ಪರೀಕ್ಷೆ ಮುಗಿಯುವವರೆಗೆ ಮೊಬೈಲ್ ಬಿಡಿ

 ಕಿಕ್ಕೇರಿ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಆದರ್ಶ ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್ ವತಿಯಿಂದ ಪರೀಕ್ಷೆ ಭಯ ಬಿಡಿ ಕಾರ್ಯಕ್ರಮ ಜರುಗಿತು. ಕಿಕ್ಕೇರಿ ಕೃಷ್ಣಮೂರ್ತಿ, ಸಹದೇವು, ಕುಮಾರಸ್ವಾಮಿ, ವಿನಾಯಕ, ರವೀಂದ್ರ, ವೆಂಕಟೇಶ್, ಅಭಿಷೇಕ್ ಇದ್ದರು.
ಕಿಕ್ಕೇರಿ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಆದರ್ಶ ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್ ವತಿಯಿಂದ ಪರೀಕ್ಷೆ ಭಯ ಬಿಡಿ ಕಾರ್ಯಕ್ರಮ ಜರುಗಿತು. ಕಿಕ್ಕೇರಿ ಕೃಷ್ಣಮೂರ್ತಿ, ಸಹದೇವು, ಕುಮಾರಸ್ವಾಮಿ, ವಿನಾಯಕ, ರವೀಂದ್ರ, ವೆಂಕಟೇಶ್, ಅಭಿಷೇಕ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • exam
  • mobile-phone
ಕಿಕ್ಕೇರಿ: ಖಾಸಗಿ ಶಾಲೆ, ಕಾಲೇಜು ವ್ಯಾಮೋಹದಿಂದ ಸರ್ಕಾರಿ ಶಾಲಾ, ಕಾಲೇಜುಗಳು ಮುಚ್ಚುವಂತಾಗಿದ್ದು, ಭವಿಷ್ಯದಲ್ಲಿ ಇದು ಮಾರಕವಾಗಲಿದೆ ಎಂದು ಅಂತಾರಾಷ್ಟ್ರೀಯ ಸುಗಮ ಸಂಗೀತ ಗಾಯಕ ಡಾ. ಕಿಕ್ಕೇರಿ ಕೃಷ್ಣಮೂರ್ತಿ ಅಭಿಪ್ರಾಯಪಟ್ಟರು.
ಇಲ್ಲಿನ ಸರ್ಕಾರಿ ಪಿಯು ಕಾಲೇಜಿನಲ್ಲಿ ಮಂಗಳವಾರ ಆದರ್ಶ ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್, ಸ್ಪಂದನಾ ಫೌಂಡೇಶನ್, ಎನ್‌ಎಸ್‌ಎಸ್ ಘಟಕ ಆಯೋಜಿಸಿದ್ದ ಪರೀಕ್ಷಾ ಭಯ ಬಿಡಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದಿನಿಂದಲೇ ಪರೀಕ್ಷೆ ಮುಗಿಯುವವರಿಗೆ ಮೊಬೈಲ್ ಬಿಡಿ. ತಮ್ಮ ಜೇಬಿನಲ್ಲಿ ಶೇ. 25 ಅಂಕ ಭದ್ರವಾಗಲಿದೆ. ಮತ್ತಷ್ಟು ಕಸರತ್ತು ಮಾಡಿ ಹಳೆಯ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಒಮ್ಮೆ ತಿರುವು ಹಾಕಿ ಶೇ. 35 ಅಂಕಗಳಿಗೆ ತೊಂದರೆಯಾಗಲಾರದು. ಇದರಿಂದ ನೀವು ಅನುತ್ತೀರ್ಣರಾಗುವ ಭಯವೇ ಇಲ್ಲ ಎಂದು ಭರವಸೆ ತುಂಬಿದರು.
