ಏತ ನೀರಾವರಿ ಯೋಜನೆ ಶೀಘ್ರ ಪೂರ್ಣ

ನಾಗಮಂಗಲ ತಾಲೂಕಿನ ಬೋಗಾದಿಯಲ್ಲಿ ತಾಲೂಕು ಆಡಳಿತದ ವತಿಯಿಂದ ಆಯೋಜಿಸಿದ್ದ ಪ್ರಜಾಸೇವಾ ಆಂದೋಲನ ಕಾರ್ಯಕ್ರಮವನ್ನು ಜಲಸಂಪನ್ಮೂಲ ಸಚಿವ ಎನ್.ಚಲುವರಾಯಸ್ವಾಮಿ ಉದ್ಘಾಟಿಸಿದರು. ಡಾ.ಅಶೋಕ್, ಚಲುವರಾಜು, ಸತೀಶ್ ಇದ್ದರು.
ನಾಗಮಂಗಲ ತಾಲೂಕಿನ ಬೋಗಾದಿಯಲ್ಲಿ ತಾಲೂಕು ಆಡಳಿತದ ವತಿಯಿಂದ ಆಯೋಜಿಸಿದ್ದ ಪ್ರಜಾಸೇವಾ ಆಂದೋಲನ ಕಾರ್ಯಕ್ರಮವನ್ನು ಜಲಸಂಪನ್ಮೂಲ ಸಚಿವ ಎನ್.ಚಲುವರಾಯಸ್ವಾಮಿ ಉದ್ಘಾಟಿಸಿದರು. ಡಾ.ಅಶೋಕ್, ಚಲುವರಾಜು, ಸತೀಶ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಜಲಸಂಪನ್ಮೂಲ ಸಚಿವ ಎನ್.ಚಲುವರಾಯಸ್ವಾಮಿ ಭರವಸೆ
ನಾಗಮಂಗಲ : ತಾಲೂಕಿನ ಬಹುನಿರೀಕ್ಷಿತ ನೀರಾವರಿ ಯೋಜನೆಯಾಗಿರುವ ಗೂಡೆಹೊಸಹಳ್ಳಿ ಏತ ನೀರಾವರಿ ಯೋಜನೆ ಕಾಮಗಾರಿ 2027ರ ಅಂತ್ಯದೊಳಗೆ ಪೂರ್ಣಗೊಳ್ಳಲಿದ್ದು ತಾಲೂಕಿನ ಬೋಗಾದಿ ಹಾಗೂ ಬಿಂಡಿಗನವಿಲೆ ಹೋಬಳಿಯ ಜನರ ಹಲವು ದಶಕಗಳ ಕನಸು ಸಾಕಾರಗೊಳ್ಳಲಿದೆ ಎಂದು ಜಲಸಂಪನ್ಮೂಲ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.
ತಾಲೂಕಿನ ಬೋಗಾದಿಯ ಖಾಸಗಿ ಸಮುದಾಯ ಭವನದಲ್ಲಿ ತಾಲೂಕು ಆಡಳಿತದ ವತಿಯಿಂದ ಆಯೋಜಿಸಿದ್ದ ಪ್ರಜಾಸೇವಾ ಆಂದೋಲನ ಕಾರ್ಯಕ್ರಮ ಶನಿವಾರ ಉದ್ಘಾಟಿಸಿ ಮಾತನಾಡಿದರು.
