ನಾಗಮಂಗಲ: ಮಹರ್ಷಿ ಭಗೀರಥರು ಒಂದು ಜಾತಿ, ವರ್ಗಕ್ಕೆ ಸೀಮಿತವಾದ ವ್ಯಕ್ತಿಯಾಗದೆ ಭರತ ಭೂಮಿಗೆ ನೀರು ಹರಿಸಿದ ಬಹು ದೊಡ್ಡಶಕ್ತಿಯಾಗಿದ್ದಾರೆ ಎಂದು ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷ ಸಚ್ಚಿನ್ ಚಲುವರಾಯಸ್ವಾಮಿ ಅಭಿಪ್ರಾಯಪಟ್ಟರು.
ಪಟ್ಟಣದ ಬದರಿಕೊಪ್ಪಲಿನಲ್ಲಿ ಮಂಗಳವಾರ ಆಯೋಜಿಸಿದ್ದ ಮಹರ್ಷಿ ಭಗೀರಥ ಜಯಂತ್ಯುತ್ಸವ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಉಪ್ಪಾರ ಸಮುದಾಯವನ್ನು ಶೈಕ್ಷಣಿಕ ಮತ್ತು ಆರ್ಥಿಕವಾಗಿ ಸಮಾಜದ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಸಮುದಾಯದ ಪ್ರತಿಯೊಬ್ಬರೂ ಸರ್ಕಾರದ ಸವಲತ್ತುಗಳನ್ನು ಸದ್ಬಳಕೆ ಮಾಡಿಕೊಂಡು ಸ್ವಾವಲಂಬಿ ಜೀವನ ನಡೆಸಬೇಕು ಎಂದು ಹೇಳಿದರು.
ಜಿಲ್ಲಾ ಉಪ್ಪಾರ ಸಂಘದ ಮುಖಂಡ ದುದ್ದ ಚಂದ್ರಶೇಖರ್ ಮಾತನಾಡಿ, ಉಪ್ಪಾರ ಸಮುದಾಯ ಸಂಘಟಿತವಾಗಿ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು. ಸಮುದಾಯದ ಮಕ್ಕಳು ವಿದ್ಯಾವಂತರಾಗಿ ಸಮಾಜಕ್ಕೆ ಕೊಡುಗೆ ನೀಡಬೇಕು. ಮಹರ್ಷಿ ಭಗೀರಥ ಅವರ ತತ್ವ, ಆದರ್ಶಗಳನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಂಡಲ್ಲಿ ಉತ್ತಮ ಸಮಾಜ ನಿರ್ಮಿಸಬಹುದಾಗಿದೆ ಎಂದು ತಿಳಿಸಿದರು.
ಸಮುದಾಯದ ಮುಖಂಡರಾದ ಮಂಜುಳಾ, ಮಹರ್ಷಿ ಭಗೀರಥರ ಮಹತ್ವ ಕುರಿತು ಪ್ರಧಾನ ಭಾಷಣ ಮಾಡಿದರು. ಅಯ್ಯನ ಸರಗೂರಿನ ಮಲೈ ಮಹದೇಶ್ವರಸ್ವಾಮಿ ಎಣ್ಣೆಮಜ್ಜನ ಸೇವಾ ಸಮಿತಿಯ ರಂಗಸ್ವಾಮಿ ಆಶೀರ್ವಚನ ನೀಡಿದರು. ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯು ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ 30ಕ್ಕೂ ಹೆಚ್ಚು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಮಹರ್ಷಿ ಭಗೀರಥರ ಭಾವಚಿತ್ರವನ್ನು ಸರ್ವಾಲಂಕೃತ ತೆರೆದ ವಾಹನದಲ್ಲಿ ಪಟ್ಟಣದ ಟಿ.ಬಿ.ಬಡಾವಣೆಯ ಬಿಜಿಎಸ್ ವೃತ್ತದಿಂದ ಬದರಿಕೊಪ್ಪಲುವರೆಗೆ ಪೂರ್ಣಕುಂಭದೊಂದಿಗೆ ಮೆರವಣಿಗೆ ನಡೆಸಲಾಯಿತು.
ಪುರಸಭೆ ಮಾಜಿ ಉಪಾಧ್ಯಕ್ಷೆ ವಸಂತಲಕ್ಷ್ಮೀ ಅಶೋಕ್, ಮಾಜಿ ಸದಸ್ಯೆ ರೂಪಾ ಮಂಜುನಾಥ್, ಮುಖ್ಯಾಧಿಕಾರಿ ವೀಣಾ, ನಿವೃತ್ತ ಶಿಕ್ಷಕ ಜಯರಾಜು, ಅರಣ್ಯ ಇಲಾಖೆಯ ಪಾಲಹಳ್ಳಿ ಸೋಮಣ್ಣ, ಶಿವಲಿಂಗಯ್ಯ, ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಮಲ್ಲನಕಟ್ಟೆ ಕುಮಾರ್, ಉದ್ಯಮಿ ಆನಂದ್, ನಗುವಿನಹಳ್ಳಿ ಮಂಜು, ಚಾಮನಕೊಪ್ಪಲು ಉಮೇಶ್, ಹಿರಿಯಣ್ಣ, ಗ್ರಾಮದ ಮುಖ್ಯಸ್ಥರಾದ ಮಂಜುನಾಥ್, ಬಿ.ಆರ್.ಕುಮಾರ್, ತಿಮ್ಮಪ್ಪ, ಶ್ರೀನಿವಾಸ್, ಚಂದ್ರು, ಸತೀಶ್, ರಘು, ಸ್ವಾಮಿ, ಅಶೋಕ್, ಕಾವ್ಯಾ ಮುರಳಿ, ಶಿಕ್ಷಕ ಕೃಷ್ಣಮೂರ್ತಿ, ಸುರೇಶ್ ಉಪ್ಪಾರ್ ಭಾಗವಹಿಸಿದ್ದರು.