ಹೆಣ್ಣು ಭ್ರೂಣ ಹತ್ಯೆ ವಿಷಾದಕರ: ಅಂಕಣಕಾರ ಬಿ.ಚಂದ್ರೇಗೌಡ ಬೇಸರ

ಮಂಡ್ಯ ನಗರದ ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಲೈಫ್ ಮಾಕ್ಟೇಲ್ ಕೃತಿ ಬಿಡುಗಡೆ ಮಾಡಲಾಯಿತು.
ಮಂಡ್ಯ ನಗರದ ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಲೈಫ್ ಮಾಕ್ಟೇಲ್ ಕೃತಿ ಬಿಡುಗಡೆ ಮಾಡಲಾಯಿತು.
Published on

ಪ್ರಮುಖ ಮುಖ್ಯಾಂಶಗಳು

  • ನಗರದಲ್ಲಿ ಲೈಫ್ ಮಾಕ್ಟೇಲ್ ಕೃತಿ ಬಿಡುಗಡೆ
  • ಎಂಆರ್‌ಎ ಪ್ರಕಾಶನದ ವತಿಯಿಂದ ಆಯೋಜನೆ
ಮಂಡ್ಯ: ಮೂರನೇ ಶತಮಾನದಿಂದಲೂ ಸಮಾಜ ಹೆಣ್ಣನ್ನು ಶಕ್ತಿಯಾಗಿ ನೊಡಿಲ್ಲ. ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೇ ತತ್ರ ದೇವತಾಃ ಎಂದೇಳುವ ನೆಲದಲ್ಲಿ ಹೆಣ್ಣು ಭ್ರೂಣ ಹತ್ಯೆ ನಡೆಯುತ್ತಿರುವುದು ವಿಷಾದಕರ ಎಂದು ಅಂಕಣಕಾರ ಬಿ.ಚಂದ್ರೇಗೌಡ ಬೇಸರ ವ್ಯಕ್ತಪಡಿಸಿದರು.
ನಗರದ ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಎಂಆರ್‌ಎ ಪ್ರಕಾಶನದ ವತಿಯಿಂದ ಆಯೋಜಿಸಿದ್ದ ಕವಯತ್ರಿ ಎಚ್.ಆರ್.ಕನ್ನಿಕಾ ಬರೆದಿರುವ ಲೈಫ್ ಮಾಕ್ಟೇಲ್ ಕೃತಿ ಬಿಡುಗಡೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ವಿಶ್ವದಲ್ಲಿ ಎಲ್ಲೂ ಇಲ್ಲದ ಭಾರತದಲ್ಲಿ ಹಿಂದೆ ನಡೆಯುತ್ತಿದ್ದ ಸಹಗಮನ ಪದ್ಧತಿ ಮಾನವ ಕುಲಕ್ಕೆ ನಾಚಿಕೆಗೇಡು ಎಂದು ಇತಿಹಾಸದ ಪುಟಗಳನ್ನು ಉಲ್ಲೇಖಿಸಿದರು.
ಹೊಸ ತಲೆಮಾರಿನ ಯುವಕರು ಮೊಬೈಲ್‌ನಲ್ಲಿ ಮುಳುಗಿ ಹೋಗಿರುವುದು ಅಪಾಯಕಾರಿ ಸನ್ನಿವೇಶವಾಗಿದೆ. ಇಂತಹ ಸಂದಿಗ್ಧದಲ್ಲಿ ಹೆಣ್ಣು ಮಕ್ಕಳಿಗೆ ಅವಕಾಶ ಸಿಕ್ಕರೆ ಅವರ ಕ್ರಿಯಾಶೀಲತೆ ಅನಾವರಣಗೊಳ್ಳುತ್ತದೆ. ಸಮಾಜದಲ್ಲಿ ಹೆಣ್ಣನ್ನು ಸಮಾನವಾಗಿ ನೋಡಿದರೆ ಏನಾಗಬಹುದು ಎಂಬುದಕ್ಕೆ ಎಚ್.ಆರ್.