ಕೆ.ಎಂ.ದೊಡ್ಡಿ : ಮಾಜಿ ಸಂಸದ, ಕಾವೇರಿ ನದಿ ನೀರಿನ ಹೋರಾಟಗಾರ ದಿವಂಗತ ಜಿ. ಮಾದೇಗೌಡರ ಬಗ್ಗೆ ನಾಲಗೆ ಹರಿಬಿಟ್ಟಿರುವ ಮಾಜಿ ಸಂಸದ ಎಲ್.ಆರ್. ಶಿವರಾಮೇಗೌಡ ಸಣ್ಣತನ ಪ್ರದರ್ಶನ ಮಾಡಿದ್ದಾರೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಎಂ. ನಂಜೇಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವ್ಯಕ್ತಿಯೊಬ್ಬರ ಜತೆ ಮೊಬೈಲ್‌ನಲ್ಲಿ ಮಾತನಾಡುತ್ತ ಮಾದೇಗೌಡ ಸಂಸದರಾಗಿದ್ದಾಗ ನನಗೆ ನಾಗಮಂಗಲ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಟಿಕೆಟ್ ತಪ್ಪಿಸಿದ್ದರು ಎಂದು ಗಾಂಧಿವಾದಿ ಬಗ್ಗೆ ಲಘುವಾಗಿ ಮಾತನಾಡಿರುವ ಶಿವರಾಮೇಗೌಡ ವಿರುದ್ಧ ಕಾಂಗ್ರೆಸ್ ಪಕ್ಷ ಕ್ರಮ ಜರುಗಿಸಬೇಕು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ಈ ಹಿಂದೆ ಕೂಡ ಜಿ. ಮಾದೇಗೌಡರ ಬಗ್ಗೆ ಪಕ್ಷದ ಕಾರ್ಯಕರ್ತೆ ಒಬ್ಬರ ಜತೆ ಮೊಬೈಲ್‌ನಲ್ಲಿ ಮಾತನಾಡುವ ವೇಳೆ ಕೂಡ ಅವಹೇಳನ ಮಾಡಿದ್ದರು. ಆ ವೇಳೆ ಸಾರ್ವಜನಿಕರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ ಬಳಿಕ ಕ್ಷಮೆ ಕೋರಿದ್ದು ಈಗ ಮತ್ತೆ ಅವಹೇಳನಕಾರಿಯಾಗಿ ಮತನಾಡಿದ್ದಾರೆ ಎಂದು ಕಿಡಿಕಾರಿದರು.
ಜಿ.ಮಾದೇಗೌಡರು ಶಿಕ್ಷಣ, ಆರೋಗ್ಯ, ಧಾರ್ಮಿಕ ಮತ್ತು ರಾಜಕೀಯ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಅಪಾರ. ಗೌಡರು ಜೀವತಾವಧಿವರೆಗೂ ರೈತರಿಗಾಗಿ ಹೋರಾಟ ಮಾಡಿದ್ದ ಧೀಮಂತ ವ್ಯಕ್ತಿ. ಅಂತವರ ಬಗ್ಗೆ ಹಗುರವಾಗಿ ಮಾತನಾಡಿರುವ ಶಿವರಾಮೇಗೌಡರಿಗೆ ಜನ ಸರಿಯಾದ ಬುದ್ಧಿ ಕಲಿಸಲಿದ್ದಾರೆ ಎಂದು ಎಚ್ಚರಿಸಿದರು.
ರಾಜಕೀಯ ಹತಾಶೆಯಿಂದ ಕಾವೇರಿ ಪುತ್ರ ಜಿ. ಮಾದೇಗೌಡ ಸೇರಿದಂತೆ ಮಾಜಿ ಸಂಸದ ಅಂಬರೀಶ್, ಹಲವರ ಬಗ್ಗೆ ನಾಲಿಗೆ ಹರಿಬಿಡುವ ಮೂಲಕ ತಾನೊಬ್ಬ ಮಾನಸಿಕ ಅಸ್ವಸ್ಥ ಎಂದು ಸಾಭೀತು ಮಾಡಿದ್ದು ಇಂಥ ವ್ಯಕ್ತಿ ಸಾರ್ವಜನಿಕ ಕ್ಷೇತ್ರದಲ್ಲಿ ಇರಲು ಅರ್ಹನಲ್ಲ. ಶಿವರಾಮೇಗೌಡ ತಕ್ಷಣ ಸಾರ್ವಜನಿವಾಗಿ ಕ್ಷಮೆ ಕೇಳಬೇಕು. ತಪ್ಪಿದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.