ್ರದೇಶದ ಮೆ.ಮಾಸ್ಟರ್ ಇಲ್ಯೂಷನ್ ಐಎನ್‌ಸಿ ಗೋದಾಮು-1ರಲ್ಲಿ ದಾಸ್ತಾನು ಮಾಡಿದ್ದ ಜಿಲ್ಲಾ ಹಾಲು ಒಕ್ಕೂಟದಲ್ಲಿ (ಮನ್‌ಮುಲ್) ಉತ್ಪಾದಿಸಿದ್ದ ಹಾಲಿನ ಪುಡಿಯಲ್ಲಿ ಕಲಬೆರಕೆ ಮಾಡಿರುವ ಆರೋಪ ಕೇಳಿ ಬಂದಿದೆ.
ಈ ಸಂಬಂಧ ಗೋದಾಮು ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನ್‌ಮುಲ್ ಅಧಿಕಾರಿ ಜಿ. ಶ್ರೀಕಾಂತ್, ಮದ್ದೂರು ಪೊಲೀಸ್ ಠಾಣೆಗೆ ನೀಡಿರುವ ದೂರು ಆಧಾರದಲ್ಲಿ ಗೋದಾಮು ಮಾಲೀಕರಾದ ಎಸ್.ಅನಂತ್, ಎಸ್.ಶ್ರೀಕಾಂತ್ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಏನಿದು ಘಟನೆ?: ಮನ್‌ಮುಲ್‌ನಲ್ಲಿ ಮೆಗಾಡೇರಿಯಲ್ಲಿರುವ 45 ಮೆಟ್ರಿಕ್ ಟನ್ ಸಾಮರ್ಥ್ಯದ ಹಾಲಿನ ಪುಡಿ ಘಟಕದಲ್ಲಿ ಪ್ರತಿದಿನ ಅಂದಾಜು 25ರಿಂದ 30 ಮೆಟ್ರಿಕ್ ಟನ್ ಕೆನೆರಹಿತ/ಕೆನೆಭರಿತ ಹಾಲಿನ ಪುಡಿ ಉತ್ಪಾದಿಸಲಾಗುತ್ತಿದೆ. ಒಕ್ಕೂಟದಲ್ಲಿ 2 ಸಾವಿರ ಮೆಟ್ರಿಕ್ ಟನ್ ಹಾಲಿನ ಪುಡಿ ದಾಸ್ತಾನು ಮಾಡಲು ಗೋದಾಮು ಸ್ಥಳಾವಕಾಶವಿದೆ. ಆದ್ದರಿಂದ ಮೆ.ಮಾಸ್ಟರ್ ಇಲ್ಯೂಷನ್ 2 ಗೋದಾಮಿನಲ್ಲಿ 2025ರ ಅಕ್ಟೋಬರ್ 1ರಿಂದ 2027ರ ಸೆಪ್ಟೆಂಬರ್ 30ರವರೆಗೆ ಬಾಡಿಗೆ ಪಡೆಯಲಾಗಿದೆ.
ಮಾರ್ಚ್ 27ರಂದು ಅಧಿಕಾರಿಗಳ ತಂಡ ಗೋದಾಮಿಗೆ ಭೇಟಿ ನೀಡಿ ದಾಸ್ತಾನು ಮಾಡಿದ್ದ ಕೆನೆರಹಿತ ಹಾಲಿನಪುಡಿಯ ಪರಿಶೀಲನೆ ನಡೆಸಿ, ಒಟ್ಟು 3,61,450 ಕೆಜಿ ಹಾಲಿನ ಪುಡಿಯನ್ನು ಎತ್ತುವಳಿ ಮಾಡಲು ಕ್ರಮ ವಹಿಸಲಾಗಿತ್ತು.
ಆದರೆ, ಗೋದಾಮು-1ರಲ್ಲಿ 90 ಮೆಟ್ರಿಕ್ ಟನ್ ಹಾಲಿನ ಪುಡಿ ದಾಸ್ತಾನಿನು ಕಡಿಮೆ ಬಂದಿದೆ. ಈ ಬಗ್ಗೆ ಎಫ್‌ಜಿಎಸ್ ಶಾಖೆ ಮುಖ್ಯಸ್ಥರು ವ್ಯವಸ್ಥಾಪಕ ನಿರ್ದೇಶಕರಿಗೆ ಮಾಹಿತಿ ನೀಡಿದ ಮೇರೆಗೆ ಕಡಿಮೆಯಾಗಿರುವ ದಾಸ್ತಾನನ್ನು ಗೋದಾಮು ಮಾಲೀಕರಿಂದ ಒಕ್ಕೂಟಕ್ಕೆ ಕೊಡಿಸಿಕೊಡಲು ಕೆಎಂಎ್ಗೆ ಪತ್ರ ನೀಡಲು ಆಡಳಿತ ಮಂಡಳಿ ತೀರ್ಮಾನಿಸಲಾಗಿತ್ತು. ಅದರಂತೆ ಮಾಲೀಕರು ಮಾ.28ರೊಳಗೆ ಹಾಲಿನಪುಡಿಯನ್ನು ನೀಡುವುದಾಗಿ ಒಪ್ಪಿಕೊಂಡಿದ್ದರು.
