ಯುದ್ಧ ಕೊನೆಗಾಣಿಸಲು ವಿಶ್ವ ಸಂಸ್ಥೆ ಮಧ್ಯಪ್ರವೇಶಿಸಲಿ

ಕೊಲ್ಲಿ ರಾಷ್ಟ್ರಗಳಲ್ಲಿ ನಡೆಯುತಿರು ಯುದ್ಧ ನಿಲ್ಲಲಿ ಎಂದು ಪ್ರಾರ್ಥಿಸಿ ಮಂಡ್ಯ ರಕ್ಷಣಾ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಬಿ.ಶಂಕರ್‌ಬಾಬು ನೇತೃತ್ವದಲ್ಲಿ ಕಾರ್ಯಕರ್ತರು ಶ್ರೀರಂಗಪಟ್ಟಣದ ಪುರಸಭಾ ಕಾರ್ಯಲಯದ ಎದುರಿನ ಬಂಡಿಸಿದ್ದೇಗೌಡ ವೃತ್ತದಿಂದ ಮೆರವಣಿಗೆಯಲ್ಲಿ ಸಾಗಿದರು.
ಕೊಲ್ಲಿ ರಾಷ್ಟ್ರಗಳಲ್ಲಿ ನಡೆಯುತಿರು ಯುದ್ಧ ನಿಲ್ಲಲಿ ಎಂದು ಪ್ರಾರ್ಥಿಸಿ ಮಂಡ್ಯ ರಕ್ಷಣಾ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಬಿ.ಶಂಕರ್‌ಬಾಬು ನೇತೃತ್ವದಲ್ಲಿ ಕಾರ್ಯಕರ್ತರು ಶ್ರೀರಂಗಪಟ್ಟಣದ ಪುರಸಭಾ ಕಾರ್ಯಲಯದ ಎದುರಿನ ಬಂಡಿಸಿದ್ದೇಗೌಡ ವೃತ್ತದಿಂದ ಮೆರವಣಿಗೆಯಲ್ಲಿ ಸಾಗಿದರು.
Published on

