ಸುರೇಶ್‌ಗೌಡ ವಿರುದ್ಧ ಕಾನೂನು ಹೋರಾಟ: ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ ಹೇಳಿಕೆ

ಮಾಜಿ ಶಾಸಕ ಸುರೇಶ್‌ಗೌಡ ವಿರುದ್ಧ ಮಂಡ್ಯದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿ.ಜೆ.ಶೋಭಾರಾಣಿ ಅವರಿಗೆ ದೂರು ಸಲ್ಲಿಸಲಾಯಿತು.
ಮಾಜಿ ಶಾಸಕ ಸುರೇಶ್‌ಗೌಡ ವಿರುದ್ಧ ಮಂಡ್ಯದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿ.ಜೆ.ಶೋಭಾರಾಣಿ ಅವರಿಗೆ ದೂರು ಸಲ್ಲಿಸಲಾಯಿತು.
Published on

ಪ್ರಮುಖ ಮುಖ್ಯಾಂಶಗಳು

  • ಮಾಜಿ ಶಾಸಕರಿಂದ ಪ್ರಚೋದನಾಕಾರಿ ಹೇಳಿಕೆ ಸರಿಯಲ್ಲ
ಮಂಡ್ಯ: ಕಳೆದ ಮೂರು ದಶಕದಿಂದ ನಿಷ್ಕಳಂಕ ಸೇವೆ ಸಲ್ಲಿಸುತ್ತಿರುವ ಹಿರಿಯ ರಾಜಕಾರಣಿ ಎನ್.ಚಲುವರಾಯಸ್ವಾಮಿ ಬಗ್ಗೆ ಪ್ರಚೋದನಾಕಾರಿ ಹೇಳಿಕೆ ನೀಡಿರುವ ಮಾಜಿ ಶಾಸಕ ಸುರೇಶ್‌ಗೌಡ ವಿರುದ್ಧ ಕಾನೂನು ಹೋರಾಟ ಮಾಡಲಾಗುವುದು. ಎರಡು ಬಾರಿ ಶಾಸಕರಾಗಿ ಕೆಲಸ ಮಾಡಿರುವ ಅವರಿಗೆ ಪ್ರಚೋದನಾಕಾರಿ ಹೇಳಿಕೆ ಶೋಭೆ ತರುವುದಿಲ್ಲ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ ಆಕ್ರೋಶ ವ್ಯಕ್ತಪಡಿಸಿದರು.
ಸುರೇಶ್‌ಗೌಡರ ಆಕ್ರೋಶದ ಮಾತನ್ನು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರೂ ಸಹ ಸಮರ್ಥಿಸಿಕೊಳ್ಳುವುದಿಲ್ಲ. ಈ ಸಂಬಂಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ಸಲ್ಲಿಸಿ ಕಾನೂನು ಹೋರಾಟ ಮಾಡಲಾಗುವುದು. ಸೈದ್ದಾಂತಿಕ ಮತ್ತು ರಾಜಕೀಯವಾಗಿ ಮಾತನಾಡುವುದನ್ನು ಸುರೇಶ್‌ಗೌಡ ರೂಢಿಸಿಕೊಳ್ಳಬೇಕು. ಅದು ಬಿಟ್ಟು ಕಡಿ, ಹೊಡಿ, ಬಡಿ ಎನ್ನುವುದು ನಮ್ಮ ಸಂಸ್ಕೃತಿಯೂ ಅಲ್ಲ. ನಾವು ಸ್ವಾತಂತ್ರ್ಯವನ್ನು ಅಹಿಂಸಾತ್ಮಕವಾಗಿ ಹೋರಾಟ ಮಾಡಿ ತಂದಿದ್ದೇವೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ನೆರೆಯ ಚನ್ನಪಟ್ಟಣ ತಾಲೂಕಿನಿಂದ ಮಂಡ್ಯ ಜಿಲ್ಲೆಗೆ ವಲಸೆ ಬಂದು ಜಿಲ್ಲೆಯ ನಾಯಕರ ಬಗ್ಗೆ ಜೆಡಿಎಸ್ ವರಿಷ್ಠರಲ್ಲಿ ಇಲ್ಲ ಸಲ್ಲದ ಅಪವಾದಗಳನ್ನು ಹೇಳಿ ಒಬ್ಬರ ಮೇಲೆ ಇನ್ನೊಬ್ಬರನ್ನು ಎತ್ತಿಕಟ್ಟಿ ಬದುಕು ಸಾಗಿಸುವುದನ್ನೇ ಕಾಯಕ ಮಾಡಿಕೊಂಡಿರುವ ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್ ಅವರಿಗೆ ಸೂತಕ ಪದದ ಅರ್ಥ ತಿಳಿದಿಲ್ಲ ಎಂದು ವ್ಯಂಗ್ಯವಾಡಿದ ಅವರು, ದೇವೇಗೌಡರು ಮತ್ತು ಅವರ ಕುಟುಂಬ ಸದಸ್ಯರನ್ನು ಹೊಗಳುವುದನ್ನು ಬಿಟ್ಟು ಇನ್ನಾವುದೇ ಅಭಿವೃದ್ಧಿ ಅಥವಾ ಪಕ್ಷದ ಸಂಘಟನೆ ಇವರಿಂದ ಸಾಧ್ಯವಾಗಿಲ್ಲ. ಕಳೆದ ಸಹಕಾರಿ ಸಂಸ್ಥೆಗಳ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ ಫಲಾಯನವಾದರು. ಅವರ ಗೂಸೂಂಬೆ ತನದ ಓಲೈಕೆ ರಾಜಕಾರಣ ಮಾಡಿದರೆ ಮಂಡ್ಯ ಜಿಲ್ಲೆಯಲ್ಲಿ ನಡೆಯುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಎಂಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಹಾಲಹಳ್ಳಿ ಅಶೋಕ್, ದಿನೇಶ್, ನಾಗಮಂಗಲ ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಶರತ್ ರಾಮಣ್ಣ, ನಾಗಮಂಗಲ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದಿವಾಕರ್ ಉಪಸ್ಥತಿತರಿದ್ದರು.