ಕನ್ನಿಕಾ ಅವರ ಸಾಧನೆ ನೋಡಿದಾಗ ತಿಳಿಯುತ್ತದೆ. ಇಂದು ಹಲವಾರು ಕ್ಷೇತ್ರಗಳಲ್ಲಿ ಹೆಣ್ಣು ಸ್ವಾವಲಂಬನೆ ಸಾಧಿಸುತ್ತಿದ್ದು, ಅದನ್ನು ಎಲ್ಲರೂ ಸಹಿಸಿಕೊಳ್ಳಬೇಕು. ಜತೆಗೆ ಮತ್ತಷ್ಟು ಸ್ವಾತಂತ್ರ್ಯ, ಸಮಾನತೆ ನೀಡಿ ಆರ್ಥಿಕವಾಗಿ ಸಬಲರನ್ನಾಗಿ ಮಾಡಬೇಕಾದ ಅಗತ್ಯತೆ ಇದೆ. ಜೀವ ಪೊರೆಯುವ ಶಕ್ತಿ ಹೆಣ್ಣಿಗಿದೆ. ನಿಸರ್ಗವೇ ತಾಯಿಗೆ ಈ ಕೊಡುಗೆ ನೀಡಿದೆ. ಇಂತಹ ಹೆಣ್ಣುಮಕ್ಕಳ ಸಂಖ್ಯೆ ಹೆಚ್ಚಾದರೆ ಅಪಾಯವಿಲ್ಲ ಎಂದರು.
ಕೃತಿ ಬಿಡುಗಡೆಗೊಳಿಸಿ ಮಾತನಾಡಿದ ಬೆಂಗಳೂರು ಶಾರದಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಅನುಸೂಯ ಹೊಂಬಾಳೆ, ಶಿಕ್ಷಣ ಮತ್ತು ಸಮಾಜ ಸೇವೆ ಜತೆಗೆ ಸಾಹಿತ್ಯ ಕ್ಷೇತ್ರದಲ್ಲಿ ಕನ್ನಿಕಾ ಮಾಡಿರುವ ಸಾಧನೆ ಪ್ರಶಂಸನೀಯ. ಅವಕಾಶ ಕೊಟ್ಟರೆ ಹೆಣ್ಣು ಹೊಸತನ್ನು ಹುಡುಕಿ ಸಾರ್ಥಕತೆ ಕಂಡುಕೊಳ್ಳುತ್ತಾಳೆ. ಕವಿ ಕೊಟ್ಟದ್ದನ್ನು ಓದುಗರು ಆಸ್ವಾದಿಸಬೇಕು. ಈ ನಿಟ್ಟಿನಲ್ಲಿ ನಾನು ಇವರ ಕವಿತೆಗಳನ್ನು ಓದಿದ್ದೇನೆ. ಬದುಕಿನ ಹೂರಣವನ್ನು ಪಾವತಿ ತಮ್ಮ ಕವನ ಸಂಕಲನದಲ್ಲಿರುವ 64 ಕವಿತೆಗಳನ್ನು ಅಕ್ಕರೆ ಸಕ್ಕರೆ, ಬೇವು ಬೆಲ್ಲ, ಸವಿ ಜೇನು, ಉಪ್ಪು ಹುಳಿ ಕಾರ, ಚಿಗುರು ಒಗರು ಎಂಬ ವಿಭಾಗಗಳಲ್ಲಿ ತಮ್ಮ ಬದುಕಿನ ಹೂರಣವನ್ನು ಕಟ್ಟಿಕೊಟ್ಟಿದ್ದಾರೆ. ಕಲಿಸುತ್ತಾ, ಕಲಿಯುತ್ತಾ, ಸಮಾಜದೊಂದಿಗೆ ಬೆರೆಯುತ್ತ ಸಾಧಕರಾಗಿ ಹೊರಹೊಮ್ಮಿರುವುದು ಆಶ್ಚರ್ಯ ಮೂಡಿಸುವುದಲ್ಲದೆ ತಮಗೂ ಪ್ರೇರಣೆಯಾಗಿದೆ. ಕವನ ಸಂಕಲನದಲ್ಲಿ ಬಾಲ್ಯ ಎಂಬ ಕವಿತೆ, ಅಣ್ಣ, ಯುಗಾದಿ ಬಗ್ಗೆ ಬರೆದಿರುವ ಕವನಗಳು ಮನ ಮುಟ್ಟುತ್ತದೆ ಎಂದರು.
ಎಂಆರ್‌ಎ ಪ್ರಕಾಶನದ ಪ್ರಕಾಶಕ ಮಂಜು ಮುತ್ತೇಗೆರೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕವಯತ್ರಿ ಹಾಗೂ ಕನ್ನಿಕಾ ಶಿಲ್ಪಾ ನವೋದಯ ಶಾಲೆಯ ಕಾರ್ಯದರ್ಶಿ ಎಚ್.ಆರ್.ಕನ್ನಿಕಾ ಅವರನ್ನು ಸನ್ಮಾನಿಸಲಾಯಿತು. ನೇಗಿಲಯೋಗಿ ಟ್ರಸ್ಟ್ ಅಧ್ಯಕ್ಷ ಎ.ಸಿ.ರಮೇಶ್, ಸಂಘಟಕರಾದ ದ.ಕೋ.ಹಳ್ಳಿ ಚಂದ್ರಶೇಖರ್, ಕೊತ್ತತ್ತಿ ರಾಜು, ಉಮೇಶ್, ಕೀಲಾರ ಕೃಷ್ಣೇಗೌಡ, ದೋ.ಚಿ.ಗೌಡ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net