ಹಲಗೂರು: ಆನೆಗಳು ಉಳಿದರೇ, ಕಾಡು ಉಳಿಯಲಿದೆ. ಕಾಡು ಉಳಿದರೇ ಪರಿಸರ ಉಳಿಯಲಿದೆ. ಆನೆಗಳ ಸಂರಕ್ಷಣೆಗೆ ನಾವೆಲ್ಲರೂ ಒಂದಾಗಿ ಸಂಕಲ್ಪ ಮಾಡೋಣ ಎಂದು ಹಲಗೂರು ವನ್ಯಜೀವಿ ವಲಯದ ಉಪ ವಲಯ ಅರಣ್ಯ ಅಧಿಕಾರಿ ಸಿದ್ದರಾಮ ಪೂಜಾರಿ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕನಕಪುರ ವನ್ಯಜೀವಿ ವಿಭಾಗ, ಹಲಗೂರು ವನ್ಯಜೀವಿ ವಲಯದ ವತಿಯಿಂದ ಹಲಗೂರು ಸಮೀಪದ ದಳವಾಯಿ ಕೋಡಿಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಬುದುವಾರ ಆಯೋಜಿಸಿದ್ದ ’ವಿಶ್ವ ಆನೆ ದಿನಾಚರಣೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅರಣ್ಯ ನಾಶ ಮತ್ತು ದಂತಗಳ ಕಳ್ಳಸಾಗಣೆ ಮತ್ತು ಮಾನವ ಮತ್ತು ಆನೆ ಸಂಘರ್ಷದಿಂದ ಆನೆಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಆನೆಗಳು ಸೇರಿದಂತೆ ವನ್ಯಜೀವಿ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.
ಗಸ್ತು ಅರಣ್ಯಪಾಲಕ ನಭಿಲಾಲ್ ಮಾತನಾಡಿ, ದೇಶದಲ್ಲಿ ಅತಿ ಹೆಚ್ಚು ಆನೆ ವಾಸವಾಗಿರುವುದು ಸಂತಸದ ವಿಚಾರ. ಸರ್ಕಾರ ಮತ್ತು ಸಂಘ ಸಂಸ್ಥೆಗಳ ಜತೆಗೂಡಿ ವನ್ಯಜೀವಿಗಳನ್ನು ರಕ್ಷಣೆ ಮಾಡಬೇಕಿದೆ ಎಂದರು.
ಮುಖ್ಯಶಿಕ್ಷಕ ನಟರಾಜು ಮಾತನಾಡಿ, ನಮ್ಮ ಪೂರ್ವಿಕರು ಆನೆಯನ್ನು ಪೂಜನೀಯ ಸ್ಥಾನ ನೀಡಿ ಗೌರವಿಸಿದ್ದಾರೆ. ಜೀವ ವಿಕಾಸದಲ್ಲಿ ಆನೆಯ ಮೂಗು ಉದ್ದಗೊಂಡಿದ್ದು, ಭೂಮಿಯ ಮೇಲೆ ವಾಸಿಸುವ ಅತಿ ದೊಡ್ಡ ಪ್ರಾಣಿಯಾಗಿದೆ. ಆನೆಗಳು ಗುಂಪಾಗಿ ವಾಸಿಸಲಿದ್ದು, ಹೆಣ್ಣಾನೆ ಗುಂಪಿನ ನಾಯಕತ್ವ ವಹಿಸಲಿದೆ ಎಂದು ಮಾಹಿತಿ ನೀಡಿದರು.
ಅರಣ್ಯ ಇಲಾಖೆ ವತಿಯಿಂದ ರಿಜ್ವಾನ್ ನೇತೃತ್ವದಲ್ಲಿ ಬ್ಯಾಡರಹಳ್ಳಿ ಮುರಾರ್ಜಿ ದೇಸಾಯಿ ವಸತಿ ಶಾಲೆ, ಉಪ ವಲಯ ಅರಣ್ಯ ಅಧಿಕಾರಿ ಸಾಜು ಮತ್ತು ಪುನೀತ್ ನೇತೃತ್ವದಲ್ಲಿ ಧನಗೂರು ಸರ್ಕಾರಿ ಪ್ರೌಢಶಾಲೆ ಮತ್ತು ಸಿದ್ದರಾಮ ಪೂಜಾರಿ ನೇತೃತ್ವದಲ್ಲಿ ದಳವಾಯಿ ಕೋಡಿಹಳ್ಳಿ ಸರ್ಕಾರಿ ಪ್ರೌಢಶಾಲೆಯ ಆಸಕ್ತ ವಿದ್ಯಾರ್ಥಿಗಳಿಗೆ ಚಿತ್ರಕಲೆ ಸ್ಪರ್ಧೆ ಮತ್ತು ಆನೆ ಜೀವನ ಕ್ರಮ ಮತ್ತು ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳ ಪಾತ್ರ ಕುರಿತಾದ ಪ್ರಬಂಧ ಸ್ಪರ್ಧೆ ನಡೆಯಿತು.
ಈ ಸಂದರ್ಭದಲ್ಲಿ ಶಿಕ್ಷಕರಾದ ಜಯರಾಮು, ಎಂ.ಪಾರ್ವತಮ್ಮ, ಶಿವಕುಮಾರ್, ಎಚ್.ಮಾನಸ, ಗಂಗಾಂಬಿಕೆ ಸೇರಿದಂತೆ ಹಲವರು ಭಾಗವಹಿಸಿದ್ದರು.