ಫೆ. 28ರಿಂದ ಪಿಯು ಪರೀಕ್ಷೆ ಆರಂಭವಾಗಲಿದೆ. ಮನೆಗಳಲ್ಲಿ ಮೊಬೈಲ್, ಟಿವಿ ಬಂದ್ ಆಗಲಿ, ಪರೀಕ್ಷೆಯನ್ನು ಹಬ್ಬದಂತೆ ಸಂಭ್ರಮದಿಂದ ಸ್ವಾಗತಿಸಿ. ಬೆಳಗ್ಗಿನ ಓದು ಹೆಚ್ಚು ಕಾಲ ಉಳಿಯಲಿದೆ. ಬೇಗ ಮಲಗಿ ಬೇಗ ಏಳುವ ಅಭ್ಯಾಸ ಕಷ್ಟವಾದರೂ ರೂಢಿಸಿಕೊಳ್ಳಿ. ಪಿಯು ಭವಿಷ್ಯದ ತಿರುವಿನ ಘಟ್ಟವಾಗಿದೆ. ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ವಾಚು ಉಡುಗೊರೆಯಾಗಿ ನೀಡಲಾಗುವುದು ಎಂದು ಹುರಿದುಂಬಿಸಿದರು.
ನಾನು ಓದಿದ ವಿದ್ಯಾ ದೇಗುಲ ಇದು. ಇದರೊಂದಿಗೆ ನನಗೆ ಅವಿನಾಭಾವ ಸಂಬಂಧ ಇದೆ. ಯಾರಿಗೇ ಆಗಲಿ ಹುಟ್ಟೂರಿನ ಕೀರ್ತಿ ಬೆಳಗಿಸಲು ಶಿಕ್ಷಣವೇ ಅಸ್ತ್ರ. ಭಯ ಬಿಟ್ಟು ಓದಿಗೆ ವೇಳಾಪಟ್ಟಿ ಹಾಕಿಕೊಂಡು ಕಷ್ಟವಾಗಿರುವ ವಿಷಯಕ್ಕೆ ಮೊದಲ ಆದ್ಯತೆ ನೀಡಿ. ಸ್ಪಷ್ಟ ಬರವಣಿಗೆ ಹೆಚ್ಚು ಅಂಕ ಗಳಿಕೆಗೆ ಸಹಕಾರಿಯಾಗಲಿದೆ ಎಂದು ಸಲಹೆ ನೀಡಿದರು.
ನಂತರ ವಿದ್ಯಾರ್ಥಿಗಳು ಕನ್ನಡ ಬಾವುಟ ಹಿಡಿದು ನಾಡಗೀತೆ ಹಾಗೂ ಪರೀಕ್ಷಾ ಭಯ ನಿವಾರಣೆಗಾಗಿ ನಡೆ ಮುಂದೆ ನಡೆ ಮುಂದೇ ಉಗ್ಗಿ ನಡೆ ಮುಂದೇ, ಗೆಲುವೇ ಗೆಲುವೆ ನಮಗೆಂದಿಂದಿಗೂ ಗೆಲುವೇ, ಏದ್ದೇಳಿ ಮಕ್ಕಳೇ ಸನ್ನದ್ಧರಾಗಿ ಗೀತೆಗಳನ್ನು ಹಾಡಿದರು. ಪ್ರಾಂಶುಪಾಲ ಸಹದೇವು, ಎನ್‌ಎಸ್‌ಎಸ್ ಘಟಕಾಧಿಕಾರಿ ಕುಮಾರಸ್ವಾಮಿ, ವಿನಾಯಕ, ರವೀಂದ್ರ, ನಾಗೇಶ್, ಪರಿಸರ ಪ್ರೇಮಿ ಊಗಿನಹಳ್ಳಿ ವೆಂಕಟೇಶ್, ಕಲಾವಿದ ಅಭಿಷೇಕ್ ರಾಂಪ್ರಸಾದ್, ಚಂದ್ರಿಕಾ, ಅರ್ಪಿತಾ, ಫಾಜಿಲಾ ಖಾನಂ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net