ಸಿಎಂ ಸ್ಥಾನ ಡಿಕೆಶಿಗೆ ಬಿಟ್ಟುಕೊಟ್ಟು ಮುತ್ಸದ್ದಿತನ ಮೆರೆಯಲಿ
ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗಬೇಕೆಂದು ಮಳವಳ್ಳಿ ಪಟ್ಟಣದ ಮಾರೇಹಳ್ಳಿ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದಲ್ಲಿ ತಾಲೂಕು ಒಕ್ಕಲಿಗ ಸಂಘದ ವತಿಯಿಂದ ಬುಧವಾರ ವಿಶೇಷ ಪೂಜೆ ಮಾಡಿಸುವ ಮೂಲಕ ಪ್ರಾರ್ಥಿಸಲಾಯಿತು. ವಿ.ಪಿ.ನಾಗೇಶ್, ದೇವರಾಜೇಗೌಡ, ಮಾದೇಶ್, ಚಿಕ್ಕರಾಜು, ಸುಂದರರಾಜು, ಮಹೇಶ್‌ಕುಮಾರ್, ಪುಟ್ಟಸ್ವಾಮಿ, ಗಂಗಾಧರ್, ಜಯಮ್ಮ, ಮಲ್ಲಯ್ಯ, ದ್ಯಾಪೇಗೌಡ, ಶಿವಮಾದೇಗೌಡ, ಚಿಕ್ಕಣ್ಣ, ಸುಂದರೇಶ್ ಇದ್ದರು.
Published on:
Copied
Follow Us
ಮಳವಳ್ಳಿ: ಕಾಂಗ್ರೆಸ್ ಪಕ್ಷದಿಂದ ರಾಜ್ಯದಲ್ಲಿ ಏಳೂವರೆ ವರ್ಷ ಮುಖ್ಯಮಂತ್ರಿಯಾಗಿ ಉತ್ತಮ ಆಡಳಿತ ನೀಡಿರುವ ಸಿದ್ದರಾಮಯ್ಯ ಅವರು ಪಕ್ಷಕ್ಕಾಗಿ ದುಡಿದಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಸಿಎಂ ಸ್ಥಾನವನ್ನು ಬಿಟ್ಟುಕೊಡುವ ಮೂಲಕ ತಮ್ಮ ರಾಜಕೀಯ ಮುತ್ಸದ್ದಿತನವನ್ನು ಮೆರೆಯಬೇಕೆಂದು ಒಕ್ಕಲಿಗ ಸಂಘದ ತಾಲೂಕು ಅಧ್ಯಕ್ಷ ವಿ.ಪಿ.ನಾಗೇಶ್ ಮನವಿ ಮಾಡಿದರು.
ತಾಲೂಕು ಒಕ್ಕಲಿಗರ ಸಂಘದ ವತಿಯಿಂದ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗಬೇಕೆಂದು ಬುಧವಾರ ಪಟ್ಟಣದ ಮಾರೇಹಳ್ಳಿ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು.
ಸಂಘದ ಅಧ್ಯಕ್ಷ ಮಾತನಾಡಿ, ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ಪಕ್ಷವನ್ನು ತಳಮಟ್ಟದಿಂದ ಬಲಪಡಿಸಿದ ಶಿಸ್ತಿನ ಸಿಪಾಯಿ. ಅವರಿಗೆ ಮುಖ್ಯಮಂತ್ರಿ ಸ್ಥಾನ ಸಿಗುವುದು ಸಮುದಾಯಕ್ಕೂ ಗೌರವ ಎಂದು ಹೇಳಿದ ಅವರು, ಎಸ್.ಎಂ.ಕೃಷ್ಣ ಅವರ ನಂತರ ಸಮುದಾಯದ ಯಾರಿಗೂ ಸಿಎಂ ಸ್ಥಾನ ದೊರೆತಿಲ್ಲ. ಅಲ್ಲದೆ ಡಿ.ಕೆ.ಶಿ ಪಕ್ಷ ಸಂಘಟನೆಗಾಗಿ ಬಹಳಷ್ಟು ಶ್ರಮಿಸಿದ್ದಾರೆ. ಸಿದ್ದರಾಮಯ್ಯ ಮೊದಲ ಪೂರ್ಣಾವಧಿ ಪೂರೈಸಿದ್ದರೂ ಪ್ರಸ್ತುತ ಸರ್ಕಾರದಲ್ಲಿ ಎರಡನೇ ಅವಧಿಗೆ ಸಿಎಂ ಸ್ಥಾನದ ಬೇಡಿಕೆ ಇಟ್ಟಾಗಲೂ ಅವರಿಗೆ ಕಾಂಗ್ರೆಸ್ ಪಕ್ಷ ಹಾಗೂ ಡಿಕೆಶಿ ಅವರು ಸಹಕಾರ ನೀಡಿದ್ದಾರೆ. ಉಳಿದ ಅವಧಿಗೆ ಸಿಎಂ ಸಿದ್ದರಾಮಯ್ಯ ಅವರು ಡಿಕೆಶಿ ಅವರಿಗೆ ಅಧಿಕಾರವನ್ನು ಬಿಟ್ಟುಕೊಟ್ಟು ರಾಜ್ಯಕಂಡ ಧೀಮಂತ ನಾಯಕ ಎಂಬ ದೊಡ್ಡತನ ಮೆರೆಯಬೇಕಿದೆ ಎಂದರು.
