ಕಿಕ್ಕೇರಿ: ಅತಿವೃಷ್ಟಿಯಿಂದ ಮಂದಗೆರೆಯ ಹೇಮಾವತಿ ಅಣೆಕಟ್ಟೆಗೆ ಹಾನಿಯಾಗಿರುವುದನ್ನು ತ್ವರಿತವಾಗಿ ದುರಸ್ತಿ ಮಾಡುವಂತೆ ಶಾಸಕ ಎಚ್.ಟಿ. ಮಂಜು ತಿಳಿಸಿದರು.
ಸಮೀಪದ ಮಂದಗೆರೆಯ ಅಣೆಕಟ್ಟೆಯ ತಡೆಗೋಡೆ ಕಾಮಗಾರಿಗೆ ಮಂಗಳವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಕಳೆದ ವರ್ಷ ಹೇಮಾವತಿ ನದಿ ಮಳೆಗೆ ಉಕ್ಕಿ ಹರಿದ ಪರಿಣಾಮ ಅಣೆಕಟ್ಟಿಗೆ ಹಾನಿಯಾಗುವಂತೆ ಅಣೆಕಟ್ಟೆ ಬಳಿ ದೊಡ್ಡದಾಗಿ ಕೊರಕಲು ಬಿದ್ದಿತ್ತು. ಅಣೆಕಟ್ಟೆ ಬಳಿಯ ನಾಲೆಗೂ ಹಾನಿಯಾಗಿತ್ತು. ಮರಳು ಮೂಟೆ ಹಾಕಿ ಸುರಕ್ಷತೆ ಕಾಪಾಡಲಾಗಿತ್ತು. ಸರ್ಕಾರ ಹಾಗೂ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರಿಗೆ ಮನವಿ ಮಾಡಿ ಅಣೆಕಟ್ಟೆಗೆ ತಡೆಗೋಡೆ ನಿರ್ಮಿಸಲು ಒತ್ತಾಯ ಮಾಡಿದ್ದೆ. ಸುಮಾರು 4.5 ಕೋಟಿ ರೂ. ಅಂದಾಜು ವೆಚ್ಚದಲ್ಲಿ ತಡೆಗೋಡೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಗುಣಮಟ್ಟದ ಕಾಮಗಾರಿಗೆ ಗುತ್ತಿಗೆದಾರರು ಒತ್ತು ನೀಡಬೇಕು. ಮಳೆಗಾಲ ಆರಂಭವಾಗುವುದರೊಳಗೆ ಕಾಮಗಾರಿ ಮುಕ್ತಾಯ ಮಾಡಿಕೊಡಬೇಕು ಎಂದು ಗುತ್ತಿಗೆದಾರರಿಗೆ ತಾಕೀತು ಮಾಡಿದರು.
ಕನ್ನಂಬಾಡಿ ಅಣೆಕಟ್ಟು ನಿರ್ಮಾಣಕ್ಕೆ ಮುನ್ನ 1903ರಲ್ಲಿ ಮಂದಗೆರೆಯಲ್ಲಿ ಹೇಮಾವತಿ ನದಿಗೆ ಅಡ್ಡಲಾಗಿ ಅಣೆಕಟ್ಟು ನಿರ್ಮಾಣವಾಗಿದೆ. ಈ ಅಣೆಕಟ್ಟಿನ ಎರಡು ಬದಿಯ ಎಡ ಹಾಗೂ ಬಲದಂಡೆ ನಾಲೆಗಳನ್ನು ಆಶ್ರಯಿಸಿ ಸುಮಾರು 18 ಸಾವಿರ ಎಕರೆ ಅಚ್ಚುಕಟ್ಟು ಪ್ರದೇಶವಿದ್ದು ರೈತರ ಜೀವನಾಡಿಯಾಗಿ ಈ ನಾಲೆ ಇದೆ. ರೈತರು ಈ ನಾಲೆ ಆಶ್ರಯಿಸಿ ಬದುಕುತ್ತಿದ್ದಾರೆ. ಕೊನೆಯ ಭಾಗದ ರೈತರಿಗೆ ಸಮರ್ಪಕವಾಗಿ ನೀರು ಸಿಗಬೇಕು. ಎರಡು ಬೆಳೆ ಬೆಳೆಯಲು ಅನುಕೂಲವಾಗಬೇಕಿದೆ ಎಂದು ಹೇಳಿದರು.
ಜೆಡಿಎಸ್ ಮುಖಂಡರಾದ ಕೆ.ಬಿ.ಮಧು, ಕೆ.ಬಿ.ಶೇಖರ್, ಮಂಜೇಗೌಡ, ಮೋಹನಬಾಬು, ಬಸವಲಿಂಗಪ್ಪ, ಚಂದ್ರಶೇಖರ್, ಸಂತೋಷ್, ಹೇಮಾವತಿ ನೀರಾವರಿ ಇಲಾಖೆ ಅಧಿಕಾರಿಗಳು ಮತ್ತಿತರರಿದ್ದರು.