ಮಂಡ್ಯ: ತನ್ನ ಪತ್ನಿಗೆ ತಾನು ಸಿರಿವಂವತನೆಂದು ತೋರಿಸಿಕೊಳ್ಳುವ ಸಲುವಾಗಿ ಸರಗಳ್ಳತನ ಮಾಡುತ್ತಿದ್ದವ ಸೇರಿದಂತೆ ಇವನಿಗೆ ಸಾಥ್ ನೀಡುತ್ತಿದ್ದ ಮೂವರು ಕಳ್ಳರನ್ನು ಕಿರುಗಾವಲು ಪೊಲೀಸರು ಬಂಧಿಸಿದ್ದಾರೆ. ಅಂತೆಯೇ ಇವರಿಂದ ಬರೋಬರಿ 70 ಲಕ್ಷ ರೂ ಮೌಲ್ಯದ 475.5 ಗ್ರಾಂ ತೂಕದ ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಗಿದೆ.
ನಗರದ ಜಿಲ್ಲಾ ಪೊಲೀಸ್ ಭವನದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿ.ಜೆ.ಶೋಭಾರಾಣಿ, ಒಂಟಿ ಮಹಿಳೆಯರನ್ನೇ ಗುರಿಯಾಗಿಸಿಕೊಂಡು ಸರಗಳವು ಮಾಡುತ್ತಿದ್ದ ನಾಲ್ವರನ್ನು ಬಂಧಿಸಲಾಗಿದೆ. ಮಳವಳ್ಳಿ ತಾಲೂಕಿನ ಟಿ.ಪಿ.ರೋಹಿತ್ ಅಲಿಯಾಸ್ ಗೆದ್ವಾ (20), ಟಿ.ಎನ್.ನಂಜೇಗೌಡ ಅಲಿಯಾಸ್ ಕಾಶಿ (19), ಟಿ.ಎಚ್.ಗುರುಪ್ರಸಾದ್ ಅಲಿಯಾಸ್ ಗುರು (36) ಹಾಗೂ ಮದ್ದೂರು ತಾಲೂಕಿನ ಎಸ್.ಮಾದೇಶ ಅಲಿಯಾಸ್ ಮಾದ (20) ಬಂಧಿತರು ಎಂದು ತಿಳಿಸಿದರು.
ಮಳವಳ್ಳಿ ತಾಲೂಕು ಅಣಸಾಲೆ ಗ್ರಾಮದ ಮಹಿಳೆ ತಮ್ಮ ಮನೆಯ ಇ-ಸ್ವತ್ತು ಮಾಡಿಸುವ ಸಲುವಾಗಿ ಮಾ.30ರಂದು ಚಿಕ್ಕಮುಲಗೂಡು ಗ್ರಾಮ ಪಂಚಾಯಿತಿಗೆ ಹೋಗಿ ತಮ್ಮ ಊರಿಗೆ ವಾಪಾಸಾಗುತ್ತಿದ್ದಾಗ ಚಿಕ್ಕಮುಲಗೂಡು-ರಾಮನಾಥ ಮೊಳೆ ರಸ್ತೆಯಲ್ಲಿ ಮಧ್ಯಾಹ್ನ 12.30 ಗಂಟೆ ಸಮಯದಲ್ಲಿ ಅಪರಿಚಿತರಿಬ್ಬರು ಬೈಕ್‌ನಲ್ಲಿ ಬಂದು ಆಕೆಯ ಕುತ್ತಿಗೆಯಲ್ಲಿದ್ದ ಚಿನ್ನದ ತಾಳಿ ಮತ್ತು ಎರಡು ಗುಂಡು ಸೇರಿ ಸುಮಾರು 27 ಗ್ರಾಂ ತೂಕದ ಚಿನ್ನದ ಸರವನ್ನು ಕಿತ್ತು ಪರಾರಿಯಾಗಿದ್ದರು ಎಂದು. ಈ ಸಂಬಂಧ ಕಿರುಗಾವಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ತನಿಖೆ ಕೈಗೊಂಡಾಗ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ರೋಹಿತ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿ ಸತ್ಯಾಂಶ ಬೆಳಕಿಗೆ ಬಂತು ಎಂದರು.