ದೇವಸ್ಥಾನದಲ್ಲಿ ಒಕ್ಕಲಿಗರ ಸಂಘ ಮತ್ತು ಡಿ.ಕೆ. ಶಿವಕುಮಾರ್ ಅಭಿಮಾನಿ ಬಳಗದ ಸದಸ್ಯರು ಸೇರಿ ವಿಶೇಷ ಪೂಜೆ, ಹವನ ಮುಂತಾದ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು. \
ಡಿಕೆಶಿ ಅವರು ಶೀಘ್ರದಲ್ಲೇ ಮುಖ್ಯಮಂತ್ರಿ ಆಗಬೇಕು. ರಾಜ್ಯದ ಅಭಿವೃದ್ಧಿ ಮತ್ತು ಅವರ ದೀರ್ಘ ರಾಜಕೀಯ ಜೀವನ ಸಫಲವಾಗಬೇಕು ಎಂಬ ಹಾರೈಕೆಯೊಂದಿಗೆ ದೇವರಲ್ಲಿ ಪ್ರಾರ್ಥನೆ ಮಾಡಿ ಹರಕೆ ಕಟ್ಟಿಕೊಳ್ಳಲಾಗಿದೆ. ಸಂಘದ ಮುಖಂಡ ಜತೆಗೂಡಿ ಬೆಂಗಳೂರಿನ ಡಿಕೆಶಿ ನಿವಾಸಕ್ಕೆ ತೆರಳಿ ದೇವರ ಪೂಜಾ ಪ್ರಸಾದವನ್ನು ಕೊಟ್ಟು ಬರಲಾಗುವುದು. ಸಿಎಂ ಆಗಿ ಅಧಿಕಾರ ಸ್ವೀಕರಿಸಿದ ಮರುದಿನವೇ ಲಕ್ಷ್ಮೀ ನರಂಸಿಂಹ ಸ್ವಾಮಿ ದೇವಸ್ಥಾನಕ್ಕೆ ಆಗಮಿಸಿ ಮತ್ತೊಮ್ಮೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಹರಕೆ ತೀರಿಸಲಾಗುವುದು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಸಂಘದ ಕಾರ್ಯದರ್ಶಿ ದೇವರಾಜೇಗೌಡ, ಖಜಾಂಚಿ ಮಾದೇಶ್, ಪದಾಧಿಕಾರಿಗಳು ಸೇರಿದಂತೆ ಮುಂಖಡರಾದ ಚಿಕ್ಕರಾಜು, ಸುಂದರರಾಜು, ಮಹೇಶ್ ಕುಮಾರ್, ಗಂಗಾಧರ್, ಪುಟ್ಟಸ್ವಾಮಿ, ಜಯಮ್ಮ, ಮಲ್ಲಯ್ಯ, ದ್ಯಾಪೇಗೌಡ, ಶಿವಮಾದೇಗೌಡ, ಚಿಕ್ಕಣ್ಣ, ಸುಂದರೇಶ್ ಮುಂತಾದವರಿದ್ದರು.