ಜ್ಞಾನದ ಬೆಳಕಿನಲ್ಲಿ ಸಂಸ್ಕಾರವೂ ರೂಢಿಗತವಾಗಲಿ

ರಾಮೇಶ್ವರ ಮಠದ ಶ್ರೀ ಶಿವಬಸವ ಸ್ವಾಮೀಜಿ ಆಶಯ
SDM
ಕಿಕ್ಕೇರಿ ಸಮೀಪದ ಪುರದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಸಾಮೂಹಿಕ ಧನಲಕ್ಷ್ಮೀ ಪೂಜಾ ಕಾರ್ಯಕ್ರಮದಲ್ಲಿ ಶ್ರೀ ಶಿವಬಸವ ಸ್ವಾಮೀಜಿ, ಮಲ್ಲಿಕಾರ್ಜುನ, ರಾಣಿ, ಕುಮಾರ್, ಎಂ.ಎಸ್. ಪವಿತ್ರಾ ಮತ್ತಿತರರು ಇದ್ದರು. KKR
Published on: 

ಕಿಕ್ಕೇರಿ: ಧರ್ಮ ಮಾರ್ಗದಲ್ಲಿ ಸಾಗುವವರಿಗೆ ಸದಾ ಒಳಿತೇ ಆಗಲಿದೆ ಎಂದು ಬೇಬಿ ಬೆಟ್ಟದ ಶ್ರೀ ರಾಮೇಶ್ವರ ಮಠದ ಶ್ರೀಶಿವಬಸವ ಸ್ವಾಮೀಜಿ ಹೇಳಿದರು.

ಸಮೀಪದ ಪುರ ಗ್ರಾಮದ ಬಸವೇಶ್ವರ ಸಮುದಾಯ ಭವನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಿಕ್ಕೇರಿ ಕ್ಷೇತ್ರ ಘಟಕ ಶುಕ್ರವಾರ ಹಮ್ಮಿಕೊಂಡಿದ್ದ ಸಾಮೂಹಿಕ ಧನಲಕ್ಷ್ಮೀ ಪೂಜೆ ಹಾಗೂ ಧಾರ್ಮಿಕ ಜಾಗೃತಿ ಸಭೆಯಲ್ಲಿ ಆಶೀರ್ವಚನ ನೀಡಿದರು. ಸಾಮೂಹಿಕ ಧನಲಕ್ಷ್ಮೀ ಪೂಜೆಯಿಂದ ಸರ್ವರಿಗೂ ಸಂಪತ್ತು ಲಭಿಸಲು ಎಂದವರು ಆಶಿಸಿದರು. ಬಡಜನರು ಹಾಗೂ ರೈತಾಪಿ ವರ್ಗದವರು ಇಂತಹ ಪೂಜೆಗಳನ್ನು ಮಾಡಲು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವೇದಿಕೆ ಕಲ್ಪಿಸಿದೆ. ಯುವಜನರು ವಿದ್ಯೆ ಎಂಬ ಜ್ಞಾನದ ಬೆಳಕಿನಲ್ಲಿ ಸಂಸ್ಕಾರ ಮತ್ತು ಸನ್ನಡತೆಯನ್ನೂ ರೂಢಿಸಿಕೊಳ್ಳಬೇಕು. ತಾಯಿ, ತಂದೆ ಮತ್ತು ಗುರು ಹಿರಿಯರನ್ನು ಗೌರವಿಸಬೇಕು ಎಂದರು. ಆರ್‌ಟಿಒ ಅಧಿಕಾರಿಗಳ ಸಂಘದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಮಾತನಾಡಿ, ಅಷ್ಟಲಕ್ಷ್ಮಿಯರಲ್ಲಿ ಧನಲಕ್ಷ್ಮೀ ಪೂಜೆಗೆ ವಿಶೇಷ ಮಹತ್ವವಿದೆ. ಇಂತಹ ಪೂಜೆಗಳು ಪ್ರತಿ ಗ್ರಾಮದಲ್ಲೂ ನಡೆಯುವಂತಾಗಲಿ ಎಂದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕಿ ಲೀಲಾವತಿ ಮಾತನಾಡಿ, ರೈತರ ಬೆನ್ನೆಲುಬಾಗಿ ಸಂಸ್ಥೆ ನಿಂತಿದೆ ಎಂದರು. ವಿವಿಧ ಯೋಜನೆ, ಆಧುನಿಕ ಕೃಷಿ ಪದ್ಧತಿಗೆ ತರಬೇತಿ, ನೆರವು ಈ ಸಂಸ್ಥೆಯಿಂದ ಲಭ್ಯವಾಗುತ್ತಿದೆ ಎಂದರು. ರೈತರು ನೀರನ್ನು ಜೋಪಾನವಾಗಿ ಬಳಸಿಕೊಂಡು ಬೇಸಾಯ ಮಾಡಬೇಕು. ಹೈನುಗಾರಿಕೆ, ಗುಡಿ ಕೈಗಾರಿಕೆಗೆ ವಿಶೇಷ ಒತ್ತು ನೀಡಬೇಕು ಎಂದರು.

ತಾಲೂಕು ಯೋಜನಾಧಿಕಾರಿ ಬಿ. ಶ್ರೀನಿವಾಸ್ ಸಂಸ್ಥೆ ವಿವಿಧ ಯೋಜನೆ ಕುರಿತು ಮಾತನಾಡಿದರು. ಪ್ರಗತಿ ಬಂಧು ಸ್ತ್ರೀ ಶಕ್ತಿ ಸಂಘಗಳ ಒಕ್ಕೂಟದ ಅಧ್ಯಕ್ಷೆ ರಾಣಿ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸದಸ್ಯ ಕುಮಾರ್, ಕಸಬಾ ವಲಯದ ಮೇಲ್ವಿಚಾರಕಿ ಎಂ.ಎಸ್.ಪವಿತ್ರಾ, ಸೇವಾ ಪ್ರತಿನಿಧಿಗಳಾದ ಶಶಿಕಲಾ, ನೇತ್ರಾವತಿ, ಅನಿತಾ, ಜೀವಿತ, ಉಮಾ, ಶ್ವೇತಾ, ಭಾನುಪ್ರಿಯಾ, ರಕ್ಷಿತಾ, ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ಅಧಿಕಾರಿ ನಂದಿನಿ ಇತರರು ಇದ್ದರು.