ಜಿಲ್ಲೆಗೆ 10 ಸಾವಿರ ಕೋಟಿ ರೂ.ಅನುದಾನ

ಮದ್ದೂರು ತಾಲೂಕು ಕೊಪ್ಪ ಹೋಬಳಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಚಿವ ಎನ್.ಚಲುವರಾಯಸ್ವಾಮಿ ಶಿಲಾನ್ಯಾಸ ನೆರವೇರಿಸಿದರು. ದಿನೇಶ್‌ಗೂಳಿಗೌಡ, ಡಾ.ಕುಮಾರ್, ಕೆ.ಎನ್.ದಿವಾಕರ್ ಇದ್ದರು.
ಮದ್ದೂರು ತಾಲೂಕು ಕೊಪ್ಪ ಹೋಬಳಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಚಿವ ಎನ್.ಚಲುವರಾಯಸ್ವಾಮಿ ಶಿಲಾನ್ಯಾಸ ನೆರವೇರಿಸಿದರು. ದಿನೇಶ್‌ಗೂಳಿಗೌಡ, ಡಾ.ಕುಮಾರ್, ಕೆ.ಎನ್.ದಿವಾಕರ್ ಇದ್ದರು.
Published on
ಮದ್ದೂರು: ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದ ಎರಡೂವರೆ ವರ್ಷಗಳಲ್ಲಿ ಜಿಲ್ಲೆಗೆ 10 ಸಾವಿರ ಕೋಟಿ ರೂ.ಗೂ ಹೆಚ್ಚು ಅನುದಾನವನ್ನು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ತರಲಾಗಿದೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿಯಿಂದ ಕೊಪ್ಪದ ಗ್ರಾಮ ಪಂಚಾಯಿತಿ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ಜನಸ್ಪಂದನ ಕಾರ್ಯಕ್ರಮ ಹಾಗೂ 140 ಕೋಟಿ ರೂ.ಗಳ ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆ ಸಲ್ಲಿಸಿ ಮಾತನಾಡಿದರು. ಗ್ಯಾರಂಟಿ ಯೋಜನೆಗಳನ್ನು ವಿರೋಧಿಸಿದವರು ಇಂದು ರಾಷ್ಟ್ರ ಮಟ್ಟದಲ್ಲಿ ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ. ಆದರೆ ಕರ್ನಾಟಕದಲ್ಲಿ ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ನೀಡಿದಷ್ಟು ಇನ್ಯಾವುದೇ ರಾಜ್ಯಗಳಲ್ಲಿ ನೀಡಿಲ್ಲ ಎಂದು ಸಮರ್ಥಿಸಿದರು.
ಪಂಚ ಗ್ಯಾರಂಟಿಗಳ ಮೂಲಕ ಪ್ರತಿ ತಾಲೂಕಿಗೆ ವಾರ್ಷಿಕ 250 ಕೋಟಿ ರೂ.ಅನುದಾನವನ್ನು ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲೂ ಯೋಜನೆಗಳು ಮುಂದುವರಿಯುತ್ತವೆ. 2028ರ ಚುನಾವಣೆಯಲ್ಲೂ ನಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ಪಂಚ ಗ್ಯಾರಂಟಿಗಳನ್ನು ಘೋಷಿಸಲಾಗುವುದು ಎಂದು ತಿಳಿಸಿದರು.
ಕೃಷಿ ಇಲಾಖೆಯಿಂದ ಏಪ್ರಿಲ್‌ನಿಂದ ಇಲ್ಲಿಯವರೆಗೂ ಕೊಪ್ಪ ಹೋಬಳಿಯ 520 ಫಲಾನುಭವಿಗಳಿಗೆ 150 ಲಕ್ಷ ರೂ. ಸಹಾಯ ಧನ ನೀಡಲಾಗಿದೆ. ಜಿಲ್ಲೆಯಲ್ಲಿ 49,330 ಫಲಾನುಭವಿಗಳಿಗೆ ಕೃಷಿ ಇಲಾಖೆಯ ವಿವಿಧ ಯೋಜನೆಗಳಿಂದ 2,390.80 ಲಕ್ಷ ರೂ. ಸಹಾಯಧನ ನೀಡಲಾಗಿದೆ. ಒಬ್ಬರಿಗೆ ಸುಮಾರು 50 ಲಕ್ಷ ರೂ.ವರೆಗೂ ಸಬ್ಸಿಡಿ ನೀಡಲಾಗಿದೆ ಎಂದರು.