ಪ್ರಮುಖ ಮುಖ್ಯಾಂಶಗಳು

  • ಮಧ್ಯಪ್ರಾಚ್ಯದ ರಾಷ್ಟ್ರಗಳಲ್ಲಿ ಉಂಟಾಗಿರುವ ಯುದ್ಧ ಕೊನೆಗಾಣಿಸಲು
  • ವಿಶ್ವಸಂಸ್ಥೆ ಮಧ್ಯಪ್ರವೇಶಿಸಲಿ ಎಂದು ಪ್ರಾರ್ಥಿಸಿ
ಶ್ರೀರಂಗಪಟ್ಟಣ: ಮಧ್ಯಪ್ರಾಚ್ಯದ ರಾಷ್ಟ್ರಗಳಲ್ಲಿ ಉಂಟಾಗಿರುವ ಯುದ್ಧ ಕೊನೆಗಾಣಿಸಲು ವಿಶ್ವಸಂಸ್ಥೆ ಮಧ್ಯಪ್ರವೇಶಿಸಲಿ ಎಂದು ಪ್ರಾರ್ಥಿಸಿ ಮಂಡ್ಯ ರಕ್ಷಣಾ ವೇದಿಕೆ ಕಾರ್ಯಕರ್ತರು ಜಾಥಾ ನಡೆಸಿದರು.
ಪಟ್ಟಣದ ಪುರಸಭಾ ಮುಂಭಾಗದಲ್ಲಿನ ಬಂಡಿಸಿದ್ದೇಗೌಡ ವೃತ್ತದಲ್ಲಿ ಮಂಡ್ಯ ರಕ್ಷಣಾ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಬಿ.ಶಂಕರ್‌ಬಾಬು ನೇತೃತ್ವದಲ್ಲಿ ಜಮಾವಣೆಗೊಂಡ ಕಾರ್ಯಕರ್ತರು, ಯುದ್ಧ ಬಿಡಿ..ಶಾಂತಿ ಕಾಪಾಡಿ.. ಎಂಬ ಶಾಂತಿ ಮಂತ್ರದ ಘೋಷಗಳಿರುವ ನಾಮಫಲಕ ಹಿಡಿದು ಮೆರವಣಿಗೆ ಹೊರಟರು. ಬಳಿಕ ಐತಿಹಾಸಿಕ ಶ್ರೀಮೂಡಲು ಬಾಗಿಲು ಆಂಜನೇಯಸ್ವಾಮಿ ದೇವಾಲಯದಲ್ಲಿ ಶಾಂತಿ ಪೂಜೆ ಸಲ್ಲಿಸಿದರು.
25 ದಿನಗಳಿಂದ ಇರಾನ್- ಇಸ್ರೇಲ್-ಅಮೆರಿಕ ನಡುವೆ ನಡೆಯುತ್ತಿರುವ ಯುದ್ಧದಿಂದ ಅಶಾಂತಿ ಹೆಚ್ಚಿದ್ದು, ಜನರ ಪ್ರಾಣ ಮತ್ತು ನೈಸರ್ಗಿಕ ಸಿರಿ-ಸಂಪನ್ಮೂಲಕ್ಕೆ ಹಾನಿಯಾಗಿ ವಿಶ್ವದಾದ್ಯಂತ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಕೊಲ್ಲಿ ರಾಷ್ಟ್ರಗಳ ಕದನದ ತೀವ್ರತೆಗೆ ಭೂಮಿಯೇ ಕಂಪಿಸಿ ಪರಿಸರ ಅಸಮತೋಲನದ ಜತೆಗೆ ಜೀವರಾಶಿಗಳ ಮೇಲೆಯೂ ಸಾಕಷ್ಟು ಪ್ರಭಾವ ಬೀರಿದೆ. ದೇಶದಲ್ಲಿ ತೈಲ-ಅನಿಲದ ಅಭಾವದ ತೀವ್ರತೆ ಎದುರಾಗಿದೆ. ಸಾಮಾನ್ಯ, ಮಧ್ಯಮ ಹಾಗೂ ಬಡವರ್ಗದ ಜನಸಮೂಹ ಜೀವನ ದೂಡುವುದು ಅಸಾಧ್ಯವಾಗಿದೆ. ಆ ದೇಶದಲ್ಲಿನ ಜನರ ಆರ್ತನಾದ, ಸಾವು-ನೋವುಗಳು ನಮ್ಮೊಳಗಿನ ಮಾನವೀಯತೆಯನ್ನು ಪ್ರಶ್ನಿಸಿ ಪರೀಕ್ಷಿಸಿಕೊಳ್ಳುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಅಸಹಾಯಕ ಸ್ಥಿತಿಯಲ್ಲಿ ಭಾರತೀಯರಾದ ನಾವು ದೈವಗಳ ಮೊರೆ ಮೂಲಕ ಶಾಂತಿ ನಿರ್ಮಾಣಕ್ಕೆ ಪ್ರಯತ್ನ ನಡೆಸಿದ್ದೇವೆ. ವಿಶ್ವಸಂಸ್ಥೆ ಶೀಘ್ರ ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಲು ಮುಂದಾಗಬೇಕು ಹಾಗೂ ವಿಶ್ವದ ಜನರಲ್ಲಿ ಶಾಂತಿ-ಸೌಹಾರ್ದತೆ ಮತ್ತು ಮಾನವೀಯತೆ ನೆಲೆಯೂರಬೇಕು ಎಂದು ಮನವಿ ಮಾಡಿದರು.
ವೇದಿಕೆಯ ರಾಜ್ಯ ಸಂಘಟನಾ ಕಾರ್ಯದರ್ಶಿ ಕೆ.ಎಚ್.ಜಗದೀಶ್, ಮುಖಂಡರಾದ ಬಿ.ಸಿ.ರವಿ, ಆಕಾಶ್, ಪ್ರಶಾಂತ್ ಕುಮಾರ್, ಧನಂಜಯ್ಯ, ಕುಮಾರ್, ವೀಣಾಬಾಯಿ, ನಂದಿನಿ ಇತರರಿದ್ದರು.
ಎಸ್‌ಆರ್‌ಪಿ ಚಿತ್ರ :24-02
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net