ಕನ್ನಡದ ಗಟ್ಟಿಬೇರು ಕುವೆಂಪು, ಸಿ. ಅಶ್ವಥ್

ಕಿಕ್ಕೇರಿಯಲ್ಲಿ ಆದರ್ಶ ಸುಗಮ ಸಂಗೀತಾ ಅಕಾಡೆಮಿ, ಸ್ಪಂದನಾ ಫೌಂಡೇಷನ್ ವತಿಯಿಂದ ರಸಋಷಿ ಕುವೆಂಪು, ಗಾನ ಗಾರುಡಿಗ ಸಿ. ಅಶ್ವಥ್ ಜಯಂತಿ ಕಾರ್ಯಕ್ರಮ ಜರುಗಿತು. ಗಾಯಕ ಡಾ. ಕಿಕ್ಕೇರಿ ಕೃಷ್ಣಮೂರ್ತಿ, ತ್ರಿವೇಣಿ, ಮಹೇಂದ್ರ, ಕವಿತಾ ಮತ್ತಿತರರಿದ್ದರು.
ಕಿಕ್ಕೇರಿಯಲ್ಲಿ ಆದರ್ಶ ಸುಗಮ ಸಂಗೀತಾ ಅಕಾಡೆಮಿ, ಸ್ಪಂದನಾ ಫೌಂಡೇಷನ್ ವತಿಯಿಂದ ರಸಋಷಿ ಕುವೆಂಪು, ಗಾನ ಗಾರುಡಿಗ ಸಿ. ಅಶ್ವಥ್ ಜಯಂತಿ ಕಾರ್ಯಕ್ರಮ ಜರುಗಿತು. ಗಾಯಕ ಡಾ. ಕಿಕ್ಕೇರಿ ಕೃಷ್ಣಮೂರ್ತಿ, ತ್ರಿವೇಣಿ, ಮಹೇಂದ್ರ, ಕವಿತಾ ಮತ್ತಿತರರಿದ್ದರು.
Published on
ಕಿಕ್ಕೇರಿ: ಭಾಷೆಗೊಂದು ಜೀವಾರ್ಥವನ್ನು ಕುವೆಂಪು ತುಂಬಿದರೆ, ರಾಗಾರ್ಥವನ್ನು ಮನಸೊಳಗೆ ಸೇರಿಸಿದವರು ಸ್ವರ ಸಾಮ್ರಾಟ ಸಿ. ಅಶ್ವಥ್ ಎಂದು ಆದರ್ಶ ಸುಗಮ ಸಂಗೀತ ಅಕಾಡೆಮಿ ಅಧ್ಯಕ್ಷ ಗಾಯಕ ಡಾ. ಕಿಕ್ಕೇರಿ ಕೃಷ್ಣಮೂರ್ತಿ ಹೇಳಿದರು.
ಇಲ್ಲಿನ ಸ್ಪಂದನಾ ಫೌಂಡೇಷನ್, ಆದರ್ಶ ಸುಗಮ ಸಂಗೀತ ಅಕಾಡೆಮಿ ಶನಿವಾರ ಏರ್ಪಡಿಸಿದ್ದ ಸ್ವರ ಸಾಮ್ರಾಟ್ ಸಿ. ಅಶ್ವಥ್, ರಸಋಷಿ ಕುವೆಂಪು ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಅನ್ಯಭಾಷೆಗಳ ಅಬ್ಬರದಲ್ಲಿ ಕನ್ನಡ ಭಾಷೆ ಮಸುಕಾಗುತ್ತಿರುವ ವೇಳೆಯಲ್ಲಿ ಕನ್ನಡ ಭಾಷೆಗೆ ಗಟ್ಟಿಯಾದ ಬೇರು ನೀಡಿದವರು ಈ ಜೋಡಿ ಜೀವಗಳು. ಕನ್ನಡ ಗೀತೆಗಳಿಗೆ ಸುಂದರ ಪದಗಳ ಪದಕವನ್ನು ಕುವೆಂಪು ಕಟ್ಟಿದರೆ, ಮಾಧುರ್ಯದ ಹೊಳಪನ್ನು ನೀಡಿದವರು ಸಿ. ಅಶ್ವಥ್ ಎಂದರು.
ಕುವೆಂಪು ಅವರು ಕವಿ, ಸಾಹಿತಿ, ನಾಟಕಕಾರ, ದಾರ್ಶನಿಕ, ಸಾಮಾಜಿಕ ಹರಿಕಾರರಾಗಿ ರೈತ, ಯೋಧ, ದಾಂಪತ್ಯ, ಪ್ರೇಮ ಕವಿತೆ ಎನ್ನದೆ ಎಲ್ಲ ಮಜಲುಗಳಲ್ಲಿ ಕಾವ್ಯದ ರಸದೌತಣವನ್ನು ನೀಡಿ ವಿಶ್ವ ಮಾನವರಾದರು. ಇಂಗ್ಲೀಷ್ ಕವಿಯಾಗಲು ಬಯಸಿ ಅಂತಿಮವಾಗಿ ಕನ್ನಡ ಭಾಷೆಯ ಮಹಾನ್ ರಸಋಷಿಯಾದರು. ಇವರ ರಾಮಾಯಣ ದರ್ಶನಂ ವಿಶ್ವವೇ ಮೆಚ್ಚುವ ಅದ್ಭುತ ಗ್ರಂಥವಾಗಿದೆ ಎಂದು ಸ್ಮರಿಸಿದರು.
ಸಿ. ಅಶ್ವಥ್ ಪದಗಳನ್ನು ಸ್ವರ ಸಂಯೋಜನೆ ಮಾಡಿ ನೂರಾರು ಕವಿಗಳ ಗೀತೆಗೆ ಜೀವ ತುಂಬಿ ಹಾಡಿ ಕರ್ಣಾನಂದ ತುಂಬಿದರು. ಭಾವಗೀತೆ, ವಚನ, ಶಿಶುನಾಳ ಷರೀಫರ ತತ್ವಪದಗಳು ಮತ್ತಷ್ಟು ಗಟ್ಟಿಯಾಗಲು ನೀಡಿದ ಇವರ ಕೊಡುಗೆ ಮರೆಯಲಾಗದು. ಎಳೆಯ ಮನಸ್ಸಿನಲ್ಲಿ ಇಂತಹ ಮಹಾನೀಯರ ಗುಣಗಾನ, ಗೀತೆಗಳನ್ನು ಕಲಿತು ಹಾಡುವ ಪರಿಪಾಠ ಬೆಳೆಯಲು ಸಮುದಾಯದ ಸಾಂಘಿಕ ಸಹಕಾರ ಅವಶ್ಯವಾಗಿದೆ ಎಂದು ನುಡಿದರು.
ಮಕ್ಕಳಿಗೆ ಗುಡಿಚರ್ಚು ಮಸೀದಿಗಳ ಬಿಟ್ಟು ಹೊರಬನ್ನಿ, ಓ ನನ್ನ ಚೇತನ, ಬಾ ಇಲ್ಲಿ ಸಂಭವಿಸು, ಕನ್ನಡಕೆ ಹೋರಾಡು ಕನ್ನಡದ ಕಂದಾ, ಆನಂದಮಯ ಈ ಜಗಹೃದಯ, ನಾನೆ ವೀಣೆ ನೀನೆ ತಂತಿ, ಉದಯಿಸಿತಿಹನದೊ ಅಭಿನವ ದಿನಮಣಿ, ಶ್ರೀ ಸಾಮಾನ್ಯನೆ ಭಗವನ್ ಮಾನ್ಯಂ, ಯಾವ ಕಾಲದ ಶಾಸ್ತ್ರವೇನು, ಮನು ನಿನಗೆ ನೀನು ಗೀತೆಗಳ ಭಾವಾರ್ಥ ತಿಳಿಸಿದರು. ಮಕ್ಕಳೊಂದಿಗೆ ಮಕ್ಕಳಾಗಿ ಹಾಡಿಸಿ ಕನ್ನಡದ ಕಂಪು ಮನದಲ್ಲಿ ಅರಳಿಸಿದರು ಎಂದು ಹೇಳುತ್ತ ಕುವೆಂಪು, ಸಿ. ಅಶ್ವಥ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
ಸ್ಪಂದನಾ ಟ್ರಸ್ಟಿ ತ್ರಿವೇಣಿ, ಮಹೇಂದ್ರ, ಪಾಷ, ಕವಿತಾ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net