ಮಂಡ್ಯದಲ್ಲಿ ಆಯೋಜಿಸಿದ್ದ ವಿಚಾರಗೋಷ್ಠಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಗಣ್ಯರು ಪುಷ್ಪಾರ್ಚನೆ ಸಲ್ಲಿಸಿದರು. ಜಿಲ್ಲಾಧಿಕಾರಿ ಡಾ.ಕುಮಾರ, ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ಆನಂದ್, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಕೆ.ಶ್ರೀನಿವಾಸ್, ಸರ್ಕಾರಿ ಅಭಿಯೋಜಕ ಎಚ್.ಸಿ.ರಾಜೇಶ್ ಇತರರಿದ್ದರು.
Published on:
Copied
Follow Us
ಮಂಡ್ಯ:ಸಮಾಜದ ಎಲ್ಲ ವರ್ಗದವರಿಗೂ ಕಾನೂನಿನ ಅರಿವು ಮೂಡಿಸುವ ಕಾರ್ಯಾಗಾರ ಅಗತ್ಯವಿದೆ. ಕಾನೂನಿನ ಮಾಹಿತಿ ಇದ್ದಾಗ ಮಾತ್ರ ದೌರ್ಜನ್ಯ ಪ್ರಕರಣ ತಡೆಗಟ್ಟಲು ಸಾಧ್ಯ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತದಿಂದ ಮಂಗಳವಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ಪ್ರತಿಬಂಧ ) ಅಧಿನಿಯಮ 1989(ತಿದ್ದುಪಡಿ), ಅಧಿನಿಯಮ 2015 ಮತ್ತು ನಿಯಮಗಳು 1995(ತಿದ್ದುಪಡಿ ) ನಿಯಮಗಳು ಮತ್ತು ನಾಗರಿಕ ಹಕ್ಕು ರಕ್ಷಣಾ ಕಾಯ್ದೆ 1955ರನ್ವಯ ಆಯೋಜಿಸಲಾಗಿದ್ದ ವಿಚಾರಗೋಷ್ಠಿ ಮತ್ತು ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಅರಿವು ಮೂಡಿಸುವ ಕಾರ್ಯಾಗಾರವನ್ನು ಆಯೋಜಿಸಬೇಕು. ಆಗ ಮಾತ್ರ ಈ ಕಾಯ್ದೆಯ ತೀವ್ರತೆ ತಿಳಿಯುತ್ತದೆ ಎಂದು ಹೇಳಿದರು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ದೌರ್ಜನ್ಯ ಪ್ರತಿಬಂಧ ಕಾಯ್ದೆಯ ಸದಸ್ಯರು ಮುತುವರ್ಜಿ ವಹಿಸಿ ಪ್ರಯತ್ನಪಟ್ಟರೆ ತಾಲೂಕು ಮಟ್ಟದಲ್ಲಿ ಕಾರ್ಯಾಗಾರವನ್ನು ಯಶಸ್ವಿಗೊಳಿಸಬಸಹುದು. ಕಾಯ್ದೆಯಡಿ ನ್ಯಾಯಾಲಯಗಳಿಗೆ ಸಾಕ್ಷಿ ಹೇಳಲು ಬರುವ ಸಾಕ್ಷಿದಾರರಿಗೆ ಧೈರ್ಯ ತುಂಬುವ ಕೆಲಸವಾಗಬೇಕು. ಅಸ್ಪೃಶ್ಯತೆಯನ್ನು ಈಗಲೂ ಜೀವಂತವಾಗಿ ಉಳಿಸಿರುವುದು ತಪ್ಪು ಎಂಬ ಸಂದೇಶವನ್ನು ಸಮಾಜಕ್ಕೆ ನೀಡಬೇಕಿದೆ. ಅಸ್ಪೃಶ್ಯತೆಯನ್ನು ಆಚರಿಸಿದರೆ ಏನೆಲ್ಲ ಪರಿಣಾಮ ಎದುರಿಸಬೇಕಾಗುತ್ತದೆಂಬ ಸಂದೇಶ ಸಮಾಜಕ್ಕೆ ಹೋಗಬೇಕು ಎಂದು ಹೇಳಿದರು.
