ಮಳವಳ್ಳಿ ರೋಟರಿ ಕ್ಲಬ್ 3192 ವತಿಯಿಂದ ರೋಟರಿ ಶಾಲೆಯಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಇಂಜಿನಿಯರ್ ದಿನಾಚರಣೆಯಲ್ಲಿ ಆರ್.ಜಿ.ಅರುಣ್ ಹಾಗೂ ಸುರಕ್ಷಾ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ರೋಟರಿ ಅಧ್ಯಕ್ಷ ಮೊಹಮದ್ ಜಬೀವುಲ್ಲಾ, ಕಾರ್ಯದರ್ಶಿ ಆರ್.ಜಿ.ಮಹದೇವಸ್ವಾಮಿ, ಘನಶ್ಯಾಂದಾಸ್, ಸೋಮಶೇಖರ್ ಇದ್ದರು.
ಮಳವಳ್ಳಿ : ಪಟ್ಟಣದ ರೋಟರಿ ಶಾಲೆ ಹಾಗೂ ತಾಲೂಕಿನ ದೊಡ್ಡಬೂಹಳ್ಳಿ ಮತ್ತು ನೆಲ್ಲಿಗೆರೆ ಸರ್ಕಾರಿ ಪ್ರೌಢಶಾಲೆಗಳಲ್ಲಿ ಮಂಗಳವಾರ ರೋಟರಿ ಸಂಸ್ಥೆಯಿಂದ ಭಾರತ ರತ್ನ ಸರ್ ಎಂ.ವಿಶ್ವೇಶ್ವರಯ್ಯ ಜನ್ಮದಿನದ ಅಂಗವಾಗಿ ಇಂಜಿನಿಯರ್ಸ್ ದಿನಾಚರಣೆ ಆಯೋಜಿಸಲಾಗಿತ್ತು.
ಪಟ್ಟಣದ ರೋಟರಿ ಶಾಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಇಂಜಿನಿಯರ್ ದಂಪತಿ ಆರ್.ಜಿ.ಅರುಣ್ ಹಾಗೂ ಸುರಕ್ಷಾ ಅವರನ್ನು ಗೌರವಿಸಲಾಯಿತು.
ರೋಟರಿ ಸಂಸ್ಥೆ ಕಾರ್ಯದರ್ಶಿ ಆರ್.ಜಿ.ಮಹದೇವಸ್ವಾಮಿ ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಣದ ಜತೆ ಶಿಸ್ತು, ಪ್ರಾಮಾಣಿಕತೆ, ಸಮಯಪ್ರಜ್ಞೆ, ಪರಿಶ್ರಮ, ಮಾನವೀಯತೆ ಹಾಗೂ ಸಾಮಾಜಿಕ ಜವಾಬ್ದಾರಿಯಂತಹ ಉತ್ತಮ ಮೌಲ್ಯಗಳನ್ನು ರೂಢಿಸಿಕೊಂಡು ಗೌರವಯುತ ಹಾಗೂ ಸಾರ್ಥಕ ಜೀವನ ನಡೆಸಬೇಕು ಎಂದು ಕರೆ ನೀಡಿದರು.
ನೆಲ್ಲಿಗೆರೆ, ದೊಡ್ಡಬೂಹಳ್ಳಿಯಲ್ಲೂ ಆಚರಣೆ: ತಾಲೂಕಿನ ನೆಲ್ಲಿಗೆರೆ ಮತ್ತು ದೊಡ್ಡಬೂಹಳ್ಳಿ ಸರ್ಕಾರಿ ಪ್ರೌಢಶಾಲೆಗಳಲ್ಲೂ ರೋಟರಿ ಸಂಸ್ಥೆಯಿಂದ ಇಂಜಿನಿಯರ್ಸ್ ದಿನಾಚರಣೆ ಆಯೋಜಿಸಲಾಗಿತ್ತು.
ನಿವೃತ್ತ ಇಂಜಿನಿಯರ್ ನರಸಿಂಹಮೂರ್ತಿ ಅವರನ್ನು ಸನ್ಮಾನಿಸಲಾಯಿತು. 2024-25ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ನರಸಿಂಹಮೂರ್ತಿ ನಗದು ಬಹುಮಾನ ನೀಡಿ ಪ್ರೋತ್ಸಾಹಿಸಿದರು. ನೆಲ್ಲಿಗೆರೆ ಸರ್ಕಾರಿ ಪ್ರೌಢಶಾಲೆಯಲ್ಲಿ ಮುಖ್ಯಶಿಕ್ಷಕ ಬಸವರಾಜು ಇದ್ದರು.
ದೊಡ್ಡಬೂಹಳ್ಳಿ ಶಾಲೆಯಲ್ಲಿ ಮುಖ್ಯಶಿಕ್ಷಕ ನಾಗೇಂದ್ರಮೂರ್ತಿ ಅಧ್ಯಕ್ಷತೆಯಲ್ಲಿ ಸಮಾರಂಭ ಆಯೋಜಿಸಲಾಗಿತ್ತು.
ರೋಟರಿ ಸಂಸ್ಥೆ ಅಧ್ಯಕ್ಷ ಮಹಮದ್ ಜಬೀವುಲ್ಲಾ, ಘನಶ್ಯಾಮ್ ದಾಸ್, ಆರ್.ಜಿ.ಮಹದೇವಸ್ವಾಮಿ, ಎಂ.ವಿ.ಸೋಮಶೇಖರ್, ಹರೀಶ್ ಸೇರಿದಂತೆ ಇತರ ಗಣ್ಯರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಇದ್ದರು.