ಮಾಜಿ ಶಾಸಕರಿಗೆ ಬಿ ಫಾರ್ಮ್ ತಪ್ಪುವ ಆತಂಕ
ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ನಾಗಮಂಗಲ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಬಿ ಫಾರಂ ದೊರೆಯದೆಂಬ ಆತಂಕದಿಂದ ಎನ್.ಚಲುವರಾಯಸ್ವಾಮಿ ಅವರ ಬಗ್ಗೆ ಮಾಜಿ ಶಾಸಕ ಸುರೇಶ್‌ಗೌಡ ಪ್ರಚೋದನಾಕಾರಿ ಹೇಳಿಕೆ ನೀಡಿದ್ದಾರೆಂದು ನಾಗಮಂಗಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಜೆ.ರಾಜೇಶ್ ಕಿಡಿಕಾರಿದರು.
ಸುರೇಶ್‌ಗೌಡ ಅದೃಷ್ಠವಂತ ರಾಜಕಾರಣಿ. ಯಾವುದೇ ಶ್ರಮವಿಲ್ಲದೆ ಅದೃಷ್ಟದಿಂದ, ವರಿಷ್ಠರ ಕೃಪೆ ಹಾಗೂ ಮತದಾರರ ಅನುಕಂಪ ಗಿಟ್ಟಿಸಿ ಎರಡು ಬಾರಿ ಶಾಸಕರಾಗಿ ಆಯ್ಕೆಯಾದವರು. ಆದರೆ, ಅವರ ಭ್ರಷ್ಟಾಚಾರಕ್ಕೆ ಅಂಕುಶವಿಲ್ಲ. ಜೆಡಿಎಸ್ ಪಕ್ಷದ ಬಂಡಾಯದಲ್ಲಿ ಸಿ.ಎಸ್.ಪುಟ್ಟರಾಜು ಸೋಲಿಸಲು ಸುರೇಶಗೌಡ, ಇವರನ್ನು ಸೋಲಿಸಲು ಅವರು ಎಂಬಂತೆ ಎರಡು ಗುಂಪಾಗಿವೆ. ಆ ಕಾರಣಕ್ಕೆ ಬಿ ಫಾರ್ಮ್ ಪಡೆಯಲು ಸುರೇಶಗೌಡ ಆಕ್ರೋಶದ ಮಾತುಗಳನ್ನಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಜಿಲ್ಲೆಯ ಹಿರಿಯ ರಾಜಕಾರಣಿಯ ಬಗ್ಗೆ ಪ್ರಚೋದನಾಕಾರಿಯಾಗಿ ಮಾತನಾಡಿರುವುದು ಸರಿಯಲ್ಲ. ಅವರಿಗೆ ಧೈರ್ಯ ಹಾಗೂ ತಾಕತ್ತು ಇದ್ದರೆ ಅವರು ಹೇಳುವ ಜಾಗಕ್ಕೆ ನಾವೇ ಹೋಗುತ್ತೇವೆ. ಅದೆನೂ ಮಾಡುತ್ತಾರೋ ನೋಡುತ್ತೇವೆ ಎಂದು ಸವಾಲು ಹಾಕಿದ ಅವರು, ನರೇಂದ್ರಮೋದಿ ಅವರು ದೇಶದ ಪ್ರಧಾನಿಯಾದರೆ ದೇಶ ತ್ಯಜಿಸುವುದಾಗಿ ದೇವೇಗೌಡರು ಹೇಳಿದ್ದರು. ಅವರು ದೇಶ ತ್ಯಜಿಸಿದ್ದಾರೆಯೇ?. ಅದೇ ರೀತಿ ಜೇಬಿನಲ್ಲಿ ಪೆನ್‌ಡ್ರೈವ್ ಇಟ್ಟುಕೊಂಡು ಆರೋಪ ಮಾಡುತ್ತಿದ್ದ ಎಚ್.ಡಿ.ಕುಮಾರಸ್ವಾಮಿ ಅವರೇ ಹಾಸನ ಪೆನ್‌ಡ್ರೈವ್ ಹೊರತಂದರೇ?. ಚಲುವರಾಯಸ್ವಾಮಿ ಅವರು ಜಿಲ್ಲೆಯ ಕೃಷಿಕರಿಗೆ ಆಸರೆಯಾಗುವ ಸದುದ್ದೇಶದಿಂದ ಕೃಷಿ ವಿವಿ ಅನುಷ್ಠಾನಗೊಳಿಸಿದ್ದಾರೆ. ಆದರೆ ಎಚ್.ಡಿ.ದೇವೇಗೌಡರು ಮತ್ತು ಎಚ್.ಡಿ.ಕುಮಾರಸ್ವಾಮಿ ಜಿಲ್ಲೆಗೆ ಯಾವ ಕೊಡುಗೆ ನೀಡಿದ್ದಾರೆ ಎಂದು ಪ್ರಶ್ನಿಸಿದರು.