ನಮ್ಮ ಸರ್ಕಾರ ವಿವಿಧ ಯೋಜನೆಗಳ ಮೂಲಕ ಜನರಿಗೆ ಅಭಿವೃದ್ಧಿ ಕಾರ್ಯವನ್ನು ಮಾಡಲಾಗುತ್ತಿದೆ. ಕೊಪ್ಪ ಹೋಬಳಿಯಲ್ಲಿ ಇಲ್ಲಿಯವರೆಗೆ 1,300 ಹೊಸ ಪೌತಿ ಖಾತೆ, 5,800 ಹಳೇ ಪೌತಿ ಖಾತೆ ಹಾಗೂ 150 ಪೋಡಿಗಳನ್ನು ಪೌತಿ ಖಾತೆ ಆಂದೋಲನದ ಮೂಲಕ ಮಾಡಲಾಗಿದೆ. ಜಿಲ್ಲೆಯಲ್ಲಿ ಸುಮಾರು 1831 ಸಾವಿರ ಕಂದಾಯ ಇಲಾಖೆಯ ದಾಖಲೆ ಹಾಳೆಗಳನ್ನು ಈಗಾಗಲೇ ಸ್ಕ್ಯಾನ್ ಮಾಡಲಾಗಿದೆ. 33 ಸಾವಿರ ಕಂದಾಯ ಪ್ರಕರಣಗಳನ್ನು ಇತ್ಯರ್ಥ ಮಾಡಲಾಗಿದೆ ಎಂದು ಹೇಳಿದರು.
ಎರಡೂವರೆ ವರ್ಷಗಳಿಂದ ಕೊಪ್ಪ ಹೋಬಳಿ ಅಭಿವೃದ್ಧಿಗೆ ಸರಿ ಸುಮಾರು 300 ರಿಂದ 400 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ಕೊಪ್ಪದಲ್ಲಿ ನಾಡಕಚೇರಿ ತೆರೆಯಲು 45 ಲಕ್ಷ ರೂ. ಮಂಜೂರು ಮಾಡಲಾಗಿದೆ. ಶೀಘ್ರದಲ್ಲೇ ಕಾಮಗಾರಿ ಪ್ರಾರಂಭವಾಗುತ್ತದೆ. ಜಿಲ್ಲೆಗೆ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯವನ್ನು ತರಲಾಗಿದೆ. ಫಿಲಿಫೈನ್ಸ್ ದೇಶದ ಅಂತಾರಾಷ್ಟ್ರೀಯ ಭತ್ತ ಸಂಶೋಧನಾ ಕೇಂದ್ರಕ್ಕೆ ಭೇಟಿ ನೀಡಿ ನಮ್ಮ ವಾತಾವರಣಕ್ಕೆ ಸರಿಹೊಂದುವ ಹೊಸ ಭತ್ತದ ತಳಿಗಳನ್ನು ಜಿಲ್ಲೆಗೆ ತರಲು ಒಡಂಬಡಿಕೆ ಮಾಡಲಾಗಿದೆ. ಈಗಾಗಲೇ ಗುರುತಿಸಲಾದ ಭತ್ತದ ತಳಿಯನ್ನು ನಾಗಮಂಗಲ ಹಾಗೂ ಮಳವಳ್ಳಿಯ ವಿಜ್ಞಾನಿಗಳು ಅಭಿವೃದ್ಧಿಪಡಿಸಿ ರಾಜ್ಯಕ್ಕೆ ತರಲಾಗುವುದು. ಮುಂದಿನ ವಾರದಿಂದ ಜಿಲ್ಲೆಯಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಭತ್ತ ಮತ್ತು ರಾಗಿ ಖರೀದಿ ಕೇಂದ್ರ ಪ್ರಾರಂಭಿಸಲಾಗುವುದು ಎಂದರು.
ಭಾವುಕರಾದ ಸಚಿವ
ಕಾರ್ಯಕ್ರಮದಲ್ಲಿ ಸಚಿವ ಎನ್.ಚಲುವರಾಯಸ್ವಾಮಿ ಭಾವುಕರಾದರು. ನಾವು ಎಷ್ಟೇ ಪ್ರಾಮಾಣಿಕವಾಗಿ ಜನರ ಸಮಸ್ಯೆಗಳನ್ನು ಆಲಿಸಿ ಪರಿಹರಿಸುವ ನಿಟ್ಟಿನಲ್ಲಿ ಕೆಲಸ ಮಾಡಿದರೂ ಕೆಲವರಿಗೆ ತೃಪ್ತಿಯೇ ಇಲ್ಲ. ಕಳೆದ ಬಾರಿಯ ಸರ್ಕಾರ ಕಳೆದ ಐದು ವರ್ಷದಲ್ಲಿ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮತ್ತು ನಮ್ಮ ಸರ್ಕಾರ ಬಂದ ಎರಡೂವರೆ ವರ್ಷದಲ್ಲಿ ಕೈಗೊಳ್ಳಲಾದ ಅಭಿವೃದ್ಧಿ ಕೆಲಸಗಳನ್ನು ಅವಲೋಕಿಸಿ ನೋಡಿ. ಯಾರು ಎಷ್ಟು ಕೆಲಸ ಮಾಡಿದ್ದಾರೆ ಎಂಬುದರ ಬಗ್ಗೆ ನಿಮಗೆ ಸ್ಪಷ್ಟತೆ ದೊರೆಯುತ್ತದೆ ಎಂದರು.
