ಮದ್ದೂರು: ತಾಲೂಕಿನ 110 ಹಳ್ಳಿಗಳಿಗೆ ಸರ್ಕಾರದ ವಿಶೇಷ ಯೋಜನೆಯಡಿ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಾಗುತ್ತಿದೆ ಎಂದು ಶಾಸಕ ಕೆ.ಎಂ.ಉದಯ್ ತಿಳಿಸಿದರು.
ತಾಲೂಕಿನ ಅಗರಲಿಂಗನದೊಡ್ಡಿ, ಡಿ.ಹೊಸೂರು, ಹಳ್ಳಿಕೆರೆ, ಅಂಕೇಗೌಡನದೊಡ್ಡಿ ಹಾಗೂ ಕೆಂಪೇಗೌಡನದೊಡ್ಡಿ ಗ್ರಾಮಗಳಲ್ಲಿ ಅಂದಾಜು 1 ಕೋಟಿ ರೂ. ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿ ಬುಧವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಮುಂದಿನ ದಿನಗಳಲ್ಲಿ ಮತ್ತಷ್ಟು ಹಳ್ಳಿಗಳನ್ನು ಆಯ್ಕೆ ಮಾಡಿಕೊಂಡು ಗ್ರಾಮಗಳ ಅಭಿವೃದ್ಧಿ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.
ಬೇಸಿಗೆ ಸಮೀಪಿಸುತ್ತಿರುವುದರಿಂದ ನಗರ ಸೇರಿದಂತೆ ಗ್ರಾಮಾಂತರ ಪ್ರದೇಶಗಳಲ್ಲಿ ಕುಡಿಯುವ ನೀರಿಗೆ ಯಾವುದೇ ರೀತಿಯ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ತಾಲೂಕಿನ ಸಮಗ್ರ ಅಭಿವೃದ್ಧಿ ಮಾಡುವ ಉದ್ದೇಶದಿಂದ ಸರ್ಕಾರದಿಂದ 1,800 ಕೋಟಿ ರೂ. ಗೂ ಅಧಿಕ ಅನುದಾನ ತಂದು ಕೃಷಿ, ನೀರಾವರಿ, ಶಿಕ್ಷಣ ಸೇರಿದಂತೆ ಪ್ರತಿಯೊಂದು ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಶಕ್ತಿಮೀರಿ ಶ್ರಮಿಸುತ್ತಿರುವಾಗಿ ತಿಳಿಸಿದರು.
ಗಾಪಂ ಮಾಜಿ ಅಧ್ಯಕ್ಷರಾದ ಸಂದೀಪ್, ಉದಯ್, ಕೆಂಪರಾಜು, ಮುಖಂಡರಾದ ಜಯರಾಮ್, ಅಪ್ಪೇಗೌಡ, ಪುಟ್ಟಪ್ಪ, ಮಾದೇಶ, ಮಹೇಂದ್ರ, ಸತೀಶ್, ತಿಮ್ಮಪ್ಪ, ಲೋಕೋಪಯೋಗಿ ಎಇಇ ದೇವಾನಂದ್ ಇತರರು ಇದ್ದರು.