ಎಸ್ಪಿ ಶೋಭಾರಾಣಿಗೆ ದೂರು
ಮಾಜಿ ಶಾಸಕ ಸುರೇಶ್‌ಗೌಡ ಅವರು ಹಿರಿಯ ಶಾಸಕ ಎನ್.ಚಲುವರಾಯಸ್ವಾಮಿ ವಿರುದ್ಧ ನೀಡಿರುವ ಪ್ರಚೋದನಾಕಾರಿಯಾಗಿ ಹೇಳಿಕೆ ಹಿನ್ನೆಲೆಯಲ್ಲಿ ಕಾನೂನು ಕ್ರಮಕ್ಕೆ ಒತ್ತಾಯಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿ.ಜೆ.ಶೋಭಾರಾಣಿ ಅವರಿಗೆ ಮಂಗಳವಾರ ದೂರು ಸಲ್ಲಿಸಿದ್ದಾರೆ.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ ನೇತೃತ್ವದಲ್ಲಿ ನಗರದ ಜಿಲ್ಲಾ ಪೊಲೀಸ್ ಭವನಕ್ಕೆ ತೆರಳಿದ ಮುಖಂಡರು, ಸುರೇಶ್‌ಗೌಡ ಅವರ ಹೇಳಿಕೆ ಸಾರ್ವಜನಿಕ ವಲಯದಲ್ಲಿ ಅಶಾಂತಿಯನ್ನುಂಟು ಮಾಡುವಂತಾಗಿದೆ. ಜವಾಬ್ದಾರಿಯುತ ಸ್ಥಾನದಲ್ಲಿದ್ದ ಇಂತಹವರು ಸಮಾಜದಲ್ಲಿ ಶಾಂತಿ ಭಂಗವನ್ನುಂಟು ಮಾಡುವ ಹೇಳಿಕೆಯನ್ನು ನೀಡುವ ಮೂಲಕ ಭಯವನ್ನುಂಟು ಮಾಡಿರುತ್ತಾರೆ. ಗೂಂಡಾಗಳ ರೀತಿ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ಸುರೇಶ್‌ಗೌಡ ಮೇಲೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ನಾಗಮಂಗಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಜೆ.ರಾಜೇಶ್, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದಿವಾಕರ್, ಎಂಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಹಾಲಹಳ್ಳಿ ಅಶೋಕ್, ದಿನೇಶ್, ನರಸಿಂಹಮೂರ್ತಿ, ಶರತ್ ರಾಮಣ್ಣ, ಪ್ರವೀಣ್‌ಕುಮಾರ್, ಸುಂಡಹಳ್ಳಿ ಮಂಜುನಾಥ್, ಕಿರಣ್‌ಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net