ಮದ್ದೂರು ನಗರಸಭೆಯಿಂದ ಗೆಜ್ಜಲಗೆರೆ ಗ್ರಾಮ ಪಂಚಾಯಿತಿ ಕೈಬಿಡಬೇಕೆಂದು ಮದ್ದೂರು ತಾಲೂಕಿನ ಗೆಜ್ಜಲಗೆರೆಯಲ್ಲಿ 21 ದಿನದಿಂದ ನಡೆಯುತ್ತಿರುವ ಅನಿರ್ದಿಷ್ಟಾವಧಿ ಪ್ರತಿಭಟನೆಯಲ್ಲಿ ವಿಪಕ್ಷ ನಾಯಕ ಆರ್.ಅಶೋಕ್ ಪಾಲ್ಗೊಂಡು ಮಾತನಾಡಿದರು. ಛಲವಾದಿ ನಾರಾಯಣಸ್ವಾಮಿ, ಡಿ.ಸಿ.ತಮ್ಮಣ್ಣ, ಸುನಂದಾ ಜಯರಾಮ್, ಎಸ್.ಪಿ.ಸ್ವಾಮಿ, ಮಾದನಾಯಕನಹಳ್ಳಿ ರಾಜಣ್ಣ ಇದ್ದರು.
Published on:
Copied
Follow Us
ಮದ್ದೂರು:ಮದ್ದೂರು ನಗರಸಭೆಯಿಂದ ಗೆಜ್ಜಲಗೆರೆ ಗ್ರಾಮ ಪಂಚಾಯಿತಿಯನ್ನು ಕೈಬಿಡದಿದ್ದರೆ ಸದನದಲ್ಲೂ ಈ ವಿಚಾರವಾಗಿ ಹೋರಾಟ ಮಾಡುವುದಾಗಿ ವಿಪಕ್ಷ ನಾಯಕ ಆರ್.ಅಶೋಕ್ ತಿಳಿಸಿದರು.
ತಾಲೂಕಿನ ಗೆಜ್ಜಲಗೆರೆ ಗ್ರಾಪಂ ಆವರಣದಲ್ಲಿ ಮದ್ದೂರು ನಗರಸಭೆಗೆ ಗೆಜ್ಜಲಗೆರೆ ಗ್ರಾಪಂನ್ನು ಸೇರ್ಪಡೆ ಗೊಳಿಸಿರುವುದನ್ನು ಖಂಡಿಸಿ 21 ದಿನಗಳಿಂದ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿಯಲ್ಲಿ ಭಾನುವಾರ ಭಾಗವಹಿಸಿ ಮಾತನಾಡಿದರು.
ಗ್ರಾಮ ಸ್ವರಾಜ್ಯ ಎಂಬ ಗಾಂಧೀಜಿ ಅವರ ಕನಸಿಗೆ ಇಲ್ಲಿನ ಶಾಸಕರು ಏನು ಬೆಲೆ ಕೊಟ್ಟಿದ್ದಾರೆ? ಸೇರ್ಪಡೆಗೂ ಮೊದಲೇ ಗ್ರಾಮಸ್ಥರು ಹಾಗೂ ಗ್ರಾಮದ ಮುಖಂಡರ ಒಪ್ಪಿಗೆ, ಅಭಿಪ್ರಾಯವನ್ನು ಪಡೆಯದೆ ಗ್ರಾಮಕ್ಕೆ ಇಲ್ಲಿನ ಶಾಸಕರು ದ್ರೋಹ ಮಾಡಿದ್ದಾರೆ ಎಂದು ಆರೋಪಿಸಿದರು.
ಗ್ರಾಪಂಗೆ ಇಲ್ಲಿರುವ ಕೈಗಾರಿಕಾ ಪ್ರದೇಶದಿಂದ ಬರುತ್ತಿರುವ ಆದಾಯವನ್ನು ಗಮನಿಸಿ ಮದ್ದೂರಿನಿಂದ 6 ಕಿ.ಮೀ. ದೂರದ ಗ್ರಾಮವನ್ನು ನಗರಸಭೆಗೆ ಸೇರ್ಪಡೆ ಮಾಡಲು ಏಕಪಕ್ಷೀಯ ತೀರ್ಮಾನ ತೆಗೆದುಕೊಂಡಿದ್ದಾರೆ ಎಂದು ಗುಡುಗಿದರು.
