ಶಾರದಾನಿಕೇತನದಲ್ಲಿ ಮಹಾವಿಷ್ಣು ಹೋಮ: ವಿಶ್ವಶಾಂತಿಯ ಸಂಕಲ್ಪದೊಂದಿಗೆ ಧಾರ್ಮಿಕ ಕೈಂಕರ್ಯ

ಮಂಡ್ಯ ತಾಲೂಕು ಮಾರದೇವನಹಳ್ಳಿಯ ಸತ್ಯಸಾಯಿ ಶಾರದಾನಿಕೇತನ ಗುರುಕುಲದಲ್ಲಿ ಮಹಾವಿಷ್ಣು ಹೋಮ ನಡೆಯಿತು.
ಮಂಡ್ಯ ತಾಲೂಕು ಮಾರದೇವನಹಳ್ಳಿಯ ಸತ್ಯಸಾಯಿ ಶಾರದಾನಿಕೇತನ ಗುರುಕುಲದಲ್ಲಿ ಮಹಾವಿಷ್ಣು ಹೋಮ ನಡೆಯಿತು.
Published on

ಮಂಡ್ಯ: ತಾಲೂಕಿನ ಮಾರದೇವನಹಳ್ಳಿಯ ಸತ್ಯಸಾಯಿ ಶಾರದಾನಿಕೇತನ ಗುರುಕುಲದಲ್ಲಿ ಲೋಕಕ್ಷೇಮ, ಸರ್ವಜೀವಿಗಳ ಕಲ್ಯಾಣ ಹಾಗೂ ವಿಶ್ವಶಾಂತಿಯ ಸಂಕಲ್ಪದೊಂದಿಗೆ ಆಯೋಜಿಸಿದ್ದ ಮಹಾವಿಷ್ಣು ಹೋಮ ಅತ್ಯಂತ ಭಕ್ತಿಭಾವ ಮತ್ತು ವೈದಿಕ ವಿಧಿವಿಧಾನಗಳೊಂದಿಗೆ ನೆರವೇರಿಸಲಾಯಿತು.

ಕಾರ್ಯಕ್ರಮದ ಅಂಗವಾಗಿ ಭಗವಾನ್ ಮಹಾವಿಷ್ಣುವಿಗೆ ವಿಶೇಷ ಪೂಜೆ, ಹೋಮ ಹಾಗೂ ಪೂರ್ಣಾಹುತಿ ಸಮರ್ಪಿಸಲಾಯಿತು. ಈ ಪವಿತ್ರ ಆಚರಣೆಯು ಆಶ್ರಮದ ವಾತಾವರಣವನ್ನು ಭಕ್ತಿ, ಶಾಂತಿ ಹಾಗೂ ದೈವಿಕ ಚೈತನ್ಯದಿಂದ ತುಂಬಿಸಿತು. ಗುರುಕುಲದ ವಿದ್ಯಾರ್ಥಿಗಳು ನಾರಾಯಣ ಉಪನಿಷತ್ತಿನ ಪಾರಾಯಣ, ಎಂಟನೇ ತರಗತಿಯ ವಿದ್ಯಾರ್ಥಿಗಳಿಂದ ಭಗವದ್ಗೀತೆ ಪಠಣ, ಒಂಬತ್ತನೇ ತರಗತಿಯ ವಿದ್ಯಾರ್ಥಿಗಳಿಂದ ಭಜ ಗೋವಿಂದಂ ಹಾಗೂ ಭಜನೆಗಳ ಗಾಯನದ ಮೂಲಕ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ತಂದರು. ಇಬ್ಬರು ವಿದ್ಯಾರ್ಥಿಗಳು ಹರಿಕಥಾ ಶೈಲಿಯಲ್ಲಿ ಮಹಾವಿಷ್ಣುವಿನ ಮಹಿಮೆ ಮತ್ತು ಸನಾತನ ಧರ್ಮದ ಸಂದೇಶವನ್ನು ಮನೋಜ್ಞವಾಗಿ ನಿರೂಪಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.
ಮಂಗಳಾರತಿಯೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು. ಈ ಆಚರಣೆಯು ವಿದ್ಯಾರ್ಥಿಗಳಲ್ಲಿ ಭಕ್ತಿ, ಶರಣಾಗತಿ, ಸೇವಾ ಮನೋಭಾವ ಮತ್ತು ಸನಾತನ ಭಾರತೀಯ ಸಂಸ್ಕೃತಿಯ ಮೌಲ್ಯಗಳನ್ನು ಮತ್ತಷ್ಟು ಗಟ್ಟಿಗೊಳಿಸಿದ ಆಧ್ಯಾತ್ಮಿಕ ಅನುಭವವಾಗಿ ಪರಿಣಮಿಸಿತು. ಉಪಸ್ಥಿತರಿದ್ದ ಭಕ್ತರು ಮತ್ತು ಪಾಲಕರು ಮಹಾವಿಷ್ಣು ಹೋಮದ ದಿವ್ಯತೆಯನ್ನು ಕಣ್ತುಂಬಿಕೊಂಡು, ಗುರುಕುಲದಲ್ಲಿ ವಿದ್ಯಾರ್ಥಿಗಳಿಗೆ ಆಧ್ಯಾತ್ಮಿಕತೆ ಹಾಗೂ ಭಾರತೀಯ ಸಂಸ್ಕಾರಗಳನ್ನು ಜೀವನದ ಅಂಗವನ್ನಾಗಿ ಬೆಳೆಸುತ್ತಿರುವ ಪ್ರಯತ್ನವನ್ನು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಮಂಡ್ಯ ಶಾಖೆ ಅಧ್ಯಕ್ಷ ಗೌರವ್, ಕಾರ್ಯಕಾರಿ ಸಮಿತಿ ಸದಸ್ಯರಾದ ಡಾ.ಎ.ವಿ.ಉಮೇಶ್, ಸಾಯಿಪ್ರಸಾದ್, ಕನ್ನಡ ಸೇನೆ ಜಿಲ್ಲಾಧ್ಯಕ್ಷ ಎಚ್.ಸಿ.ಮಂಜುನಾಥ್, ನುಡಿ ಭಾರತಿ ಸಂಸ್ಥೆ ಮುಖ್ಯಸ್ಥ ಎಲ್.ಬಸವೇಗೌಡ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net