ಕಿಕ್ಕೇರಿಯ ಸುಗಮ ಸಂಗೀತ ಗಾಯಕ ಡಾ.ಕಿಕ್ಕೇರಿ ಕೃಷ್ಣಮೂರ್ತಿ ದುಬೈನಲ್ಲಿ ಜು.26ರಂದು ಆಯೋಜಿಸಿರುವ ಕನ್ನಡ ಸಂಸ್ಕೃತಿ ಸಮ್ಮೇಳನಕ್ಕೆ ಗಾಯಕರಾಗಿ ತೆರಳುತ್ತಿದ್ದ ಸಂದರ್ಭದಲ್ಲಿ ಗ್ರಾಮದೇವಿ ಕಿಕ್ಕೇರಮ್ಮ ಅವರಿಗೆ ಇತ್ತೀಚೆಗೆ ವಿಶೇಷ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು.
ಕಿಕ್ಕೇರಿ: ಕಿಕ್ಕೇರಿಯವರಾದ ಸುಗಮ ಸಂಗೀತ ಗಾಯಕ ಡಾ.ಕಿಕ್ಕೇರಿ ಕೃಷ್ಣಮೂರ್ತಿ ದುಬೈನಲ್ಲಿ ಇದೇ ಜು.26ರಿಂದ ಮೂರು ದಿನಗಳವರೆಗೆ ನಡೆಯಲಿರುವ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನಕ್ಕೆ ತೆರಳುತ್ತಿದ್ದ ಹಿನ್ನೆಲೆ ತವರೂರಿನ ಗ್ರಾಮದೇವಿ ಕಿಕ್ಕೇರಮ್ಮ ದೇಗುಲದಲ್ಲಿ ಇತ್ತೀಚೆಗೆ ವಿಶೇಷ ಪೂಜೆ ಸಲ್ಲಿಸಿದರು.
ದೇಗುಲದ ಅರ್ಚಕರು ಗಾಯಕರ ಪರವಾಗಿ ವಿಶೇಷ ಅರ್ಚನೆ, ಪೂಜೆ ಸಲ್ಲಿಸಿ, ಕನ್ನಡದ ಕಂಪು ಹೊರನಾಡಿನಲ್ಲಿ ಮತ್ತಷ್ಟು ಪಸರಿಸಲಿ. ತವರಿನ ಕವಿ ಕೆ.ಎಸ್.ನರಸಿಂಹಸ್ವಾಮಿ ಅವರ ಹೆಸರು, ಗೀತೆಗಳು ವಿಶ್ವಮಾನ್ಯವಾಗಿ ಮೊಳಗಲಿ. ಯುವಕರಲ್ಲಿ ಕನ್ನಡ, ಕವಿಗಳ ಪರಿಚಯವಾಗುವಂತೆ ಆಗಲಿ ಎಂದು ಪ್ರಾರ್ಥಿಸಿದರು.
ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ ಮಾತನಾಡಿ, ನನ್ನೂರು ಕಿಕ್ಕೇರಿ. ನನ್ನ ಯಶಸ್ಸಿನ ಮುನ್ನುಡಿ ಗ್ರಾಮದೇವಿ. ಕೆ.ಎಸ್.ನರಸಿಂಹಸ್ವಾಮಿ ತವರಿನಲ್ಲಿ ಜನಿಸಿರುವ ನಾನು ಸರ್ಕಾರಿ ಸ್ವಾಮ್ಯದ ಕೆ.ಎಸ್.ನರಸಿಂಹಸ್ವಾಮಿ ಟ್ರಸ್ಟ್ ಅಧ್ಯಕ್ಷನಾಗಿರುವುದು ದೇವರ, ಜನರ ಪ್ರೀತಿಯ ಕಾಣಿಕೆಯಾಗಿದೆ. ಬಡತನದ ಅರ್ಚಕ ಕುಟುಂಬದಲ್ಲಿ ಜನಿಸಿರುವ ನನ್ನ ಗಾಯನ ಕ್ಷೇತ್ರದ ಕೀರ್ತಿಯ ಹಿಂದೆ ಸಾಕಷ್ಟು ಪರಿಶ್ರಮ, ಶ್ರದ್ಧೆ ಇದೆ. ಸುಮಾರು 53ಕ್ಕೂ ಹೆಚ್ಚು ವಿದೇಶಗಳಲ್ಲಿ ನಾನು ಕನ್ನಡದ ಕಂಪು ಗೀತಗಾಯನದ ಮೂಲಕ ಮೂಡಿಸಿರುವೆ ಎಂದರು.
ದುಬೈನಲ್ಲಿ ಜರುಗುತ್ತಿರುವ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನಕ್ಕೆ ಗಾಯಕನಾಗಿ ಪ್ರಯಾಣ ಬೆಳೆಸುತ್ತಿದ್ದು, ಹುಟ್ಟೂರಿನ ಪ್ರೀತಿ, ಆಶೀರ್ವಾದ ಎಂದಿಗೂ ಮರೆಯಲಾರೆ. ಇಲ್ಲಿನ ಕೆ.ಎಸ್.ನ ಕಾವ್ಯಸ್ಫೂರ್ತಿಯ ತಾಣವಾದ ಕೆ.ಎಸ್.ನ. ಸರೋವರ, ಸ್ವಾಗತ ಕಮಾನು ಅತೀ ಶೀಘ್ರದಲ್ಲಿ ಲೋಕಾರ್ಪಣೆಯಾಗಲು ದೇವಿಯಲ್ಲಿ ಪ್ರಾರ್ಥಿಸಿರುವೆ ಎಂದು ನುಡಿದರು.
ದೇವಿಯ ಕುರಿತು ಕಿಕ್ಕೇರಿಯ ತಾಯಿ ನೀನೆ ಅಮ್ಮಾ, ನಿನ್ನ ನಾಮವೇ ನಮ್ಮ ಬಲವೇನಮ್ಮಾ, ಕಮನೀಯಾ ಕಲಿ ನೀನು, ಕಿಕ್ಕೇರಿ ಸಿರಿ ನೀನು, ಇಂದು ಒಂದೇ ನಿಜಾನಂದ ಒಂದೇ ಸಕಲರ ರಕ್ಷಿಸು ತಾಯೆ... ಎಂಬ ಭಕ್ತಿ ಗೀತೆಗಳನ್ನು ಹಾಡಿ ಗಾನಸುಧೆ ಹರಿಸಿದರು. ವೆಂಕಟೇಶ್, ಅಮೀಬಾ ಸುರೇಶ್, ಪ್ರಶಾಂತ್ ಇತರರಿದ್ದರು.