ಮದ್ದೂರು ನಗರದಲ್ಲಿ ನಡೆದ 2024-25ನೇ ಸಾಲಿನ ಮಹಿಳಾ ತರಬೇತಿ ಯೋಜನೆಯಡಿ ಅಸಿಸ್ಟೆಂಟ್ ಪ್ಯಾಷನ್ ಡಿಸೈನರ್ ತರಬೇತಿ ಕಾರ್ಯಕ್ರಮಕ್ಕೆ ರಾಜ್ಯ ಮಹಿಳಾಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ.ಪದ್ಮಾವತಿ ಚಾಲನೆ ನೀಡಿದರು. ಕೆ.ಮಧುಕುಮಾರ್, ಗೀತಾಲಕ್ಷ್ಮೀ, ಮಹಮದ್ ಮುಕ್ತಾರ್, ಲಕ್ಷ್ಮೀ, ರಾಜಣ್ಣ, ಪುಷ್ಪಾ ಇದ್ದರು.
Published on:
Copied
Follow Us
ಮದ್ದೂರು:ಮಹಿಳೆಯರ ಆರ್ಥಿಕಾಭಿವೃದ್ಧಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಿದ್ದು ಇದರ ಸದುಪಯೋಗಕ್ಕೆ ಮುಂದಾಗುವ ಮೂಲಕ ಸ್ವಾವಲಂಬಿ ಬದುಕನ್ನು ಕಂಡುಕೊಳ್ಳಬೇಕೆಂದು ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಪದ್ಮಾವತಿ ತಿಳಿಸಿದರು.
ನಗರದ ಶಂಕರ್ ಪಾರ್ಟಿ ಹಾಲ್‌ನಲ್ಲಿ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ದಿ ನಿಗಮ ಬೆಂಗಳೂರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕಾಮಧೇನು ಎಜುಕೇಷನ್/ರೂರಲ್ ಡೆವಲಪ್‌ಮೆಂಟ್, ಚಾರಿಟಬಲ್ ಟ್ರಸ್ಟ್ ಮದ್ದೂರು ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ 2024-25ನೇ ಸಾಲಿನ ಮಹಿಳಾ ತರಬೇತಿ ಯೋಜನೆಯಡಿ ಅಸಿಸ್ಟೆಂಟ್ ಪ್ಯಾಶನ್ ಡಿಸೈನರ್ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಪ್ರಸ್ತುತ ದಿನಗಳಲ್ಲಿ ಮಹಿಳೆಯು ಕೇವಲ ನಾಲ್ಕು ಗೋಡೆಗಳಿಗಷ್ಟೆ ಸೀಮಿತವಾಗದೆ ಎಲ್ಲ ರಂಗಗಳಲ್ಲಿ ಛಾಪು ಮೂಡಿಸುವ ಮೂಲಕ ಇತಿಹಾಸವನ್ನು ಬರೆಯುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದ್ದು ಸಿನಿಮಾ, ರಾಜಕೀಯ, ಇಸ್ರೋ, ಪೈಲೆಟ್, ಕ್ರೀಡೆ ಇನ್ನಿತರ ಹತ್ತು ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡುವುದರ ಮೂಲಕ ಪುರುಷರಷ್ಟೇ ಸರಿಸವನಾಗಿ ದುಡಿದು ಸಮಾಜದ ಅಭ್ಯುದಯಕ್ಕೆ ನಿರಂತರವಾಗಿ ಶ್ರಮಿಸುತ್ತಿದ್ದಾರೆಂದರು.
ಮಹಿಳೆ ಸ್ವಾವಲಂಬಿ ಜತೆಗೆ ಸ್ವಾಭಿಮಾನವಾಗಿ ಬದುಕಬೇಕಾದರೆ ಶಿಕ್ಷಣ ಅತ್ಯವಶ್ಯಕವಾಗಿದ್ದು ಗಂಡ, ತಂದೆ ತಾಯಿ ಹಾಗೂ ಇತರರ ಮೇಲೆ ಅವಲಂಬಿತರಾಗದೆ ಸ್ವಾಭಿಮಾನಿಯಿಂದ ಬದುಕುವ ಮೂಲಕ ಆರ್ಥಿಕಾಭಿವೃದ್ಧಿ ಹೊಂದಿ ಸಮಾಜದ ಮುಖ್ಯವಾಹಿನಿಯಲ್ಲಿ ಹೆಸರು ಗಳಿಸಬೇಕೆಂದು ಹೇಳಿದರು.
ಸಾಯಿ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಕೆ.ಮಧುಕುಮಾರ್ ಮಾತನಾಡಿ, ಮಹಿಳೆಯರು ಹಲವು ತರಬೇತಿ ಪಡೆದುಕೊಂಡು ಸ್ವಾವಲಂಬಿ ಬದುಕನ್ನು ಕಂಡುಕೊಂಡು ಆರ್ಥಿಕವಾಗಿ ಸಧೃಡರಾಗುವ ಮೂಲಕ ನಿರುದ್ಯೋಗ ಸಮಸ್ಯೆಯನ್ನು ಹೋಗಲಾಡಿಸಲು ಇಂತಹ ತರಬೇತಿ ಕಾರ್ಯಕ್ರಮಗಳು ಪೂರಕವಾಗಿವೆ ಎಂದರು.
ಮಹಿಳಾ ಮತ್ತು ಮಕ್ಕಳಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಗೀತಾಲಕ್ಷ್ಮೀ, ಅಧಿಕಾರಿ ಮಹಮದ್ ಮುಕ್ತಾರ್ ಮಾತನಾಡಿದರು. ಅಭಿವೃದ್ಧಿ ನಿರೀಕ್ಷಕಿ ಲಕ್ಷ್ಮೀ, ರಾಜಣ್ಣ, ಪುಷ್ಪ, ಶೋಭಾ ಹಾಗೂ ಶಿಬಿರಾರ್ಥಿಗಳು ಹಾಜರಿದ್ದರು.