ಮಾದಕ ವಸ್ತು, ಮೊಬೈಲ್ ವ್ಯಸನಕ್ಕೆ ಬಲಿಯಾಗಬೇಡಿ: ಮನೋವೈದ್ಯ ಡಾ.ಅನಿಲ್ ಆನಂದ್ ಸಲಹೆ

ಮಂಡ್ಯ ತಾಲೂಕು ಶಿವಳ್ಳಿ ಗ್ರಾಮದ ಸರ್ ಎಂ.ವಿಶ್ವೇಶ್ವರಯ್ಯ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಸಂವಾದ ಕಾರ್ಯಕ್ರಮವನ್ನು ಮನೋವೈದ್ಯ ಡಾ.ಅನಿಲ್ ಆನಂದ್ ಉದ್ಘಾಟಿಸಿದರು.
ಮಂಡ್ಯ ತಾಲೂಕು ಶಿವಳ್ಳಿ ಗ್ರಾಮದ ಸರ್ ಎಂ.ವಿಶ್ವೇಶ್ವರಯ್ಯ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಸಂವಾದ ಕಾರ್ಯಕ್ರಮವನ್ನು ಮನೋವೈದ್ಯ ಡಾ.ಅನಿಲ್ ಆನಂದ್ ಉದ್ಘಾಟಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಶಿವಳ್ಳಿ ಗ್ರಾಮದಲ್ಲಿ ಸಂವಾದ ಕಾರ್ಯಕ್ರಮ
  • ಪಾಲಕರ ಜವಾಬ್ದಾರಿ ಕುರಿತು ಹಲವು ಸಲಹೆ
ಮಂಡ್ಯ: ಮಕ್ಕಳು ಮೊಬೈಲ್ ವ್ಯಸನವನ್ನು ರೂಢಿಸಿಕೊಳ್ಳಬಾರದು. ಅದರಂತೆ ಪಾಲಕರು ಮಕ್ಕಳ ಚಟುವಟಿಕೆಗಳ ಬಗ್ಗೆ ಸದಾ ನಿಗಾ ವಹಿಸಬೇಕು ಎಂದು ಖ್ಯಾತ ಮನೋವೈದ್ಯ ಡಾ.ಅನಿಲ್ ಆನಂದ್ ಸಲಹೆ ನೀಡಿದರು.
ತಾಲೂಕಿನ ಶಿವಳ್ಳಿ ಗ್ರಾಮದ ಸರ್.ಎಂ.ವಿಶ್ವೇಶ್ವರಯ್ಯ ಪ್ರೌಢಶಾಲೆಯಲ್ಲಿ ಗುರುವಾರ ಆಯೋಜಿಸಿದ್ದ ಗ್ರಾಮೀಣ ವಿದ್ಯಾರ್ಥಿಗಳ ಮಾನಸಿಕ ಆರೋಗ್ಯಕ್ಕಾಗಿ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಉಪನ್ಯಾಸ ನೀಡಿದ ಅವರು, ಆನ್‌ಲೈನ್ ಗೇಮ್, ಮಾದಕ ವಸ್ತುಗಳ ಚಟ, ಕ್ರಿಕೆಟ್ ಬೆಟ್ಟಿಂಗ್, ಮೊಬೈಲ್ ಗೇಮ್‌ಗಳಿಂದ ವಿದ್ಯಾರ್ಥಿಗಳು ದೂರ ಉಳಿದು ಶೈಕ್ಷಣಿಕ ಸಾಧನೆಯನ್ನು ಜೀವನದ ಗುರಿಯಾಗಿಸಿಕೊಳ್ಳಬೇಕು ಎಂದರು.
