ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ

ಮಳವಳ್ಳಿ ಪಟ್ಟಣದ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಶವಾಗಾರ ಕೊಠಡಿ ನಿರ್ಮಾಣಕ್ಕೆ ಶನಿವಾರ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಭೂಮಿಪೂಜೆ ನೆರವೇರಿಸಿದರು. ಡಾ.ಸಂಜಯ್, ಡಾ.ವೀರಭದ್ರಪ್ಪ, ದೊಡ್ಡಯ್ಯ, ಕಲ್ಕುಣಿ ದೇವರಾಜು, ನೂರುಲ್ಲಾ ಇದ್ದರು.
ಮಳವಳ್ಳಿ ಪಟ್ಟಣದ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಶವಾಗಾರ ಕೊಠಡಿ ನಿರ್ಮಾಣಕ್ಕೆ ಶನಿವಾರ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಭೂಮಿಪೂಜೆ ನೆರವೇರಿಸಿದರು. ಡಾ.ಸಂಜಯ್, ಡಾ.ವೀರಭದ್ರಪ್ಪ, ದೊಡ್ಡಯ್ಯ, ಕಲ್ಕುಣಿ ದೇವರಾಜು, ನೂರುಲ್ಲಾ ಇದ್ದರು.
Published on
ಮಳವಳ್ಳಿ : ಪಟ್ಟಣದ ಸರ್ಕಾರಿ ತಾಲೂಕು ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಶವಾಗಾರ ನಿರ್ಮಾಣ, ತಾಯಿ ಮತ್ತು ಮಕ್ಕಳ ಆಸ್ಪತ್ರೆ ಲಿಫ್ಟ್ ಅಳವಡಿಕೆ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಖಾಸಗಿ ಕಂಪನಿಗಳ 2.82 ಕೋಟಿ ರೂ. ಸಿಎಸ್‌ಆರ್ ಅನುದಾನದಲ್ಲಿ ಶನಿವಾರ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಭೂಮಿಪೂಜೆ ನೆರವೇರಿಸಿದರು.
ತಾಲೂಕಿನ ಕಿರಗಸೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಎಸಿಇ ಡಿಸೈನ್ ಸಂಸ್ಥೆಯ ಸಿಎಸ್‌ಆರ್ ಅನುದಾನ 22 ಲಕ್ಷ ರೂ. ವೆಚ್ಚದಲ್ಲಿ 2 ಕೊಠಡಿಗಳು ಹಾಗೂ ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜು ಆವರಣದಲ್ಲಿ ಪ್ರೌಢಶಾಲಾ ವಿಭಾಗಕ್ಕೆ ನೆಸ್ಲೆ ಇಂಡಿಯಾ ಕಂಪನಿಯ 1 ಕೋಟಿ 30 ಲಕ್ಷ ರೂ. ವೆಚ್ಚದಲ್ಲಿ 6 ಕೊಠಡಿಗಳು ಮತ್ತು 1 ಕೋಟಿ 30 ಲಕ್ಷ ರೂ. ವೆಚ್ಚದಲ್ಲಿ ಪಟ್ಟಣದ ಸರ್ಕಾರಿ ಪಶ್ಚಿಮ ಬಡಾವಣೆಯ ಕಾರ್ಖಾನೆ ಶಾಲೆ ಆವರಣದಲ್ಲಿ 6 ಕೊಠಡಿಗಳ ನಿರ್ಮಾಣಕ್ಕೆ ಚಾಲನೆ ನೀಡಿದ ನಂತರ ಮಾತನಾಡಿದರು.
ನೆಸ್ಲೆ ಹಾಗೂ ಎಸಿಇ ಸಂಸ್ಥೆಯವರ ಸಿಎಸ್‌ಆರ್ ಅನುದಾನದಲ್ಲಿ ಒಟ್ಟು 2 ಕೋಟಿ 82 ಲಕ್ಷ ರೂ. ವೆಚ್ಚದಲ್ಲಿ ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಸರ್ಕಾರಿ ಆಸ್ಪತ್ರೆ ಆವರಣದಲ್ಲಿ 90 ಲಕ್ಷ ರೂ. ವೆಚ್ಚದಲ್ಲಿ ಶವಾಗಾರ ನಿರ್ಮಾಣ ಮತ್ತು ಇತರ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಾಗಿದೆ ಎಂದರು.