ಬೋಗಾದಿ ಗ್ರಾಮ ಪಂಚಾಯಿತಿ ವ್ಯಾಪ್ತಿ ಹಾಗೂ ಬಿಂಡಿಗನವಿಲೆ ಹೋಬಳಿ ವ್ಯಾಪ್ತಿಗೆ ಯಾವುದೇ ನೀರಾವರಿ ಯೋಜನೆಗಳಿಲ್ಲದೆ ಜನ-ಜಾನುವಾರುಗಳಿಗೆ ನೀರಿನ ಸಮಸ್ಯೆಯಾಗುತ್ತಿತ್ತು. ಕಳೆದ ಬಾರಿ ನಾನು ಶಾಸಕನಾಗಿದ್ದ ಸಂದರ್ಭದಲ್ಲಿ ಈ ಯೋಜನೆಗೆ ಭೂಮಿಪೂಜೆ ನೆರವೇರಿಸಿದ್ದೆ. ಆಗಿನ ಸರ್ಕಾರ ನೀಡಿದ ಅನುದಾನಕ್ಕೆ ಮತ್ತಷ್ಟು ಅನುದಾನವನ್ನು ನಮ್ಮ ಸರ್ಕಾರ ಹೆಚ್ಚುವರಿಯಾಗಿ ನೀಡುವ ಮೂಲಕ ಕಾಮಗಾರಿಗೆ ಮತ್ತಷ್ಟು ವೇಗ ನೀಡಲಾಗಿದೆ. ಹೇಮಾವತಿ ನೀರಿನಿಂದ ಕೆ.ಆರ್.ಪೇಟೆಯ ಹಲವು ಭಾಗಗಳ ಕೆರೆಗಳಿಗೆ ಈ ಯೋಜನೆಯಿಂದ ನೀರು ತುಂಬಿಸುವ ಜತೆಗೆ ಅಲ್ಲಿಂದ ಬೋಗಾದಿ ಭಾಗದ ಹಲವು ಕೆರೆ- ಕಟ್ಟೆಗಳಿಗೆ ಏತ ನೀರಾವರಿ ಯೋಜನೆಯ ಮೂಲಕ ನೀರು ತುಂಬಿಸುವ ಕೆಲಸ ಮಾಡಲಾಗುತ್ತಿದೆ. 2027ರ ಅಂತ್ಯದೊಳಗೆ 350 ಕೋಟಿ ರೂ.ವೆಚ್ಚದ ಏತ ನೀರಾವರಿ ಯೋಜನೆ ಪೂರ್ಣಗೊಂಡು ತಾಲೂಕಿನ ಕೆರೆ-ಕಟ್ಟೆಗಳಿಗೆ ನೀರು ತುಂಬಿಸಲಾಗುವುದು.
ಈ ವರ್ಷ ಮಳೆ ಸರಿಯಾಗಿ ಆಗದಿರುವುದರಿಂದ ಬರ ಬಂದಿದೆ. ಆದರೆ ಕುಡಿಯುವ ನೀರಿಗೆ ಯಾವುದೇ ಸಮಸ್ಯೆಯಾಗದಂತೆ ಕ್ರಮ ವಹಿಸಲಾಗಿದ್ದು, ಒಂದೊಂದು ಕ್ಷೇತ್ರಕ್ಕೂ 1 ಕೋಟಿ ರೂ.ಅನುದಾನ ಬಿಡುಗಡೆ ಮಾಡಲಾಗಿದೆ ಎಂದರು.
ತಾಲೂಕಿನಲ್ಲಿ ಕಳೆದ 3 ವರ್ಷಗಳಲ್ಲಿ 25 ಸಾವಿರ ಪೌತಿ ಖಾತೆಗಳು, 4 ಸಾವಿರ ಪಹಣಿ ತಿದ್ದುಪಡಿ ಮಾಡಲಾಗಿದೆ. ಎಸಿ ಹಾಗೂ ತಹಸೀಲ್ದಾರ್ ಕೋರ್ಟ್‌ನ ಕೇಸ್‌ಗಳ ಇತ್ಯರ್ಥದಲ್ಲಿ ರಾಜ್ಯಕ್ಕೆ ಮೊದಲಿನ ಸ್ಥಾನದಲ್ಲಿದ್ದೇವೆ.