ಪ್ರಮುಖ ಆರೋಪಿ ಗುರುಪ್ರಸಾದ್ ತನ್ನ ಪತ್ನಿಗೆ ಸಿರಿವಂವತ ಎಂದು ತೋರಿಸಿಕೊಳ್ಳುವ ಸಲುವಾಗಿ ಚಿನ್ನದ ಸರ ಕಳವು ಮಾಡಲು ಆರಂಭಿಸಿದ. ಅಂತೆಯೇ ಐಷಾರಾಮಿ ಜೀವನ ನಡೆಸುತ್ತಿದ್ದ. 2024ರಲ್ಲಿ ಪತ್ನಿ ಈತನೊಂದಿಗೆ ಜಗಳ ಮಾಡಿಕೊಂಡು ತವರು ಸೇರಿಸಿಕೊಂಡಿದ್ದಳು. ಅಂದಿನಿಂದ ಕಳ್ಳತನ ಮಾಡುವುದನ್ನು ನಿಲ್ಲಿಸಿದ್ದ. ಈ ನಡುವೆ ಆಕೆ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದರು. ಈ ಪ್ರಕರಣದಲ್ಲಿ ಆತ್ಮಹತ್ಯೆಗೆ ಗುರುಪ್ರಸಾದ್ ಕಾರಣ ಎಂದು ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಲಾಗಿತ್ತು ಎಂದು ವಿವರಿಸಿದರು.
ಜೈಲಿನಿಂದ ಹೊರಗೆ ಬಂದ ಗುರುಪ್ರಸಾದ್ ಮತ್ತೆ ತಮ್ಮೂರಿನಲ್ಲಿ ಹಣದ ಅವಶ್ಯವಿರುವ ಯುವಕರನ್ನು ಒಗ್ಗೂಡಿಸಿ ತಂಡವೊಂದನ್ನು ಕಟ್ಟಿ ಆ ಮೂಲಕ ಸರಗಳವು ಮಾಡಲು ಪ್ರಾರಂಭಿಸಿದನು. ಒಂಟಿ ಮಹಿಳೆಯರನ್ನು ಗುರಿಯಾಗಿಸಿಕೊಂಡು ಯೋಜನೆಯನ್ನು ಗುರುಪ್ರಸಾದ್ ರೂಪಿಸುತ್ತಿದ್ದ. ಅದನ್ನು ರೋಹಿತ್, ನಂಜೇಗೌಡ, ಮಾದೇಶ ಎರಡು ತಂಡಗಳಾಗಿ ವಿಭಜನೆಗೊಂಡು ಕಳವು ಮಾಡುತ್ತಿದ್ದರು. ಹೀಗೆ ಕದ್ದ ಚಿನ್ನಾಭರಣಗಳನ್ನು ಗಿರವಿ ಸಂಸ್ಥೆಯಲ್ಲಿ ಅಡವಿಟ್ಟು ಹಣ ಪಡೆಯುತ್ತಿದ್ದರು. ಪ್ರಾರಂಭದಲ್ಲಿ ಗುರುಪ್ರಸಾದ್ ತಮ್ಮ, ತಾಯಿ, ಚಿಕ್ಕಮ್ಮ ಇತರೆ ಸಂಬಂಧಿಕರ ಒಡವೆಗಳು ಎಂದೇಳಿಕೊಂಡು ಗಿರವಿ ಇಡುತ್ತಿದ್ದ. ನಂತರ ಅದನ್ನು ಮಾರಾಟ ಮಾಡಿ ಉಳಿದ ಹಣವನ್ನೂ ಪಡೆದು ಹಂಚಿಕೊಳ್ಳುತ್ತಿದ್ದರು ಎಂದು ಹೇಳಿದರು.