ಎಲ್ಲ ದೌರ್ಜನ್ಯ ಪ್ರಕರಣಗಳನ್ನು ಕಾನೂನಿನ ಮೂಲಕವೇ ಪರಿಹರಿಸುತ್ತೇವೆ ಎಂದರೆ ಪ್ರಯೋಜನವಿಲ್ಲ. ಸಮಾಜದಲ್ಲಿ ಮನಪರಿವರ್ತನೆ ಆಗಬೇಕು. ಜನರಿಗೆ ಅರಿವು ಹೆಚ್ಚಾಗಬೇಕು. ಹೀಗಿದ್ದಾಗ ಮಾತ್ರ ಸಮಾಜದಿಂದ ಅಸ್ಪೃಶ್ಯತೆಯನ್ನು ಹೋಗಲಾಡಿಸಬಹುದು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಮೇಲಿನ ದೌರ್ಜನ್ಯವನ್ನು ತಡೆಗಟ್ಟಬಹುದು. ಪರಿಶಿಷ್ಟರ ಮೇಲೆ ದೌರ್ಜನ್ಯ ಪ್ರಕರಣಗಳು ನಡೆಯುತ್ತಿವೆ ಎಂದರೆ ನಮ್ಮನ್ನು ನಾವೇ ಅವಲೋಕಿಸಿಕೊಳ್ಳಬೇಕು. ಕಾಯ್ದೆ ಬಂದಾಗ ದೇಶದಲ್ಲಿ ಅನಕ್ಷರಸ್ಥರ ಸಂಖ್ಯೆ ಹೆಚ್ಚಿತ್ತು. ಆದರೆ ಇಂದು ಸುಶಿಕ್ಷಿತ ಸಮಾಜದಲ್ಲಿ ಇದ್ದೇವೆ. ಅರಿವಿನ ಸಂಖ್ಯೆ ಹೆಚ್ಚು ಇದೆ. ಆದಾಗ್ಯೂ ದೌರ್ಜನ್ಯ ಪ್ರಕರಣ ನಡೆಯುತ್ತಿದೆ ಎಂದರೆ ಇದು ನಾಗರೀಕ ಸಮಾಜದ ಗುಣಲಕ್ಷಣವಲ್ಲ ಎಂದು ಹೇಳಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ಆನಂದ್ ಮಾತನಾಡಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ಕಾಯ್ದೆಯಡಿ ಶಿಕ್ಷೆ ಪ್ರಮಾಣ ಕಡಿಮೆಯಾಗುತ್ತಿದೆ. ನ್ಯಾಯಾಲಯದಲ್ಲಿ ಸಾಕ್ಷಿಗಳ ಕೊರತೆ ಇದ್ದು, ಈ ಕಾಯ್ದೆಯ ಕುರಿತು ಜನರಿಗೆ ಅರಿವು ಮೂಡಿಸುವ ಕಾರ್ಯಕ್ರಮ ಆಗಬೇಕಿದೆ. ಪರಿಶಿಷ್ಟರ ಕಾಯ್ದೆಯ ಕುರಿತು ಜಾಗೃತಿ ಮೂಡಿಸುವಂತ ಕೆಲಸ ನಡೆದಾಗ ಮಾತ್ರ ಸಮರ್ಪಕವಾಗಿ ಅನುಷ್ಠಾನಗೊಳಿಸಲು ಸಾಧ್ಯವಾಗುತ್ತದೆ. ಈ ಕಾಯ್ದೆಯಡಿ ನೋಂದಣಿಯಾದ ಪ್ರಕರಣಗಳು ಸಮರ್ಪಕವಾಗಿ ತನಿಖೆ ಆಗಬೇಕು ಎಂದರು.
ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಕೆ.ಶ್ರೀನಿವಾಸ್, ಸರ್ಕಾರಿ ಅಭಿಯೋಜಕ ಎಚ್.ಸಿ.ರಾಜೇಶ್ ಇತರರಿದ್ದರು.