ಪಾಲಕರು ಮಕ್ಕಳ ಓದು, ಹವ್ಯಾಸ, ಹೊರಗಿನ ಸ್ನೇಹಿತರೊಂದಿಗಿನ ಒಡನಾಟವನ್ನು ಗಮನಿಸುತ್ತಿರಬೇಕು. ಹಾದಿ ತಪ್ಪುವುದು ಕಂಡುಬಂದ ಕೂಡಲೇ ಅವರನ್ನು ಎಚ್ಚರಿಸಿ ಸರಿದಾರಿಗೆ ತರುವ ಪ್ರಯತ್ನ ಮಾಡಬೇಕು. ಓದುವ ಹಂತದಲ್ಲೇ ಅನೇಕ ವಿದ್ಯಾರ್ಥಿಗಳು ಮಾದಕ ವ್ಯಸನಗಳು, ಬೆಟ್ಟಿಂಗ್, ಮೊಬೈಲ್ ಗೇಮ್, ರೀಲ್ಸ್‌ಗಳಿಗೆ ದಾಸರಾಗುತ್ತಿದ್ದಾರೆ. ಇದು ಅತ್ಯಂತ ಅಪಾಯಕಾರಿ. ಇಂತಹ ವ್ಯಸನಗಳಿರುವ ವಿದ್ಯಾರ್ಥಿಗಳನ್ನು ಒಂದು ವಾರಗಳ ಕಾಲ ಅವರ ಕಾರ್ಯಚಟುವಟಿಕೆಯನ್ನು ನಿಲ್ಲಿಸಿ ಗಮನಿಸಬೇಕು. ಆ ವ್ಯಸನಗಳಿಂದ ಅವರು ಹೊರಬರಲಾರದ ಸ್ಥಿತಿಯಲ್ಲಿದ್ದರೆ ಅವರನ್ನು ಬೇರೊಂದು ಕಾರ್ಯಚಟುವಟಿಕೆಗಳಲ್ಲಿ ತೊಡಗಿಸಿ ಮನಸ್ಸು ಪರಿವರ್ತನೆಯಾಗುವಂತೆ ಮಾಡಬೇಕು. ಒಬ್ಬರಿಗೊಬ್ಬರ ನಡುವೆ ಸಂವಹನ ಏರ್ಪಡುವಂತಹ ಕ್ರಿಯೆಗಳಲ್ಲಿ, ಆಟೋಟಗಳಲ್ಲಿ ಭಾಗವಹಿಸುವಂತೆ ಮಾಡುವುದರಿಂದ ದುಶ್ಚಟಗಳಿಂದ ಹೊರತರಲು ಸಾಧ್ಯವಾಗುತ್ತದೆ ಎಂದು ಕಿವಿಮಾತು ಹೇಳಿದರು.
ಓದುವ ವಯಸ್ಸಿನಲ್ಲಿ ಫೇಸ್‌ಬುಕ್, ಇನ್‌ಸ್ಟಾಗ್ರಾಂ, ವ್ಯಾಟ್ಸ್ ಆ್ಯಪ್‌ಗಳನ್ನು ಉಪಯೋಗಿಸಬಾರದು. ಅವುಗಳಲ್ಲಿ ವಿದ್ಯಾರ್ಥಿಗಳು ಕಲಿಯುವಂತಹದ್ದು ಏನೂ ಇರುವುದಿಲ್ಲ. ಮೊದಲು ಆಕರ್ಷಣೆಗಾಗಿ ನೋಡುವುದು ಮುಂದೆ ಗೀಳಾಗಿ ಪರಿವರ್ತನೆಯಾಗುತ್ತದೆ. ಆದ ಕಾರಣ ಓದುವ ವಯಸ್ಸಿನಲ್ಲಿ ಇವುಗಳಿಂದ ದೂರ ಉಳಿದು ಕಲಿಕೆಯತ್ತ ಆಸಕ್ತಿ ವಹಿಸಿದರೆ ಸಾಧನೆ ಸುಲಭ ಸಾಧ್ಯವಾಗಲಿದೆ ಎಂದು ಸಲಹೆ ನೀಡಿದ ಅವರು, ಮಕ್ಕಳು ವ್ಯಸನಗಳಿಗೆ ಬಲಿಯಾದ ನಂತರ ಜಾಗೃತರಾಗುವುದಕ್ಕಿಂತ ವ್ಯಸನಗಳಿಗೆ ಬಲಿಯಾಗದಂತೆ ಮುನ್ನೆಚ್ಚರಿಕೆ ವಹಿಸುವುದೇ ಹೆಚ್ಚು ಸೂಕ್ತ. ಈ ಹಿನ್ನೆಲೆಯಲ್ಲಿ ಚಿಕ್ಕ ವಯಸ್ಸಿನಿಂದಲೇ ಶಿಸ್ತು, ಸಮಯಪ್ರಜ್ಞೆ, ಸಂಸ್ಕಾರವನ್ನು ಕಲಿಸಬೇಕು. ಸಂಸ್ಕೃತಿ-ಸಂಸ್ಕಾರವಿಲ್ಲದ ಶಿಕ್ಷಣ ವ್ಯರ್ಥವಾದಂತೆ. ಪಾಲಕರು ಕೂಡ ಪುಸ್ತಕ, ಪತ್ರಿಕೆಗಳನ್ನು ಓದುವ ಹವ್ಯಾಸಗಳನ್ನು ರೂಢಿಸಿಕೊಳ್ಳಬೇಕು. ಆಗ ಮಕ್ಕಳೂ ಪಾಲಕರನ್ನು ಅನುಸರಿಸುತ್ತಾರೆ. ಮಕ್ಕಳ ಕೈಗೆ ಪುಸ್ತಕ ಕೊಟ್ಟು ಪಾಲಕರು ಮೊಬೈಲ್, ಟಿವಿ ನೋಡುತ್ತಾ ಕುಳಿತರೆ ಅವರ ಮನಸ್ಸು ನಿಮ್ಮತ್ತಲೇ ಸೆಳೆಯುತ್ತಿರುತ್ತದೆ ಎಂದು ಹೇಳಿದರು.
ಸ್ಪರ್ಧಾತ್ಮಕ ಯುಗಕ್ಕೆ ತಕ್ಕಂತೆ ಮಕ್ಕಳನ್ನು ಸಜ್ಜುಗೊಳಿಸುವುದಕ್ಕೆ ಪಾಲಕರು ಶ್ರಮ ವಹಿಸಬೇಕು. ಆಗ ಮಕ್ಕಳ ಮನಸ್ಸು ಬೇರೆ ಕಡೆಗೆ ಸೆಳೆಯುವುದಿಲ್ಲ. ಸ್ನೇಹಿತರು, ಕೌಟುಂಬಿಕ ಸಂಬಂಧಗಳೊಂದಿಗೆ ಮಕ್ಕಳು ಬೆರೆಯುವಂತೆ ಮಾಡಬೇಕು. ಮಾನವೀಯ ಮೌಲ್ಯಗಳನ್ನು ತುಂಬಬೇಕು. ಯಾವ ಪಾಲಕರು ಮಕ್ಕಳ ಮೇಲೆ ನಿಗಾ ವಹಿಸುವುದಿಲ್ಲವೋ ಆ ಮಕ್ಕಳು ಹಾದಿ ತಪ್ಪುತ್ತಾರೆ. ಕಾರ್ಯದ ಒತ್ತಡದ ನಡುವೆ ಮಕ್ಕಳ ಮೇಲೆ ಗಮನಹರಿಸಲು ಹಲವರಿಗೆ ಸಾಧ್ಯವಾಗದಿದ್ದರೂ ಆಗಾಗ ಅವರ ಕಲಿಕೆ, ಕಾರ್ಯಚಟುವಟಿಕೆಗಳತ್ತ ನಿಗಾ ಇಡುವುದರಿಂದ ಅವರನ್ನು ಸನ್ಮಾರ್ಗದಲ್ಲಿ ಮುನ್ನಡೆಸುವುದಕ್ಕೆ ಸಹಕಾರಿಯಾಗುತ್ತದೆ ಎಂದರು.
ಪ್ರಭಾರ ಮುಖ್ಯಶಿಕ್ಷಕಿ ಎಂ.ಯು.ಶ್ವೇತಾ, ಶಿಕ್ಷಕರಾದ ಮಲ್ಲಿಕಾರ್ಜುನ, ವಿನಯ್‌ಕುಮಾರ್, ಶಿವಣ್ಣ, ಶೈಲಜಮ್ಮ, ಶೋಭಾ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net