ನಗರಸಭೆಗೆ ಗೆಜ್ಜಲಗೆರೆ ಗ್ರಾಮ ಸೇರ್ಪಡೆಯಾದರೆ ಕಂದಾಯ 10 ಪಟ್ಟು ಹೆಚ್ಚಾಗುವುದರ ಜತೆಗೆ ಕಸ ವಿಲೇವಾರಿ, ಕುಡಿಯುವ ನೀರು ಸೇರಿದಂತೆ ಎಲ್ಲದಕ್ಕೂ ತೆರಿಗೆ ಹೆಚ್ಚಾಗುತ್ತದೆ. ಎಲ್ಲವನ್ನೂ ನಗರ ಮಾಡಿದರೆ ಅನ್ನ ಬೆಳೆಯುವುದು ಎಲ್ಲಿಂದ? ಗ್ರಾ.ಪಂ ಗೆ ಬರುವ ಸರ್ಕಾರದ ಎಲ್ಲ ಯೋಜನೆಗಳು ಬರುವುದಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.
ಸಿದ್ದರಾಮಯ್ಯ ಅವರ ಅಧಿಕಾರ ಅವಧಿಯಲ್ಲಿ ಈ ಹಿಂದೆ ಮುಖ್ಯಮಂತ್ರಿಗಳಾಗಿದ್ದವರೆಲ್ಲರನ್ನು ಸೇರಿಸಿದರೆ ಆಗುವಷ್ಟು ಸರ್ಕಾರದ ಮೇಲೆ ಸಾಲ ಮಾಡಿದ್ದಾರೆ ಎಂದ ಅವರು, ಹಿಂದೆ ಗುಂಡೂರಾವ್ ಅವರ ಸರ್ಕಾರವನ್ನೇ ಬೀಳಿಸಿದ ಗೆಜ್ಜಲಗೆರೆಯನ್ನು ನಗರಸಭೆಗೆ ಸೇರಿಸಿರುವ ಕ್ರಮ ಸರಿಯಿಲ್ಲ ಎಂದರು.
ಇಲ್ಲಿನ ಶಾಸಕರು ಟ್ರಂಪ್ ಆಗಲಿಕ್ಕೆ ಹೊರಟಿದ್ದಾರೆ. ಈ ಬಗ್ಗೆ ಸರ್ಕಾರದಿಂದ ಅಧಿಸೂಚನೆ ಹೊರಡಿಸಲಾಗಿದ್ದರೂ ಕ್ಯಾಬಿನೆಟ್ ಸಭೆಯಲ್ಲಿ ಅದನ್ನೇ ರದ್ದುಪಡಿಸಲು ನಿಮ್ಮಿಂದ ಸಾಧ್ಯವೆಂದ ಅವರು ಒಂದು ವೇಳೆ ನೀವು ಇದನ್ನು ನೀವೇ ರದ್ದುಪಡಿಸದೆ ಮೊಂಡಾಟ ಮಾಡಿದರೆ ಮುಂದೆ ನಮ್ಮ ಸರ್ಕಾರ ಬಂದ ಮೇಲೆ ಮತ್ತೆ ಗ್ರಾಮ ಪಂಚಾಯತಿ ಮಾಡುತ್ತೇವೆ ಎಂದು ಗುಡುಗಿದರು.
ಈ ಗ್ರಾಮ ಪಂಚಾಯತಿ ಕಟ್ಟಡವನ್ನು ನಾನು ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದಾಗ ಉದ್ಘಾಟನೆ ಮಾಡಿದ್ದೆ. ಈಗ ಇದೇ ಪಂಚಾಯತಿಯ ಉಳಿವಿಗಾಗಿ ಹೋರಾಟ ಮಾಡಲು ಬಂದಿದ್ದೇನೆ ಎಂದರು.
ಮಾಜಿ ಶಾಸಕ ಡಿ.ಸಿ.ತಮ್ಮಣ್ಣ ಮಾತನಾಡಿ, ಈ ಹಿಂದೆ ನಾನು ಶಾಸಕನಾಗಿದ್ದಾಗ ಮದ್ದೂರು ಪುರಸಭೆಯನ್ನು ನಗರಸಭೆ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆಯನ್ನು ಆಗಲೇ ಕಳುಹಿಸಿದ್ದೆ. ಆದರೆ ಸ್ಥಳೀಯ ಪುರಸಭಾ ಸದಸ್ಯರು ನಗರಸಭೆಗೆ ವಿರೋಧಿಸಿದ ಹಿನ್ನೆಲೆಯಲ್ಲಿ ಇದರಿಂದ ಗ್ರಾಮವಾಸಿಗಳಿಗೆ ಹಲವಾರು ರೀತಿಯಲ್ಲಿ ತೊಂದರೆಯಾಗುತ್ತದೆ ಎಂದು ನನಗೂ ಅರಿವಾಗಿ ನಿರ್ಧಾರದಿಂದ ಹಿಂದೆ ಸರಿದೆ ಎಂದರು.
