ಕೆಸಿಎನ್ ಬೆಳವಣಿಗೆಗೆ ಎಚ್‌ಡಿಡಿ, ಎಚ್‌ಡಿಕೆ ಕಾರಣ: ಕೆ.ಆರ್.ಪೇಟೆ ಶಾಸಕ ಎಚ್.ಟಿ.ಮಂಜು ಹೇಳಿಕೆ

ಮಂಡ್ಯದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಕೆ.ಆರ್.ಪೇಟೆ ಶಾಸಕ ಎಚ್.ಟಿ.ಮಂಜು ಮಾತನಾಡಿದರು.
ಮಂಡ್ಯದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಕೆ.ಆರ್.ಪೇಟೆ ಶಾಸಕ ಎಚ್.ಟಿ.ಮಂಜು ಮಾತನಾಡಿದರು.
Published on

ಪ್ರಮುಖ ಮುಖ್ಯಾಂಶಗಳು

  • ಮಾಜಿ ಸಚಿವ ಕೆ.ಸಿ.ನಾರಾಯಣಗೌಡ, ಮಾಜಿ ಶಾಸಕ ಪ್ರೀತಂ ವಿರುದ್ಧ ಅಸಮಾಧಾನ
  • ಮೈತ್ರಿ ಇರುವಾಗ ಗೊಂದಲದ ಹೇಳಿಕೆ ಬೇಡ
ಮಂಡ್ಯ: ಎಚ್.ಡಿ.ದೇವೇಗೌಡ ಹಾಗೂ ಎಚ್.ಡಿ.ಕುಮಾರಸ್ವಾಮಿ ಅವರ ಸಹಕಾರ ಇಲ್ಲದಿದ್ದರೆ ಕೆ.ಸಿ.ನಾರಾಯಣಗೌಡ ಅವರು ರಾಜಕೀಯವಾಗಿ ಈ ಮಟ್ಟಕ್ಕೆ ಬೆಳೆಯಲು ಸಾಧ್ಯವಿರಲಿಲ್ಲ. ನಾವೂ ಸಹ ಅವರ ಗೆಲುವಿಗೆ ಶ್ರಮಿಸಿದ್ದೇವೆ. 2018ರ ಚುನಾವಣೆಯಲ್ಲಿ ‘ಬಿ’ ಫಾರಂ ಬಗ್ಗೆ ಗೊಂದಲವಿತ್ತು. ಆ ಸಂದರ್ಭದಲ್ಲಿ ಕೆ.ಸಿ.ನಾರಾಯಣಗೌಡ ಅವರೇ ಅಧಿಕೃತ ಅಭ್ಯರ್ಥಿ ಎಂದು ಘೋಷಿಸಿ ಗೊಂದಲಕ್ಕೆ ತೆರೆ ಎಳೆದವರು ಇದೇ ನಿಖಿಲ್ ಕುಮಾರಸ್ವಾಮಿ ಅವರು. ಇದೆಲ್ಲವನ್ನೂ ಮರೆತಿರುವ ನಾರಾಯಣಗೌಡ ಅವರು ಅಭ್ಯರ್ಥಿಗಳನ್ನು ಘೋಷಿಸಲು ನಿಖಿಲ್ ಕುಮಾರಸ್ವಾಮಿ ಯಾರು?. ಅವರಿಗೇನು ಅಧಿಕಾರವಿದೆ ಎಂದು ಪ್ರಶ್ನಿಸುವುದು ಸರಿಯಲ್ಲ ಎಂದು ಕೆ.ಆರ್.ಪೇಟೆ ಶಾಸಕ ಎಚ್.ಟಿ.ಮಂಜು ಅಸಮಾಧಾನ ವ್ಯಕ್ತಪಡಿಸಿದರು.
ಮಾಜಿ ಸಚಿವ ಕೆ.ಸಿ.ನಾರಾಯಣಗೌಡ ಹಿರಿಯರು. ಅವರ ಬಗ್ಗೆ ಅಪಾರ ಗೌರವವಿದೆ. ಮುಂದಿನ ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳು ಆಯ್ಕೆಯನ್ನು ಜಾ.ದಳ-ಬಿಜೆಪಿಯ ವರಿಷ್ಠರು ತೀರ್ಮಾನಿಸಲಿದ್ದಾರೆ. ನಿಖಿಲ್ ಕುಮಾರಸ್ವಾಮಿ ಅವರು ಅಭ್ಯರ್ಥಿಗಳ ಆಯ್ಕೆಯನ್ನು ಎಲ್ಲೂ ಘೋಷಣೆ ಮಾಡಿಲ್ಲ. ಆದ್ದರಿಂದ ನಾರಾಯಣಗೌಡ ಅವರು ಇಲ್ಲಸಲ್ಲದ ಹೇಳಿಕೆಗಳನ್ನು ನೀಡಿ ಸಂಘರ್ಷಕ್ಕೆ ಎಡೆಮಾಡಿಕೊಡಬಾರದು ಎಂದು ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.
ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಜಾ.ದಳ-ಬಿಜೆಪಿ ಮೈತ್ರಿ ಗಟ್ಟಿಯಾಗಿದೆ. ಇದು ಶಾಶ್ವತವಾಗಿ ಮುಂದುವರಿಯಲಿದೆ. ಟಿಕೆಟ್ ಹಂಚಿಕೆ ವಿಚಾರದಲ್ಲಿ ಎರಡೂ ಪಕ್ಷಗಳ ವರಿಷ್ಠರ ತೀರ್ಮಾನಕ್ಕೆ ನಾವು ಬದ್ಧರಾಗಿರೋಣ. ಒಂದು ಕ್ಷೇತ್ರದ ಶಾಸಕರು ಇದ್ದ ಮೇಲೆ ಅವರ ಬಗ್ಗೆ ಎರಡು ಹೊಗಳಿಕೆ ಮಾತುಗಳನ್ನು ಹೇಳುವುದು ವಾಡಿಕೆ. ಅದೇ ರೀತಿ ನಿಖಿಲ್ ಕುಮಾರಸ್ವಾಮಿ ಅವರು ಕೆ.ಆರ್.ಪೇಟೆಗೆ ಬಂದ ಸಂದರ್ಭದಲ್ಲಿ 2028ಕ್ಕೂ ಮುನ್ನ ಸ್ಥಳೀಯ ಸಂಸ್ಥೆ ಚುನಾವಣೆ ಬರಲಿವೆ. ಹಾಗಾಗಿ ಅಭ್ಯರ್ಥಿ ಆಯ್ಕೆಗೂ ಮುನ್ನ ಚುನಾವಣೆಯತ್ತ ಗಮನಹರಿಸಿ ಎಂದು ಕಾರ್ಯಕರ್ತರಿಗೆ ಹೇಳಿದ್ದಾರೆಯೇ ಹೊರತು ನನ್ನನ್ನೇ ಮುಂದಿನ ಅಭ್ಯರ್ಥಿ ಎಂದು ಘೋಷಿಸಿಲ್ಲ ಎಂದು ಸ್ಪಷ್ಟಪಡಿಸಿದರು.
ನಾರಾಯಣಗೌಡ ಅವರು ಹಿಂದೆ ನಡೆದು ಬಂದ ದಾರಿಯನ್ನು ಮರೆಯಬಾರದು. ಎರಡು ಮೂರು ಬಾರಿ ನನ್ನ ವಿರುದ್ಧ ಹೇಳಿಕೆ ನೀಡಿದ್ದಾರೆ. ಆದರೆ, ಇಂದು ನಿಖಿಲ್ ಕುಮಾರಸ್ವಾಮಿ ಅವರ ವಿರುದ್ಧ ಹೇಳಿಕೆ ನೀಡಿರುವುದರಿಂದ ನಾನು ಮಾತನಾಡಬೇಕಾಗಿದೆ. ಬಿಜೆಪಿ ಕಾರ್ಯಕರ್ತರಿಗೆ ಜಾ.ದಳ ಶಾಲು ಹೊದಿಸಿ ಪಕ್ಷಕ್ಕೆ ಆಹ್ವಾನಿಸಿಲ್ಲ. ಪುರಸಭೆ ಮಾಜಿ ಸದಸ್ಯ ನಂದೀಶ್ ಅವರು ಜನ್ಮದಿನ ನನ್ನ ಮನೆಗೆ ಬಂದಾಗ ಅವರನ್ನು ಶಾಲು ಹೊದಿಸಿ ಸನ್ಮಾನಿಸಿದ್ದೇನೆಯೇ ಹೊರತು ಜಾ.ದಳಕ್ಕೆ ಸೇರ್ಪಡೆ ಮಾಡಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿದರು.
ಅವರು ತಂದ ಅನುದಾನದಲ್ಲಿ ನಾನು ಕಾಮಗಾರಿಗಳಿಗೆ ಭೂಮಿ ಪೂಜೆ ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ. ಇತ್ತೀಚೆಗೆ ಗವಿರಂಗನಾಥಸ್ವಾಮಿ ರಥೋತ್ಸವದ ಸಂದರ್ಭ ಕೆ.ಸಿ.ನಾರಾಯಣಗೌಡ ಅವರು ಕಲ್ಯಾಣಿ ಅಭಿವೃದ್ಧಿಗೆ 3 ಕೋಟಿ ರೂ. ನೀಡಿದ್ದು ನಾನು ಎಂದು ಹೇಳಿದರು. ಅಂದೇ ನಾನು ಅವರು ವಿವಿಧ ಅಭಿವೃದ್ಧಿಗೆ ನೀಡಿದ್ದ 37 ಕೋಟಿ ರೂ. ಅನುದಾನವನ್ನು ಸರ್ಕಾರ ವಾಪಸ್ ತೆಗೆದುಕೊಂಡಿರುವ ಬಗ್ಗೆ ಮನವರಿಕೆ ಮಾಡಿದ್ದೇನೆ. ಹೀಗಿದ್ದರೂ ಪದೇ ಪದೇ ಈ ರೀತಿಯ ಇಲ್ಲಸಲ್ಲದ ಹೇಳಿಕೆ ನೀಡುತ್ತಿರುವುದು ಸರಿಯಲ್ಲ ಎಂದರು.
ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ, ಮಾಜಿ ಶಾಸಕ ಪ್ರೀತಂಗೌಡ ಅವರು ಮಂಡ್ಯ ಜಿಲ್ಲೆಯಲ್ಲಿ 4-3 ಸ್ಥಾನಗಳು ಬಿಜೆಪಿಗೆ ಹಂಚಿಕೆಯಾಗಲಿವೆ ಎಂದು ಹೇಳಿಕೆ ನೀಡಿ ಗೊಂದಲ ಮೂಡಿಸಿದ್ದಾರೆ. ನಾವು ಎನ್‌ಡಿಎ ಒಕ್ಕೂಟದಲ್ಲಿದ್ದು, ವರಿಷ್ಠರ ತೀರ್ಮಾನಕ್ಕೆ ಬದ್ಧರಾಗಿರೋಣ. ಸಂಘರ್ಷದ ಹೇಳಿಕೆಗಳು ಬೇಡ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೆ.ಆರ್.ಪೇಟೆ ಕ್ಷೇತ್ರದ ಅಭಿವೃದ್ಧಿಗೆ ನೀಡಿದ್ದ ಸುಮಾರು 120 ರಿಂದ 130 ಕೋಟಿ ರೂ.ಗಳನ್ನು ಇಂದಿನ ಕಾಂಗ್ರೆಸ್ ಸರ್ಕಾರ ಯಾವುದೇ ಕಾರಣ ನೀಡದೆ ವಾಪಸ್ ಪಡೆದುಕೊಂಡಿದೆ. ಇದು ರಾಜ್ಯದ ಹಲವೆಡೆ ನಡೆದಿದೆ. ಅನುದಾನ ಕೊರತೆಯಿಂದಾಗಿ ಜನರ ನಿರೀಕ್ಷೆಗೆ ತಕ್ಕಂತೆ ಅಭಿವೃದ್ಧಿ ಕೆಲಸಗಳನ್ನು ಮಾಡಲು ಆಗುತ್ತಿಲ್ಲ. ಇದು ನನ್ನ ಕ್ಷೇತ್ರ ಮಾತ್ರವಲ್ಲ, ಕಾಂಗ್ರೆಸ್ ಶಾಸಕರ ಸ್ಥಿತಿಯೂ ಇದೇ ರೀತಿ ಆಗಿದೆ. ಜಲಸಂಪನ್ಮೂಲ ಸಚಿವರೂ ಆದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ ಕೆ.ಆರ್. ಪೇಟೆ ಕ್ಷೇತ್ರದ ನೀರಾವರಿ ಯೋಜನೆಗಳಿಗೆ ಹಣ ನೀಡುವಂತೆ ಮನವಿ ಮಾಡಲಾಗಿ, 100 ಕೋಟಿ ರೂ.ಗಳನ್ನು ನೀಡಿದ್ದಾರೆ. ಲೋಕೋಪಯೋಗಿ ಇಲಾಖೆಗೆ 10 ಕೋಟಿ ರೂ ಹಾಗೂ ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ 25 ಕೋಟಿ ರೂ.ಗಳು ಬಂದಿದೆ ಎಂದು ತಿಳಿಸಿದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್ ಮಾತನಾಡಿ, ಜೆಡಿಎಸ್ ಎನ್‌ಡಿಎ ಒಕ್ಕೂಟದಲ್ಲೇ ಇದೆ. ದಳ-ಬಿಜೆಪಿಗೆ ನೋವಾದರೆ ಅದು ಕಾರ್ಯಕರ್ತರಿಗೆ ನೋವಾಗುತ್ತದೆ. ನಾರಾಯಣಗೌಡ ಅವರು ಹಿರಿಯರಿದ್ದಾರೆ. ಈರೀತಿಯ ಆರೋಪಗಳನ್ನು ನಾವು ನಿರೀಕ್ಷಿಸಿರಲಿಲ್ಲ. ಏನೇ ಸಣ್ಣಪುಟ್ಟ ನೋವಾಗಿದ್ದರೆ ಅದನ್ನು ಪಕ್ಷದ ಚೌಕಟ್ಟಿನಲ್ಲಿ ಕುಳಿತು ಬಗೆಹರಿಸಿಕೊಳ್ಳಬೇಕೇ ಹೊರತು, ಬಹಿರಂಗವಾಗಿ ಹೇಳಿಕೆ ನೀಡುವುದು ಸರಿಯಲ್ಲ ಎಂದು ಹೇಳಿದರು.
ಟಿಎಪಿಸಿಎಂಎಸ್ ಅಧ್ಯಕ್ಷ ಬಲದೇವ್, ಜಿಲ್ಲಾ ಯುವ ಜೆಡಿಎಸ್ ಅಧ್ಯಕ್ಷ ಕಂಸಾಗರ ರವಿ, ತಾ.ಪಂ ಮಾಜಿ ಸದಸ್ಯ ಮೋಹನ್, ಮಹದೇವ ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net