ಮದ್ದೂರು ನಗರದ ಶಿವಪುರದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಮದ್ದೂರು ಬ್ಲಾಕ್ ಕಾಂಗ್ರೆಸ್ ಸಮಿತಿ ಪರಿಶಿಷ್ಟ ಜಾತಿ ವಿಭಾಗದ ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕಂಠಿಸುರೇಶ್ ಮಾತನಾಡಿದರು. ಮಹದೇವಯ್ಯ, ದೊರೆಸ್ವಾಮಿ, ವನಿತಾ, ಮರಿದೇವರು, ಭಾನುಪ್ರಕಾಶ್ ಇದ್ದರು.
Published on:
Copied
Follow Us
ಮದ್ದೂರು:ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಬೆಂಬಲಿತ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಜಯಶೀಲರಾಗುವಂತೆ ಮಾಡಲು ಪರಿಶಿಷ್ಟ ಜಾತಿ ಮತ್ತು ಪಂಗಡಗಳ ವಿವಿಧ ವಿಭಾಗಗಳ ಪದಾಧಿಕಾರಿಗಳು, ಮುಖಂಡರು ಹಾಗೂ ಕಾರ್ಯಕರ್ತರು ಇಂದಿನಿಂದಲೇ ಕಾರ್ಯಪ್ರವೃತ್ತರಾಗಬೇಕೆಂದು ಜಿಲ್ಲಾ ಮಾಜಿ ಅಧ್ಯಕ್ಷ ಕಂಠಿ ಸುರೇಶ್ ತಿಳಿಸಿದರು.
ನಗರದ ಶಿವಪುರದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ನಡೆದ ಮದ್ದೂರು ಬ್ಲಾಕ್ ಕಾಂಗ್ರೆಸ್ ಸಮಿತಿ ಪರಿಶಿಷ್ಟ ಜಾತಿ ವಿಭಾಗದ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.
ರಾಜ್ಯ ಪರಿಶಿಷ್ಟ ಜಾತಿ ಕಾಂಗ್ರೆಸ್ (ಕೆಪಿಸಿಸಿ) ರಾಜ್ಯಾಧ್ಯಕ್ಷ ಧರ್ಮಸೇನಾ ಅವರ ನಿರ್ದೇಶನದ ಮೇರೆಗೆ ಮದ್ದೂರು ಬ್ಲಾಕ್ ಕಾಂಗ್ರೆಸ್ ಸಮಿತಿ ಪರಿಶಿಷ್ಟ ಜಾತಿ ವಿಭಾಗದ ವತಿಯಿಂದ ವಿಶೇಷ ಸಭೆ ಕರೆಯಲಾಗಿದೆ ಎಂದರು.
ಪ್ರತಿ ಗ್ರಾಮ ಪಂಚಾಯಿತಿಯಿಂದ ಎಸ್‌ಸಿ, ಎಸ್.ಟಿ.ಸಮುದಾಯದ ಉಪ ಜಾತಿಗಳು ಸೇರಿದಂತೆ 12 ಮಂದಿ ಕಾಂಗ್ರೆಸ್ ಸದಸ್ಯರನ್ನು ಹಾಗೂ ನಗರಸಭೆಯ ಪ್ರತಿಯೊಂದು ವಾರ್ಡಿನಿಂದ 12 ಮಂದಿ ಪರಿಶಿಷ್ಟ ಜನಾಂಗದ ಸದಸ್ಯರನ್ನು ಸಂಘಟಿತವಾಗಿ ಆಯ್ಕೆ ಮಾಡಬೇಕು. ಜತೆಗೆ ಮುಂಬರುವ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಪಕ್ಷದ ಸಂಘಟನೆ ಬಲಪಡಿಸಲು ಹಗಲಿರುಳು ಶ್ರಮಿಸಬೇಕೆಂದು ತಿಳಿಸಿದರು.
ಪರಿಶಿಷ್ಟಜಾತಿ ವಿಭಾಗದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹದೇವಯ್ಯ ಮಾತನಾಡಿ, ಶಾಸಕ ಕೆ.ಎಂ.ಉದಯ್ ಸರ್ಕಾರದಿಂದ ವಿಶೇಷ ಅನುದಾನ ಕ್ಷೇತ್ರದ ಸರ್ವತೋಮುಖ ಅಬಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದಾರೆ. ಆದ್ದರಿಂದ ಮುಂದಿನ ದಿನಗಳಲ್ಲಿ ಪರಿಶಿಷ್ಟಜಾತಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಶಾಸಕರಿಗೆ ಬೃಹತ್ ಮಟ್ಟದಲ್ಲಿ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.
ಎಸ್‌ಸಿ.ಎಸ್.ಟಿ ವಿಭಾಗದ ಜಿಲ್ಲಾ ಕಾಂಗ್ರೆಸ್ ವೀಕ್ಷಕ ದೊರೆಸ್ವಾಮಿ, ನಗರಸಭಾ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷೆ ವನಿತಾ, ಪುರಸಭಾ ಮಾಜಿ ಸದಸ್ಯ ಮರಿದೇವರು, ಮುಖಂಡರಾದ ರಾಜೇಂದ್ರ, ಸಿದ್ದರಾಜು, ಕುಮಾರ್, ಆದೀಶ್, ಭಾನುಪ್ರಕಾಶ್, ಪುಟ್ಟಸ್ವಾಮಿ, ಸುಂದರಮ್ಮ ಸೇರಿದಂತೆ ಇತರರಿದ್ದರು.