2018ರಲ್ಲಿ ಅಧಿಕಾರಕ್ಕೆ ಬಂದ ಸಮ್ಮಿಶ್ರ ಸರ್ಕಾರದಲ್ಲಿ ಸಿಎಂ ಸ್ಥಾನ ಗಿಟ್ಟಿಸಿಕೊಂಡ ಎಚ್.ಡಿ.ಕುಮಾರಸ್ವಾಮಿ ಅವರು ರೈತರ ಸಾಲ ಮನ್ನಾ ಮಾಡಲಾಗುವುದು ಎಂದು ಘೋಷಣೆ ಮಾಡಿದರು. ಆದರೆ, ಇಂದಿಗೂ ಎಷ್ಟೋ ರೈತರ ಸಾಲ ಮನ್ನವಾಗಿಲ್ಲ. ಸರ್ಕಾರದಲ್ಲಿ ಮನ್ನಾ ಮಾಡಿದ ಸಾಲದ ಮೊತ್ತ ನಮ್ಮ ಸರ್ಕಾರ ಪಾವತಿಸುತ್ತಿದೆ. ಇಲ್ಲಿಯವರೆಗೆ 480 ಕೋಟಿ ರೂ.ಸಾಲ ಪಾವತಿಸಿದೆ ಹಾಗೂ ಇನ್ನೂ 400 ರಿಂದ 500 ಕೋಟಿ ರೂ.ಬಾಕಿ ಉಳಿದಿದೆ ಎಂದು ಹೇಳಿದರು.
ನಾನು ನಾಲ್ಕು ಬಾರಿ ಶಾಸಕನಾಗಿ, ಒಂದು ಬಾರಿ ಸಂಸದನಾಗಿ ಸೇವೆ ಸಲ್ಲಿಸಿದ್ದೇನೆ. ನಾಗಮಂಗಲ ಕ್ಷೇತ್ರದಿಂದ ಶಾಸಕ ಸ್ಥಾನಕ್ಕಾಗಿ 2018ರಲ್ಲಿ ಸ್ಪರ್ಧಿಸಿದಾಗ ಜನರು ಸರಿಸುಮಾರು 50 ಸಾವಿರ ಮತಗಳ ಅಂತರದಿಂದ ಸೋಲಿಸಿದರು. ಕ್ಷೇತ್ರದ ಅಭಿವೃದ್ಧಿಗಾಗಿ ಸಾಕಷ್ಟು ಕೆಲಸ ಕಾರ್ಯಗಳು ಮಾಡಿದ್ದರೂ ಜನರು ನನ್ನ ಕೈ ಹಿಡಿಯಲಿಲ್ಲ ಎಂದು ಭಾವುಕರಾದರು.
"

ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಮಾತನಾಡಿ, 3,500 ಕೋಟಿ ರೂ.ಅನುದಾನವನ್ನು ಜಿಲ್ಲೆಯ ನೀರಾವರಿ ಅಭಿವೃದ್ಧಿಗೆ ಕೃಷಿ ಸಚಿವರು ತಂದಿದ್ದಾರೆ. ಜಿಲ್ಲೆಯ ಇತಿಹಾಸದಲ್ಲೇ ಇಷ್ಟು ಅನುದಾನವನ್ನು ತಂದಿಲ್ಲ. ಕೊಪ್ಪ ಭಾಗದ ವಿವಿಧ ಕಾಮಗಾರಿಗಳಿಗೆ 137.99 ಕೋಟಿ ರೂ.ಅನುದಾನ ಬಿಡುಗಡೆ ಮಾಡಿದ್ದಾರೆ ಎಂದರು. ಮೈ ಶುಗರ್ ಸಕ್ಕರೆ ಕಾರ್ಖಾನೆ ಸ್ಥಗಿತಗೊಂಡಿತ್ತು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ಕೃಷಿ ಸಚಿವರು ಮುಖ್ಯಮಂತ್ರಿಗಳ ಬಳಿ ಪ್ರಸ್ತಾಪಿಸಿದಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 50 ಕೋಟಿ ರೂ.ಅನುದಾನವನ್ನು ಮೈ ಶುಗರ್ ಕಾರ್ಖಾನೆಗೆ ಬಿಡುಗಡೆ ಮಾಡಿದರು. ಈಗ ಕಾರ್ಖಾನೆ ಪುನಶ್ಚೇತನ ಮಾಡಿದ್ದಾರೆ ಎಂದು ತಿಳಿಸಿದರು.