ಇದರ ನಡುವೆ ಮಾ.23ರಿಂದ 27ರವರೆಗೆ ಒಕ್ಕೂಟಕ್ಕೆ 185 ಮೆಟ್ರಿಕ್ ಟನ್ ಕೆನೆರಹಿತ ಹಾಲಿನಪುಡಿ ದಾಸ್ತಾನನ್ನು ವರ್ಗಾವಣೆ ಮಾಡಿಕೊಂಡ ನಂತರ ಗೋದಾಮಿನಲ್ಲಿ 137.30ಮೆಟ್ರಿಕ್ ಟನ್ ಉಳಿಯಬೇಕಾಗಿತ್ತು. ಆದರೆ, 44.20 ಮೆಟ್ರಿಕ್ ಟನ್ ದಾಸ್ತಾನು ಮಾತ್ರ ಉಳಿದಿದ್ದು, ಸುಮಾರು 93.10 ಮೆಟ್ರಿಕ್ ಟನ್ ಕಡಿಮೆ ದಾಸ್ತಾನು ಕಂಡು ಬಂದಿತ್ತು.
ಏ.1ರ ಅಂತ್ಯಕ್ಕೆ ಗೋದಾಮು-1ರಲ್ಲಿ 55.475 ಮೆಟ್ರಿಕ್ ಟನ್ ಹಾಲಿನ ಪುಡಿ ದಾಸ್ತಾನಿದ್ದು, ಒಟ್ಟು 54.925 ಮೆಟ್ರಿಕ್ ಟನ್ ಹಾಲಿನ ಪುಡಿ ಕಡಿಮೆ ಇದ್ದು, ಕಡಿಮೆ ಇರುವ 54.925 ಮೆಟ್ರಿಕ್ ಟನ್ ದಾಸ್ತಾನಿಗೆ ನಾನೇ ಜವಾಬ್ದಾರ ಎಂದು ಮಾಲೀಕರಾದ ಎಸ್.ಅನಂತ್ ಹಾಗೂ ಶ್ರೀಕಾಂತ್ ಒಕ್ಕೂಟಕ್ಕೆ ಪತ್ರ ನೀಡಿದ್ದರು. ಜತೆಗೆ ಹಾಲಿನ ಪುಡಿಯ ಮೌಲ್ಯ 1,43,63,602 ರೂ.ಗಳನ್ನು ಭರಿಸುವುದಾಗಿ ಹೇಳಿ ನೀಡಿದ್ದ ಮೂರು ಚೆಕ್‌ಗಳು ಬೌನ್ಸ್ ಆಗಿವೆ.
ಪರೀಕ್ಷೆಯಲ್ಲಿ ಕಲಬೆರಕೆ ಸಾಬೀತು: ಒಕ್ಕೂಟಕ್ಕೆ ವರ್ಗಾವಣೆ ಮಾಡಿಕೊಂಡ 185 ಮೆಟ್ರಿಕ್ ಟನ್ ಹಾಲಿನ ಪುಡಿಯನ್ನು ಮಿಲ್ಕ್ ವೇರಿಯಂಟ್ ಪ್ರೊಡಕ್ಷನ್‌ಗೆ ಸ್ಟಾಂಡರ್ಡ್ರೈಜೇಷನ್‌ಗಾಗಿ ಬಳಸಲು ಜೂ.11ರಂದು 261 ಬ್ಯಾಗ್‌ಗಳಲ್ಲಿನ ಕೆನೆರಹಿತ ಹಾಲಿನ ಪುಡಿಯ ಮಾದರಿಗಳನ್ನು ಪ್ರತ್ಯೇಕವಾಗಿ ಪರೀಕ್ಷೆಗೆ ಒಳಪಡಿಸಲಾಗಿದ್ದು, ಅದರಲ್ಲಿ 129 ಬ್ಯಾಗ್‌ಗಳಲ್ಲಿನ ಹಾಲಿನ ಪುಡಿಯು ಕಲಬೆರಕೆಯಾಗಿರುವುದು ಕಂಡು ಬಂದಿದೆ. ಜೂ.15ರಂದು 50 ಬ್ಯಾಗ್‌ಗಳನ್ನು ಪರೀಕ್ಷಿಸಿದಾಗ ಈ ಪೈಕಿ 3 ಬ್ಯಾಗ್‌ಗಳ ಹಾಲಿನಪುಡಿ ಒಳಸಲು ಯೋಗ್ಯವಿಲ್ಲವೆಂದು ಗುಣಮಟ್ಟ ವಿಭಾಗದಿಂದ ಸಂಸ್ಕರಣಾ ವಿಭಾಗಕ್ಕೆ ವರದಿ ನೀಡಲಾಗಿದೆ.
10 ಚೀಲಗಳ ಪ್ಯಾಕಿಂಗ್‌ನಲ್ಲಿ ಡಬಲ್ ಸ್ಟಿಚ್ ಮಾಡಿರುವ ಜತೆಗೆ 142 ಬ್ಯಾಗ್‌ಗಳು ಅನುಮಾನಾಸ್ಪದವಾಗಿದ್ದು, ಕಲಬೆರಕೆಯಾಗಿವೆ ಎನ್ನಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net