ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರವಾಸ

ತೆಂಡೇಕೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳನ್ನು ಸ್ವಂತ ಹಣದಲ್ಲಿ ಬಡ್ತಿ ಶಿಕ್ಷಕ ಬಿ.ಎಸ್.ರಾಜು ಪ್ರವಾಸಕ್ಕೆ ಕರೆದೊಯ್ಯುತ್ತಿರುವುದು.
ತೆಂಡೇಕೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳನ್ನು ಸ್ವಂತ ಹಣದಲ್ಲಿ ಬಡ್ತಿ ಶಿಕ್ಷಕ ಬಿ.ಎಸ್.ರಾಜು ಪ್ರವಾಸಕ್ಕೆ ಕರೆದೊಯ್ಯುತ್ತಿರುವುದು.
Published on
ಕೆ.ಆರ್.ಪೇಟೆ: ಸರ್ಕಾರಿ ಶಾಲೆಯ ಶಿಕ್ಷಕರು ವಿದ್ಯಾರ್ಥಿಗಳ ಕಲಿಕೆಯಲ್ಲಿ ತೊಡಗುತ್ತಿಲ್ಲ ಎಂಬ ಅಪವಾದದ ನಡುವೆ ಶಿಕ್ಷಕರೊಬ್ಬರು ಸರ್ಕಾರಿ ಶಾಲೆಯ ಬಡ ಮಕ್ಕಳಿಗೆ ಸ್ವಂತ ಹಣದಲ್ಲಿ ಎರಡು ದಿನದ ಶೈಕ್ಷಣಿಕ ಪ್ರವಾಸವನ್ನು ಹಮ್ಮಿಕೊಳ್ಳುವ ಮೂಲಕ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಉತ್ತೇಜನಕ್ಕೆ ಮುನ್ನುಡಿ ಬರೆದಿದ್ದಾರೆ.
ತಾಲೂಕಿನ ತೆಂಡೇಕೆರೆ ಸರ್ಕಾರಿ ಪ್ರಾಥಮಿಕ ಪಾಠಶಾಲೆಯಲ್ಲಿ 1ರಿಂದ 7ನೇ ತರಗತಿಯ 63 ವಿದ್ಯಾರ್ಥಿಗಳಿದ್ದಾರೆ. ಇದರಲ್ಲಿ 1ಮತ್ತು 2ನೇ ತರಗತಿಯ ಮಕ್ಕಳನ್ನು ಹೊರತುಪಡಿಸಿ ಉಳಿದ 45 ವಿದ್ಯಾರ್ಥಿಗಳನ್ನು ಶಾಲೆಯ ಬಡ್ತಿ ಮುಖ್ಯಶಿಕ್ಷಕ ಬಿ.ಎಸ್.ರಾಜು ಅವರ ಸ್ವಂತ ಹಣದಲ್ಲಿ ಎರಡು ದಿನದ ಶೈಕ್ಷಣಿಕ ಪ್ರವಾಸಕ್ಕೆ ಕರದೊಯ್ದು ಶಿಕ್ಷಕರಿಗೆ ಮಾದರಿಯಾಗಿದ್ದಾರೆ.
ಡಿ.25ರಂದು ಪ್ರವಾಸ ಪ್ರಾರಂಭಿಸಿದ್ದು, 26ರಂದು ಹಿಂದಿರುಗಲಿದ್ದಾರೆ. ಶ್ರೀರಂಗಪಟ್ಟಣದ ರಂಗನಾಥಸ್ವಾಮಿ ದೇವಸ್ಥಾನ, ದರಿಯಾ ದೌಲತ್ತು, ಸಂಗಮ, ಟಿಪ್ಪುವಿನ ಬೇಸಿಗೆ ಅರಮನೆ, ನಿಮಿಷಾಂಬ ದೇವಸ್ಥಾನ, ಸೋಮನಾಥಪುರ, ತಲಕಾಡು, ಶಿವನಸಮುದ್ರ, ಮಲೆ ಮಹದೇಶ್ವರ ದೇವಸ್ಥಾನ ದರ್ಶನ ಪಡೆದು ರಾತ್ರಿ ವಿಶ್ರಾಂತಿ ಪಡೆದು, ಶುಕ್ರವಾರ ಮೇಕೆದಾಟು, ಹೊಗೇನಕಲ್ ಫಾಲ್ಸ್, ಸುತ್ತೂರು ಮಠ, ಮೈಸೂರು ಅರಮನೆ, ಪ್ರಾಣಿ ಸಂಗ್ರಹಾಲಯ, ಚಾಮುಂಡಿ ಬೆಟ್ಟ, ಕೆಆರ್‌ಎಸ್ ಬೃಂದಾವನ ಪ್ರವಾಸ ಮಾಡಿ ಮನೆಗೆ ಹಿಂದಿರುಗಲಿದ್ದಾರೆ.
ಶಿಕ್ಷಕ ಒಂದು ಲಕ್ಷ ಬಜೆಟ್‌ನಲ್ಲಿ ವಿದ್ಯಾರ್ಥಿಗಳ ಪ್ರವಾಸಕ್ಕೆ ಯೋಜನೆ ರೂಪಿಸಿದ್ದಾರೆ. ಕೆಎಸ್‌ಆರ್‌ಟಿಸಿ ಅಶ್ವಮೇಧ ಬಸ್ ಬಾಡಿಗೆಗೆ ಪಡೆದಿದ್ದಾರೆ. ಪ್ರವಾಸದಲ್ಲಿ ಇವರೊಂದಿಗೆ ನಾಲ್ವರು ಶಿಕ್ಷಕರು ಪಾಲ್ಗೊಂಡಿದ್ದಾರೆ.
ವಿದ್ಯಾರ್ಥಿಗಳಿಗೆಲ್ಲರಿಗೂ ಶಿಕ್ಷಕ ಬಿ.ಎಸ್.ರಾಜು ಪ್ರೀತಿಪಾತ್ರರು. ನಮ್ಮನ್ನು ಸ್ವಂತ ಮಕ್ಕಳಂತೆ ಕಾಣುತ್ತಾರೆ. ನಮಗಾಗಿ ಸ್ವಂತ ಖರ್ಚಿನಲ್ಲಿ ಪ್ರವಾಸ ಕೈಗೊಂಡಿದ್ದಾರೆ. ಇದು ಎಲ್ಲರಿಗೂ ಇಷ್ಟವಾಗಿದೆ. ಅವರು ನಮಗೆ ಆದರ್ಶರಾಗಿರುತ್ತಾರೆ. ಪ್ರವಾಸ ಖುಷಿ ಆಗಿದೆ.
ಎ.ಎಸ್.ಚಂದನ್, ಆರನೇ ತರಗತಿ ವಿದ್ಯಾರ್ಥಿ, ತೆಂಡೇಕೆರೆ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net