191 ಅರ್ಜಿ ಸ್ವೀಕಾರ
ಕೊಪ್ಪ ಹೋಬಳಿಯ 8 ಗ್ರಾಪಂಗಳಿಂದ ಆಗಮಿಸಿದ್ದ ಸಾರ್ವಜನಿಕರು ಮತ್ತು ರೈತರು ಕಂದಾಯ ಇಲಾಖೆಗೆ 90, ಗ್ರಾಮೀಣಾಭಿವೃದ್ಧಿಗೆ 54, ಆಹಾರ ಇಲಾಖೆಗೆ 1, ಸಾರಿಗೆ ಇಲಾಖೆ 1, ಇಂಧನ ಇಲಾಖೆ 10, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ 8, ಕಾವೇರಿ ನೀರಾವರಿ ನಿಗಮಕ್ಕೆ ಸಂಬಂಧಿಸಿದಂತೆ 3 ಅರ್ಜಿಗಳನ್ನು ಸಲ್ಲಿಸಿದರು. ಒಟ್ಟು 191 ಅರ್ಜಿಗಳನ್ನು ಸ್ವೀಕರಿಸಲಾಯಿತು. ವಿವಿಧ ಇಲಾಖೆಗಳಿಂದ ಸಾರ್ವಜನಿಕರಿಗೆ ಹಾಗೂ ರೈತರಿಗೆ ಸರ್ಕಾರದಿಂದ ದೊರಕುವ ಸೌಲಭ್ಯಗಳ ಕುರಿತು ಮಾಹಿತಿ ಕೇಂದ್ರಗಳನ್ನು ತೆರೆದು ಅರಿವು ಮೂಡಿಸಲಾಯಿತು. ಕೊಪ್ಪ ಗ್ರಾಮದಿಂದ ನಾಗಮಂಗಲ ಮಾರ್ಗವಾಗಿ ಬಿಜಿ ನಗರಕ್ಕೆ ಹೊಸದಾಗಿ ಸರ್ಕಾರಿ ಸಾರಿಗೆಗೆ ಸಚಿವ ಎನ್.ಚಲುವರಾಯಸ್ವಾಮಿ ಚಾಲನೆ ನೀಡಿದರು.
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸಚಿನ್‌ಎನ್.ಚಲುವರಾಯಸ್ವಾಮಿ, ನಿರ್ದೇಶಕ ಕೆ.ಸಿ.ಜೋಗಿಗೌಡ, ರಾಜ್ಯ ಸಣ್ಣ ಕೈಗಾರಿಕೆಗಳ ಉಪಾಧ್ಯಕ್ಷೆ ವಿಜಯಲಕ್ಷ್ಮೀ ರಘುನಂದನ್, ಜಿಲ್ಲಾಧಿಕಾರಿ ಡಾ.ಕುಮಾರ, ಜಿಪಂ ಸಿಇಒ ಕೆ.ಆರ್.ನಂದಿನಿ, ಉಪ ವಿಭಾಗಾಧಿಕಾರಿ ಶಿವಮೂರ್ತಿ, ತಹಸೀಲ್ದಾರ್ ಪರಶುರಾಮ್ ಸತ್ತಿಗೆರೆ, ತಾಪಂ ಇಒ ರಾಮಲಿಂಗಯ್ಯ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಅಶೋಕ್, ಕಾವೇರಿ ನೀರಾವರಿ ನಿಗಮದ ರಘುರಾಮ್, ಗ್ರಾಪಂ ಅಧ್ಯಕ್ಷ ಸಂತೋಷ್ ಕೊಟ್ಟಿಗೆಯಾರ್, ಸದಸ್ಯರಾದ ಪರ್ವಿಜ್ ಅಹಮದ್, ಕುಮಾರ್ ಕೊಪ್ಪ, ನಾಗಮಂಗಲ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎನ್.ದಿವಾಕರ್, ತಾಪಂ ಮಾಜಿ ಉಪಾಧ್ಯಕ್ಷ ಬೆಕ್ಕಳಲೆ ರಘು, ಮುಖಂಡರಾದ ಚಿಕ್ಕೊನಹಳ್ಳಿ ತಮ್ಮಯ್ಯ, ಕ್ರಾಂತಿಸಿಂಹ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net