ಜನಪರವಾಗಿ ನಮ್ಮ ಸರ್ಕಾರ ಆಡಳಿತ ನಡೆಸುತ್ತಿದೆ. ದೇಶದಲ್ಲಿಯೇ ಪ್ರಜೆಗಳ ಸಮಸ್ಯೆ ಕೇಳಲು ಒಂದು ಇಲಾಖೆ ಸ್ಥಾಪಿಸಿರುವುದು ಡಿ.ಕೆ.ಶಿವಕುಮಾರ್ ನೇತೃತ್ವದ ಸರ್ಕಾರ ಮಾತ್ರವಾಗಿದೆ. ರಾಷ್ಟ್ರದಲ್ಲಿ ಬೇರೆ ಯಾವ ರಾಜ್ಯದಲ್ಲಿಯೂ ಇಂತಹ ಆಡಳಿತವಿಲ್ಲ. 20 ರಾಜ್ಯಗಳಲ್ಲಿ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದ್ದರೂ ಮುಂದುವರಿಸಲು ಸಾಧ್ಯವಾಗಿಲ್ಲ. ಆದರೆ ನಮ್ಮ ರಾಜ್ಯದಲ್ಲಿ ಮಾತ್ರ ಕೊಟ್ಟಂತಹ ಭರವಸೆಯಂತೆ 5 ಗ್ಯಾರಂಟಿಗಳನ್ನು ಪೂರೈಸಿಕೊಂಡು ಬಂದಿದ್ದೇವೆ. ಗ್ಯಾರಂಟಿ ಯೋಜನೆಗಳ ಜತೆಗೆ ಅಭಿವೃದ್ಧಿ ಕೆಲಸಗಳನ್ನು ಬೇರೆ ಪಕ್ಷಗಳ ಸರ್ಕಾರಗಳಿಗಿಂತಲೂ ಹೆಚ್ಚು ಮಾಡುತ್ತಿದ್ದೇವೆ. 2018 ರಿಂದ 2023 ರವರೆಗೆ ಯಾವುದೇ ಗ್ಯಾರಂಟಿಗಳನ್ನು ಕೊಟ್ಟಿಲ್ಲ, ಯಾವ ಅಭಿವೃದ್ಧಿ ಕೆಲಸಗಳನ್ನು ಮಾಡಿಲ್ಲ. ಕೇಂದ್ರಕ್ಕೆ ಹೆಚ್ಚು ತೆರಿಗೆ ಪಾವತಿಸುವವರಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಆದರೆ ಅವರು ನಮಗೆ ಹಿಂದಿರುಗಿಸಿ ಕೊಡುವ ಅನುದಾನದಲ್ಲಿ 10ನೇ ಸ್ಥಾನದಲ್ಲಿ ನಮ್ಮ ರಾಜ್ಯವಿರುತ್ತದೆ. ಮೊದಲಿಗೆ ಉತ್ತರ ಪ್ರದೇಶ, ಗುಜರಾತ್, ಬಿಹಾರ ರಾಜ್ಯಗಳಿಗೆ ಕೊಡುತ್ತಾರೆ. ಕೇಂದ್ರದಿಂದ ಬರಬೇಕಾದ ಅನುದಾನವು ಬರುತ್ತಿಲ್ಲ. ಬರಗಾಲ ಬಂದರೂ ಅನುದಾನ ನೀಡದೆ ಕೇಂದ್ರ ಸರ್ಕಾರ ರಾಜಕಾರಣ ಮಾಡುತ್ತಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಆರೋಪ ಮಾಡಿದರು.
ಪೌತಿ ಖಾತೆ, ವಿಧವಾ ವೇತನ, ವೃದ್ಧಾಪ್ಯ ವೇತನ, ಆರ್‌ಟಿಸಿ ತಿದ್ದುಪಡಿ ಸೇರಿದಂತೆ ಮುಂತಾದ ಯೋಜನೆಗಳ ಫಲಾನುಭವಿಗಳಿಗೆ ಸೌಲಭ್ಯವನ್ನು ಸಚಿವರು ವಿತರಿಸಿದರು.
ಮನ್ಮುಲ್ ನಿರ್ದೇಶಕ ಲಕ್ಷ್ಮೀನಾರಾಯಣ್, ತಹಸೀಲ್ದಾರ್ ಡಾ.ಅಶೋಕ್, ತಾಪಂ ಇಒ ಸತೀಶ್, ಡಿವೈಎಸ್ಪಿ ಚಲುವರಾಜು, ಉಪ ತಹಸೀಲ್ದಾರ್ ಮಲ್ಲಿಕಾರ್ಜುನ, ರಾಜಸ್ವ ನಿರೀಕ್ಷಕ ಮಧುಸೂದನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಜೆ.ರಾಜೇಶ್, ಮುಖಂಡರಾದ ಶಿವರಾಮ್, ಹನುಮಂತು ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net