ಮೈಸೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಕೆ.ಎಸ್.ಅಮೃತೇಶ್
ಭಾರತೀ ವಿದ್ಯಾ ಸಂಸ್ಥೆಯ ಕುವೆಂಪು ಸಭಾಂಗಣ
ಕೆ.ಎಂ.ದೊಡ್ಡಿ: ಮಾಜಿ ಸಂಸದ ದಿವಂಗತ ಜಿ.ಮಾದೇಗೌಡರು ಶಿಕ್ಷಣ ಸಂಸ್ಥೆ ಕಟ್ಟದಿದ್ದರೆ ನನ್ನಂತಹ ಲಕ್ಷಾಂತರ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುತ್ತಿದ್ದರು ಎಂದು ಮೈಸೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಕೆ.ಎಸ್.ಅಮೃತೇಶ್ ಹೇಳಿದರು.
ಇಲ್ಲಿನ ಭಾರತೀ ವಿದ್ಯಾ ಸಂಸ್ಥೆಯ ಕುವೆಂಪು ಸಭಾಂಗಣದಲ್ಲಿ ಭಾರತಿ ಪಿಯು ಕಾಲೇಜಿನ ಕಲಾ ಮತ್ತು ವಾಣಿಜ್ಯ ವಿಭಾಗದಿಂದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ವಿಶೇಷ ಉಪನ್ಯಾಸ ನೀಡಿದರು. ಹಲವು ದಶಕಗಳ ಹಿಂದೆ ಹಳ್ಳಿಗಾಡಿನ ವಿದ್ಯಾರ್ಥಿಗಳಿಗೆ ಶಿಕ್ಷಣ ಗಗನ ಕುಸುಮವಾಗಿತ್ತು. ಇಂತಹ ಸಂದರ್ಭದಲ್ಲಿ ಗೌಡರು ಶಿಕ್ಷಣ ಸಂಸ್ಥೆ ತೆರದು ಗ್ರಾಮೀಣ ವಿದ್ಯಾಥಿಗಳಿಗೆ ಶಿಕ್ಷಣದ ಸಂಜೀವಿನಿ ನೀಡಿದರು ಎಂದು ಬಣ್ಣಿಸಿದರು.
ಪ್ರಸ್ತುತ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಮೊಬೈಲ್ ಒಂದು ಕಾಲಹರಣ ಸಾಧನವಾಗಿದ್ದು, ಅದನ್ನು ಕಲಿಕಾ ಯಂತ್ರವಾಗಿ ವಿದ್ಯಾರ್ಥಿಗಳು ಬದಲಿಸಿಕೊಂಡರೆ ಅದರಿಂದಲೂ ಸಾಕಷ್ಟು ಪ್ರಯೋಜನ ಪಡೆದುಕೊಳ್ಳಬಹುದು. ಈ ನಿಟ್ಟಿನಲ್ಲಿ ವಿದ್ಯಾಥಿಗಳು ಕಾರ್ಯೋನ್ಮುಖರಾಗಬೇಕು ಎಂದು ಕಿವಿಮಾತು ಹೇಳಿದರು.
ಇಂದಿನ ಆಧುನಿಕ ಪ್ರಪಂಚಕ್ಕೆ ಬೇಕಾಗಿರುವುದು ಹೊಸತನದ ಜತೆಗೆ ಕ್ರಿಯಾಶೀಲತೆಯುಳ್ಳ ಆಲೋಚನಾ ಕ್ರಮ. ವಿದ್ಯಾರ್ಥಿಗಳು ಕೇವಲ ಜ್ಞಾನಾರ್ಜನೆಗಾಗಿ ವಿದ್ಯಾಭ್ಯಾಸ ಮಾಸದೆ ಹೊಸ ರೀತಿಯ ಆಲೋಚನಾ ಕ್ರಮಗಳನ್ನು ಬೆಳೆಸಿಕೊಂಡಾಗ ಸಾರ್ಥಕ ಬದುಕನ್ನು ಕಟ್ಟಿಕೊಳ್ಳಬಹುದು ಎಂದು ಸಲಹೆ ನೀಡಿದರು.
ಜಿ.ಮಾದೇಗೌಡ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಬಿ.ಆರ್. ಚಂದನ್ ಮಾತನಾಡಿ, ಗ್ರಾಮಾಂತರ ವಿದ್ಯಾಥಿಗಳಿಂದ ಯಾವುದೇ ಡೊನೇಷನ್ ಪಡೆಯದೆ ಕಡಿಮೆ ಶುಲ್ಕದಲ್ಲಿ ಇಂಜಿನಿಯರ್ ಪ್ರವೇಶ ನೀಡುವ ಮೂಲಕ ಶ್ರಮಿಸಿದ ಜಿ.ಮಾದೇಗೌಡ ಅವರನ್ನು ಪ್ರತಿಯೊಬ್ಬ ವಿದ್ಯಾರ್ಥಿ ನೆನೆಯಬೇಕು ಎಂದರು.
ವಿದ್ಯಾರ್ಥಿಗಳು ತಮ್ಮ ಭವಿಷ್ಯ ರೂಪಿಸಿಕೊಳ್ಳುವತ್ತ ಗಮನ ಹರಿಸಬೇಕು. ಕಾಲೇಜು ಜೀವನದಲ್ಲಿ ಕಲಿಯಬೇಕಾದದ್ದು ಬೇಕಾದಷ್ಟಿದೆ. ಗ್ರಂಥಾಲಯಕ್ಕೆ ತೆರಳಿ ಸಾಮಾನ್ಯ ಜ್ಞಾನದ ಬಗ್ಗೆ ಅಧ್ಯಯಾನ ಮಾಡಿದರೆ ಮುಂದಿನ ದಿನಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಸುಲಲಿತವಾಗಿ ಎದುರಿಸಬಹುದು ಎಂದರು.
ಕಾಲೇಜಿನ ಆಡಳಿತಾಧಿಕಾರಿ ಪ್ರೊ.ಎಸ್. ಜವರೇಗೌಡ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲೆ ಜಿ.ಬಿ.ಪಲ್ಲವಿ, ಸಾಂಸ್ಕೃತಿಕ ಸಂಚಾಲಕ ಚೇತನ್ ಜುಂಜಿರ್, ಎ.ಸಿ.ಮಾನಸಾ, ಬಿ.ಕೆ.ಮಹದೇವು, ಸಿ.ಯು.ಕುಮಾರ್, ಸಿ.ಎಸ್.ಶೋಭಾ, ಡಿ.ಈ.ಹರೀಶ್, ಪ್ರೀತಿ, ಅಕ್ಷತಾ ಸೇರಿದಂತೆ ಹಲವರಿದ್ದರು.