ಆರೋಪಿಗಳು ಜಿಲ್ಲೆಯ ವಿವಿಧ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 2022ರಲ್ಲಿ 2 ಪ್ರಕರಣ, 23ರಲ್ಲಿ 8 ಪ್ರಕರಣ, 24ರಲ್ಲಿ 2, 26ರಲ್ಲಿ 4 ಪ್ರಕರಣ ಸೇರಿ 16 ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ಬನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲೂ ಒಂದು ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ರೋಹಿತ್ ಮತ್ತು ನಂಜೇಗೌಡ ತಂಡ 4, ಗುರುಪ್ರಸಾದ್-ಮಾದೇಶ ತಂಡ 8 ಹಾಗೂ ರೋಹಿತ್ ಮತ್ತು ಮಾದೇಶ ತಂಡ 4 ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ಆರೋಪಿಗಳಿಂದ ಒಟ್ಟು 475.5 ಗ್ರಾಂ ತೂಕದ ಚಿನ್ನದ ಒಡವೆಯನ್ನು ಹಾಗೂ ಕೃತ್ಯಕ್ಕೆ ಬಳಸಿದ್ದ ಎರಡು ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಒಟ್ಟಾರೆ 70,37,400 ರೂ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.
ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಇ.ಗಂಗಾಧರಸ್ವಾಮಿ, ಡಿವೈಎಸ್ಪಿ ಎಸ್.ಬಿ.ಯಶ್ವಂತ್‌ಕುಮಾರ್, ಹಲಗೂರು ಸಿಪಿಐ ಬಿ.ಎಸ್.ಶ್ರೀಧರ್, ಕಿರುಗಾವಲು ಪಿಎಸ್‌ಐ ಡಿ.ರವಿಕುಮಾರ್ ಇದ್ದರು.
ಮತ್ತೆ ಮಳವಳ್ಳಿ ಉಪವಿಭಾಗದ ಸಕ್ಸಸ್
ಅಪರಾಧ ಪ್ರಕರಣಗಳನ್ನು ಪತ್ತೆ ಮಾಡುವಲ್ಲಿ ಮಳವಳ್ಳಿ ಉಪವಿಭಾಗದ ತನಿಖಾ ತಂಡ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಇತ್ತೀಚಿನ ದಿನದಲ್ಲಿ ಹೆಚ್ಚು ಪ್ರಕರಣವನ್ನು ಬೇದಿಸಿದ ಹೆಗ್ಗಳಿಕೆಗೆ ಪಾತ್ರವಾಗಿದೆ. ಅದೇ ರೀತಿ ಈ ಪ್ರಕರಣವೂ ಸವಾಲಿನ ವಿಷಯವಾಗಿತ್ತು. ಸಾಕ್ಷೃಗಳನ್ನು ಒದಗಿಸಿ ಆರೋಪಿಗಳನ್ನು ಪತ್ತೆ ಮಾಡುವುದು ಸುಲಭವಾಗಿರಲಿಲ್ಲ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳು ಗದ್ದೆ, ಕಾಲುವೆ ಸೇರಿದಂತೆ ನಿರ್ಜನ ಪ್ರದೇಶವನ್ನು ಗುರಿಯಾಗಿಸಿಕೊಳ್ಳುತ್ತಿದ್ದರು. ಮುಖ್ಯವಾಗಿ ಸಿ.ಸಿ ಕ್ಯಾಮೆರಾದಿಂದ ತಪ್ಪಿಸಿಕೊಳ್ಳುವುದಾಗಿತ್ತು. ಆದರೂ ಕೂಲಂಕಷವಾಗಿ ತನಿಖೆ ನಡೆಸಿದ ತಂಡ ಸಣ್ಣಪುಟ್ಟ ಸಾಕ್ಷಯಗಳನ್ನು ಕಲೆಹಾಕಿ ಆರೋಪಿಗಳನ್ನು ಬಂಧಿಸಿದೆ.
