ವಿವಿಯಲ್ಲಿ ತರಗತಿ ಆರಂಭ ವಿಳಂಭವಾಗಿದೆ, ಮೂಲ ಸೌಕರ್ಯ ಕೊರತೆ ಇದೆ.
ಕಂಪ್ಯೂಟರ್ ಪ್ರಯೋಗಾಲಯದ ಸಮಸ್ಯೆ ಪರಿಹಾರ ನೀಡುತ್ತಿಲ್ಲವೆಂದು ದೂರು
ಮಂಡ್ಯ:
ಮಂಡ್ಯ ವಿಶ್ವವಿದ್ಯಾಲಯದಲ್ಲಿನ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿ ಭಾರತೀಯ ವಿದ್ಯಾರ್ಥಿ ಒಕ್ಕೂಟ ಕರ್ನಾಟಕ ಸಂಘಟನೆ ನೇತೃತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ವಿವಿ ಆವರಣದ ಎದುರು ಧರಣಿ ನಡೆಸಿದ ವಿದ್ಯಾರ್ಥಿಗಳು, ತರಗತಿ ಆರಂಭ ವಿಳಂಭವಾಗಿದೆ. ಮೂಲ ಸೌಕರ್ಯ ಕೊರತೆ ಇದೆ. ಕಂಪ್ಯೂಟರ್ ಪ್ರಯೋಗಾಲಯದ ಸಮಸ್ಯೆ ಪರಿಹಾರ ನೀಡುತ್ತಿಲ್ಲ ಎಂದು ದೂರಿದರು. ವಿದ್ಯಾರ್ಥಿಗಳು ಹಲವು ಶೈಕ್ಷಣಿಕ ಹಾಗೂ ಮೂಲ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇದು ಶೈಕ್ಷಣಿಕ ಪ್ರಗತಿ ಪರೀಕ್ಷಾ ಸಿದ್ಧತೆ ಹಾಗೂ ಭವಿಷ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಲೇಜಿನ ತರಗತಿಗಳು ನಿಗದಿತ ವೇಳಾಪಟ್ಟಿಯಂತೆ ಸಮಯಕ್ಕೆ ಸರಿಯಾಗಿ ಆರಂಭವಾಗಬೇಕು. ನಿಯಮಿತವಾಗಿ ನಡೆಸಬೇಕು. ವಿದ್ಯಾರ್ಥಿಗಳಿಗೆ ಒಂದು ನಿರ್ದಿಷ್ಟವಾದ ಮಧ್ಯಾಹ್ನದ ಊಟದ ಸಮಯವನ್ನು ವಿಷಯಗಳ ಪಠ್ಯಕ್ರಮವನ್ನು ಕಡ್ಡಾಯವಾಗಿ ನಿಗದಿಗೊಳಿಸಿಕೊಡಬೇಕು. ಪರೀಕ್ಷೆಗೂ ಮುನ್ನ ಎಲ್ಲ ಪಠ್ಯವನ್ನು ಪೂರ್ಣಗೊಳಿಸಿಕೊಡಬೇಕು. ಪರೀಕ್ಷಾ ಸಿದ್ಧತೆಗಾಗಿ ಸಾಕಷ್ಟು ಸಮಯ ಮತ್ತು ಅಗತ್ಯ ಮಾರ್ಗದರ್ಶನ ನೀಡಬೇಕು. ವಿದ್ಯಾರ್ಥಿಗಳ ಪರೀಕ್ಷಾ ಸಿದ್ಧತೆಗೆ ಅನುಕೂಲವಾಗುವ ಅಗತ್ಯ ಅಧ್ಯಯನ ಸಾಮಗ್ರಿ, ಮಾದರಿ ಪ್ರಶ್ನೆ ಪತ್ರಿಕೆಗಳು ಹಾಗೂ ಪೂರ್ವಸಿದ್ಧತಾ ಪರೀಕ್ಷೆಗಳನ್ನು ಒದಗಿಸಬೇಕು. ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯ ಗಮನದಲ್ಲಿಟ್ಟುಕೊಂಡು ಸಂಬಂಧಿಸಿದ ಆಡಳಿತಾಧಿಕಾರಿಗಳಿಗೆ ಅಗತ್ಯ ಸೂಚನೆ ನೀಡಬೇಕು ಎಂದು ಒತ್ತಾಯಿಸಿದರು.
ಸಂಘಟನೆ ಮುಖಂಡ ಬಿ.ಎಸ್.ಮಂಜು ಮಾತನಾಡಿ, ಮಂಡ್ಯ ವಿವಿಯಲ್ಲಿ ಐವರು ಕಾಯಂ ಉಪನ್ಯಾಸಕರಿದ್ದಾರೆ. ಇದು ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಕಾಲೇಜಿನಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಿಲ್ಲ. ತರಗತಿಯನ್ನು ಬೇಗ ಆರಂಭಿಸಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ನೆರವಾಗಬೇಕು. ಶೇ.75 ರಷ್ಟು ಹಾಜರಾತಿ ಇದ್ದರೂ ಪರೀಕ್ಷೆಯಲ್ಲಿ ಅನುತ್ತೀರ್ಣರಾಗುತ್ತಿದ್ದಾರೆ ಎಂದರೆ ಇಲ್ಲಿ ಸರಿಯಾದ ಸೌಲಭ್ಯವಿಲ್ಲ ಎಂಬುದು ಅರ್ಥ ಆಗುತ್ತಿದೆ. ಈ ಸಮಸ್ಯೆ ಅರ್ಥ ಮಾಡಿಕೊಂಡು ಸರಿಪಡಿಸಬೇಕು ಎಂದು ಆಗ್ರಹ ಪಡಿಸಿದರು.