ಬಿಜೆಪಿ ಮುಖಂಡ ಎಸ್.ಪಿ.ಸ್ವಾಮಿ ಮಾತನಾಡಿ, ಹಿಂದೆ ಗುಂಡೂರಾವ್ ಅವರು ಮುಖ್ಯಮಂತ್ರಿಗಳಾಗಿದ್ದ ವೇಳೆ ಗೆಜ್ಜಲಗೆರೆಯಲ್ಲಿ ರೈತರು ಹೋರಾಟ ನಡೆಸುತ್ತಿದ್ದ ವೇಳೆ ಗೋಲಿಬಾರ್ ನಡೆದು ಇಬ್ಬರು ರೈತರು ಸಾವನ್ನಪ್ಪಿದರು ಬಳಿಕ ಗುಂಡೂರಾವ್ ಅವರನ್ನೇ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುವಂತೆ ಮಾಡಿದ ಇತಿಹಾಸ ಗೆಜ್ಜಲಗೆರೆಗಿದೆ ಎಂದರು.
ಮೆಲ್ಮನೆ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ ಮಾತನಾಡಿ, ಚುನಾವಣೆಯ ವೇಳೆ ಮತ ಕೇಳಲು ಬಂದಾಗ ಇದ್ದ ವಿನಯತೆ ಇಲ್ಲಿಯಾ ಶಾಸಕರಿಗೆ ಈಗ ಏಕೆ ಇಲ್ಲ? ಶಾಸಕರು ಗೆಜ್ಜಲಗೆರೆಯಲ್ಲಿ ನಡೆಯುತ್ತಿರುವ ಹೋರಾಟದ ಬಗ್ಗೆ ಯಾರಿಗೂ ಜಗ್ಗಲ್ಲ ಬಗ್ಗಲ್ಲ ಎಂದು ಹೇಳಿಕೆ ನೀಡುವುದು ಸರಿಯಲ್ಲ. ಗೆಜ್ಜಲಗೆರೆಯ ಗ್ರಾಮದವರ ಒಪ್ಪಿಗೆಯಿಲ್ಲದೇ ಏಕೆ ಬಲವಂತದಿಂದ ನಗರಸಭೆಗೆ ಸೇರಿಸುತ್ತೀರಿ ಎಂದು ಪ್ರಶ್ನಿಸಿದರು.
ನಂತರ ನೆರೆಯ ಗೊರವನಹಳ್ಳಿ ಗ್ರಾ.ಪಂ.ಮುಂದೆ ನಡೆಯುತ್ತಿದ್ದ ಪ್ರತಿಭಟನಾ ಸ್ಥಳಕ್ಕೂ ತೆರಳಿ ಅಲ್ಲಿಯೂ ಪ್ರತಿಭಟನೆಗೆ ಬೆಂಬಲ ಸೂಚಿಸಿದರು.
ಈ ವೇಳೆ ಗ್ರಾ.ಪಂನ ಗೇಟ್‌ಗೆ ಬೀಗ ಹಾಕಿದ್ದರಿಂದ ಪ್ರತಿಭಟನಾಕಾರರು ಆಕ್ರೋಶಗೊಂಡು ಪ್ರತಿಭಟನಾಕಾರರು ಬೀಗವನ್ನು ಕಲ್ಲಿನಿಂದ ಒಡೆದ ಘಟನೆ ನಡೆಯಿತು.
ರೈತಪರ ಹೋರಾಟಗಾತಿ ಸುನಂದಾ ಜಯರಾಮು, ಮನ್ ಮುಲ್ ನಿರ್ದೇಶಕ ಎಸ್.ಪಿ.ಸ್ವಾಮಿ, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಇಂದ್ರೇಶ್, ಬಿಜೆಪಿ ಮುಖಂಡರಾದ ಇಂಡುವಾಳು ಸಚ್ಚಿದಾನಂದ, ಮಾದನಾಯಕನಹಳ್ಳಿ ರಾಜಣ್ಣ, ಅಶೋಕ್ ಜಯರಾಮ್ ಸೇರಿದಂತೆ ಇತರರಿದ್ದರು.