ಈಗಾಗಲೇ ತಾಲೂಕಿನ ಎಲ್ಲ ಸರ್ಕಾರಿ ಶಾಲೆಗಳನ್ನು ಡಿಜಿಟಲೀಕರಣಗೊಳಿಸಿ ಖಾಸಗಿ ಶಾಲೆಗಳಲ್ಲೂ ಸಿಗದ ತಂತ್ರಜ್ಞಾನ ಆಧಾರಿತ ಶಿಕ್ಷಣ ನೀಡಲಾಗುತ್ತಿದ್ದು, ಇದರ ಫಲವಾಗಿ ತಾಲೂಕಿನ ಸರ್ಕಾರಿ ಶಾಲೆಗಳಲ್ಲಿ ಪ್ರಸ್ತುತ ಸಾಲಿನ ಎಸ್‌ಎಸ್‌ಎಲ್‌ಸಿ ಫಲಿತಾಂಶ 90 ಗಡಿ ದಾಟಿದೆ. ಸಾಕಷ್ಟು ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಗಣನೀಯವಾಗಿ ಹೆಚ್ಚಳವಾಗಿದ್ದು, ತಾಲೂಕಿನ ಎಲ್ಲ ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ದಾಖಲಿಸುವ ಮೂಲಕ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ಮನವಿ ಮಾಡಿದರು.
ಕೆಲ ವ್ಯಕ್ತಿಗಳು ಸಂಘಟನೆಗಳ ಹೆಸರಿನಲ್ಲಿ ಸರ್ಕಾರಿ ಕಚೇರಿಗಳು, ಆಸ್ಪತ್ರೆಗಳಿಗೆ ಹೋಗಿ ನೌಕರ ಸಿಬ್ಬಂದಿಯನ್ನು ಪ್ರಶ್ನಿಸುವ ನೆಪದಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾ ಗೂಂಡಾವರ್ತನೆ ತೋರುತ್ತಿರುವುದರ ಜತೆಗೆ ಕರ್ತವ್ಯಕ್ಕೆ ಅಡ್ಡಿಪಡಿಸುತ್ತಿದ್ದಾರೆ ಎಂದು ತೀವ್ರ ಅಸಮಧಾನ ವ್ಯಕ್ತ ಪಡಿಸಿದರು.
ದಬ್ಬಾಳಿಕೆ ಪ್ರವೃತ್ತಿ ನೌಕರರ ಆತ್ಮಸ್ಥೈರ್ಯ ಕುಗ್ಗಿಸುವುದರಿಂದ ಇಂತಹ ವರ್ತನೆಗಳನ್ನು ಸಹಿಸುವುದಿಲ್ಲ. ಲೋಪವಾಗಿದ್ದರೆ ಸಂಬಂಧಿಸಿದ ಸಕ್ಷಮ ಪ್ರಾಧಿಕಾರಕ್ಕೆ ದೂರು ಸಲ್ಲಿಸಲು ಅವಕಾಶವಿದೆ. ಅದು ಬಿಟ್ಟು ಸಿಬ್ಬಂದಿಯೊಡನೆ ಅನುಚಿತ ವರ್ತನೆ ತೋರುವುದು ಕಾನೂನು ಬಾಹಿರ. ಇಂತವರ ವಿರುದ್ಧ ಸುಮೋಟೋ ಕೇಸ್ ದಾಖಲಿಸುವಂತೆ ಜಿಲ್ಲಾಡಳಿತಕ್ಕೆ ಈಗಾಗಲೇ ಸೂಚನೆ ನೀಡಲಾಗಿದೆ ಎಂದರು.
ಇದೇ ಸಂದರ್ಭದಲ್ಲಿ ನೆಸ್ಲೆ ಕಂಪನಿಯ ಮುಖ್ಯಸ್ಥ ಶ್ರೀನಿವಾಸ್, ಸಂದೀಪ್ ಬಿಇಒ ಉಮಾ, ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ರವೀಂದ್ರ ಕುಮಾರ್, ಆಸ್ಪತ್ರೆ ಆಡಳಿತಾಧಿಕಾರಿ ಡಾ.ಸಂಜಯ್, ತಾಲೂಕು ಆರೋಗ್ಯಾಧಿಕಾರಿ ಡಾ.ವೀರಭದ್ರಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದೊಡ್ಡಯ್ಯ, ಮಾಜಿ ಅಧ್ಯಕ್ಷ ದೇವರಾಜು, ಪುರಸಭಾ ಮಾಜಿ ಸದಸ್ಯ ನೂರುಲ್ಲಾ ಸೇರಿದಂತೆ ಹಲವು ಮುಖಂಡರು ಈ ವೇಳೆ ಇದ್ದರು .
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net