ತನಿಖಾ ತಂಡದಲ್ಲಿದ್ದ ಡಿವೈಎಸ್ಪಿ ಎಸ್.ಬಿ.ಯಶ್ವಂತ್‌ಕುಮಾರ್, ಹಲಗೂರು ಸಿಪಿಐ ಬಿ.ಎಸ್.ಶ್ರೀಧರ್, ಕಿರುಗಾವಲು ಪಿಎಸ್‌ಐ ಡಿ.ರವಿಕುಮಾರ್, ಬೆಳಕವಾಡಿ ಪಿಎಸ್‌ಐ ಬಿ.ವಿ.ಪ್ರಕಾಶ್, ಪ್ರೋಬೇಷನರಿ ಪಿಎಸ್‌ಐಗಳಾದ ಎಂ.ಸುನೀಲ್, ಸಿದ್ದಣ್ಣ, ಪಿ.ಡಿ.ಹರ್ಷ, ಟಿ.ಜೆ.ಜಯಂತ್, ಗೋಪಾಲ್, ಶ್ರೀಧರ್, ಸಿಎಚ್‌ಸಿಗಳಾದ ರಿಯಾಜ್ ಪಾಷಾ, ಪ್ರಭುಸ್ವಾಮಿ, ಮಹೇಶ್, ರವಿಕಿರಣ್, ಲೋಕೇಶ್, ಸಿಪಿಸಿಗಳಾದ ಸಿದ್ದರಾಜು, ಶಿವಕುಮಾರ್, ರಫೀಕ್, ನದಾಫ್, ಮಹೇಶ, ಅಂಬರೀಷ್, ಶ್ರೀನಿವಾಸ್, ಮಧುಕಿರಣ್, ಧನಂಜಯ ಅವರನ್ನು ಜಿಲ್ಲಾ ಎಸ್ಪಿ ಅಭಿನಂದಿಸಿದ್ದಾರೆ.
ಭೂ ಅಕ್ರಮದ ತನಿಖೆ ಚುರುಕು
ನಾಗಮಂಗಲ ತಾಲೂಕಿನಲ್ಲಿ ಸರ್ಕಾರಿ ಭೂಕಬಳಿಕೆ ಪ್ರಕರಣದ ತನಿಖೆ ಪ್ರಗತಿಯಲ್ಲಿದ್ದು, ಅಪರ ಪೊಲೀಸ್ ಅಧೀಕ್ಷಕ ಸಿ.ಇ.ತಿಮ್ಮಯ್ಯ ಅವರು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಪ್ರಾರಂಭದಲ್ಲಿ 200 ಎಕರೆ ಸರ್ಕಾರಿ ಭೂ ಕಬಳಿಯಾಗಿದೆ ಎಂದು ತಿಳಿದುಬಂದಿದ್ದು, ನಂತರ ತನಿಖೆ ಪ್ರಾರಂಭವಾಗಿ ಹಂತ ಹಂತವಾಗಿ ನಡೆಯುತ್ತಿರುವ ತನಿಖೆಯಿಂದಾಗಿ 1 ಸಾವಿರ ಎಕರೆಗೂ ಹೆಚ್ಚಿನ ಭೂಕಬಳಿಕೆಯಾಗಿರುವುದು ತಿಳಿದುಬಂತು. ಯಾವ್ಯಾವ ಅಧಿಕಾರಿಗಳ ಕಾಲದಲ್ಲಿ ಎಷ್ಟೆಷ್ಟು ಪ್ರಮಾಣದಲ್ಲಿ ಭೂಕಬಳಿಯಾಗಿದೆ. ಇದರಲ್ಲಿ ಯಾವ ಅಧಿಕಾರಿಗಳು ಭಾಗಿಯಾಗಿದ್ದಾರೆ ಎಂಬುದರ ಕುರಿತು ಹಳೇ ದಾಖಲೆಗಳ ಶೋಧ ನಡೆಸಲಾಗುತ್ತಿದೆ. ಇನ್ನೂ ಅವುಗಳನ್ನು ಎಫ್‌ಎಸ್‌ಎಲ್ ತನಿಖೆಗೂ ಕಳುಹಿಸಬೇಕಾಗಿದೆ. ಹಾಗಾಗಿ ಇನ್ನೂ ತನಿಖೆ ಪ್ರಗತಿಯಲ್ಲಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿ.ಜೆ.ಶೋಭಾರಾಣಿ ತಿಳಿಸಿದರು.