ಮದ್ದೂರು ನಗರದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ತಾಲೂಕು ದಲಿತ ಸಾಹಿತ್ಯ ಪರಿಷತ್ ವತಿಯಿಂದ ಶ್ರೀ ಮಹಾತ್ಮ ಜ್ಯೋತಿ ಬಾ ಫುಲೆ ಅವರ ಪುಣ್ಯಸ್ಮರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಹುರಗಲವಾಡಿ ರಾಮಯ್ಯ, ಕೆ.ಟಿ.ಶಿವಕುಮಾರ್, ಮಲವರಾಜ್, ಸರೋಜಾ, ಪಿ.ಶಶಿಕುಮರ್, ಅಶಿಫ್‌ಪಾಷ ಇದ್ದರು.
ಜ್ಯೋತಿ ಬಾ ಫುಲೆ ಕುರಿತು ದಲಿತ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಹುರಗಲವಾಡಿ ರಾಮಯ್ಯ ಅಭಿಮತ
ಮದ್ದೂರು: ಜ್ಯೋತಿ ಬಾ ಫುಲೆ ಶೋಷಿತರ ಪರವಾಗಿ ಸಾಮಾಜಿಕ ಅಸಮಾನತೆಯ ವಿರುದ್ಧ ಹೋರಾಡಿದ ಮಹಾತ್ಮ ಎಂದು ದಲಿತ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ಹುರಗಲವಾಡಿ ರಾಮಯ್ಯ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ತಾಲೂಕು ದಲಿತ ಸಾಹಿತ್ಯ ಪರಿಷತ್ ವತಿಯಿಂದ ಆಯೋಜಿಸಿದ್ದ ಶ್ರೀ ಮಹಾತ್ಮ ಜ್ಯೋತಿಬಾ ಫುಲೆ ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.\
ಸತ್ಯಶೋಧಕ, ಸಮಾಜದ ನಿರ್ಮಾತೃ, ಸಮ ಸಮಾಜದ ಕನಸುಗಾರ, ಶಿಕ್ಷಣ ವಂಚಿತ ಹೆಣ್ಣು ಮಕ್ಕಳಿಗೆ ಶಿಕ್ಷಣವನ್ನು ನೀಡಿದ ಮಹಾತ್ಮ ಶ್ರೀ ಜ್ಯೋತಿ ಬಾ ಫುಲೆ ಅವರ ಸ್ಮರಣ ದಿನ ನ.28 ರಂದು ನಾವೆಲ್ಲರೂ ಸ್ಮರಿಸಲೇಬೇಕು ಎಂದರು.
ದಲಿತ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಕೆ.ಟಿ.ಶಿವಕುಮಾರ್ ಮಾತನಾಡಿ, ಜ್ಯೋತಿ ಬಾ ಫುಲೆ 1848ರಲ್ಲಿ ಪುಣೆಯಲ್ಲಿ ಬಾಲಕಿಯರಿಗಾಗಿ ಮೊದಲ ಶಾಲೆ ತೆರೆದು ಜಾತಿ ವ್ಯವಸ್ಥೆ ವಿರುದ್ಧ ಹೋರಾಡಿದರು. ಹಾಗೂ ಶೂದ್ರ ಮತ್ತು ಹಿಂದುಳಿದ ವರ್ಗಗಳ ಹಕ್ಕಿಗಾಗಿ ದ್ವನಿ ಎತ್ತಿದವರು ಶಿಕ್ಷಣದಿಂದ ವಂಚಿತರಾಗಿದ್ದ ಅಸಂಖ್ಯಾತ ಜನರಿಗೆ ನೀವು ವಿದ್ಯೆ ಕಲಿಯಬಹುದು ಎಂದು ತಿಳಿವಳಿಕೆ ನೀಡಿ ಅಕ್ಷರ ಕಲಿಯಲು ಪ್ರೇರೇಪಿಸಿ ಅಕ್ಷರ ಜ್ಞಾನವನ್ನು ನೀಡಿದವರು ಜ್ಯೋತಿ ಬಾ ಫುಲೆ ಮತ್ತು ಸಾವಿತ್ರಿ ಬಾ ಫುಲೆ ಅವರು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಶಿಕ್ಷಣ ನೀಡಿದ ನಿಜವಾದ ಮೇರು ಶಿಕ್ಷಕರು ಎಂದು ಬಣ್ಣಿಸಿದರು.
ದಸಾಪ ಉಪಾಧ್ಯಕ್ಷೆ ಸರೋಜಾ, ಅಹಿಂದ ಸಂರಕ್ಷಣಾ ವೇದಿಕೆಯ ಅಧ್ಯಕ್ಷ ಮಲವರಾಜ್, ಸಂಘಟನಾ ಕಾರ್ಯದರ್ಶಿ ಪಿ.ಶಶಿಕುಮಾರ್, ಸಂಚಾಲಕ ಅಶಿಪ್ ಪಾಷ, ದಲಿತ ಸಾಹಿತ್ಯ ಪರಿಷತ್ ಸಹಕಾರ್ಯದರ್ಶಿ ರಾಚಯ್ಯ, ಮುಖಂಡರಾದ ಬೂದಗುಪ್ಪೆ ಪುಟ್ಟ, ಮಹದೇವಯ್ಯ, ಆಲೂರು ಕುಮಾರ್, ಅರವನಹಳ್ಳಿ ಸಿದ್ದರಾಜು ಶಿಕ್ಷಕ ಮಹೇಶ್ ಇದ್ದರು.