ಸುಗಮ ಸಂಗೀತಕ್ಕೆ ಧ್ವನಿಯಾದ ಸಹಸ್ರಾರು ಕಂಠ

ಕಿಕ್ಕೇರಿಯ ಕೆಪಿಎಸ್ ಶಾಲಾವರಣದಲ್ಲಿ ಶನಿವಾರ ಆದರ್ಶ ಸುಗಮ ಸಂಗೀತಾ ಅಕಾಡೆಮಿ ಟ್ರಸ್ಟ್, ಸ್ಪಂದನಾ ಫೌಂಡೇಷನ್, ಕನ್ನಡ ಕಲಾ ಸಂಘದಿಂದ ಜರುಗಿದ ನಾಡಗೀತೆ, ಸುಗಮ ಸಂಗೀತ ಶತಮಾನೋತ್ಸವದಲ್ಲಿ ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ ನೇತೃತ್ವದಲ್ಲಿ ಸಹಸ್ರಾರು ಕಂಠದಲ್ಲಿ ಮಕ್ಕಳು ಗೀತಗಾಯನ ನಡೆಸಿದರು. ಐಕನಹಳ್ಳಿ ಕೃಷ್ಣೇಗೌಡ, ಸಹದೇವ, ಕೆ.ಜೆ.ನಾರಾಯಣ, ಎಂ.ಎನ್.ಸುಬ್ರಹ್ಮಣ್ಯ, ವೆಂಕಟೇಶ್, ಮಮತಾ, ಗುರುಮೂರ್ತಿ ಮತ್ತಿತರರಿದ್ದರು.
ಕಿಕ್ಕೇರಿಯ ಕೆಪಿಎಸ್ ಶಾಲಾವರಣದಲ್ಲಿ ಶನಿವಾರ ಆದರ್ಶ ಸುಗಮ ಸಂಗೀತಾ ಅಕಾಡೆಮಿ ಟ್ರಸ್ಟ್, ಸ್ಪಂದನಾ ಫೌಂಡೇಷನ್, ಕನ್ನಡ ಕಲಾ ಸಂಘದಿಂದ ಜರುಗಿದ ನಾಡಗೀತೆ, ಸುಗಮ ಸಂಗೀತ ಶತಮಾನೋತ್ಸವದಲ್ಲಿ ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ ನೇತೃತ್ವದಲ್ಲಿ ಸಹಸ್ರಾರು ಕಂಠದಲ್ಲಿ ಮಕ್ಕಳು ಗೀತಗಾಯನ ನಡೆಸಿದರು. ಐಕನಹಳ್ಳಿ ಕೃಷ್ಣೇಗೌಡ, ಸಹದೇವ, ಕೆ.ಜೆ.ನಾರಾಯಣ, ಎಂ.ಎನ್.ಸುಬ್ರಹ್ಮಣ್ಯ, ವೆಂಕಟೇಶ್, ಮಮತಾ, ಗುರುಮೂರ್ತಿ ಮತ್ತಿತರರಿದ್ದರು.
Published on
ಕಿಕ್ಕೇರಿ: ಕನ್ನಡ ನಾಡು, ನುಡಿ ಸಮೃದ್ಧಿಯಾಗಿ ಬೆಳೆದು ಉಳಿಯಲು ಮಕ್ಕಳಲ್ಲಿ ಸಂಗೀತ ಜ್ಞಾನವನ್ನೂ ಬೀಜಾಂಕುರಿಸಿದರೆ ಭಾಷೆ ಮತ್ತಷ್ಟು ಹೆಮ್ಮರವಾಗಿ ಬೆಳೆಯಲಿದೆ ಎಂದು ಅಂತಾರಾಷ್ಟ್ರೀಯ ಸುಗಮ ಸಂಗೀತ ಗಾಯಕ ಡಾ.ಕಿಕ್ಕೇರಿ ಕೃಷ್ಣಮೂರ್ತಿ ಅಭಿಪ್ರಾಯ ವ್ಯಕ್ತಪಡಿಸಿದರು.
ಇಲ್ಲಿನ ಕೆಪಿಎಸ್ ಶಿಕ್ಷಣ ಸಮೂಹದ ಆವರಣದಲ್ಲಿ ಶನಿವಾರ ಆದರ್ಶ ಸುಗಮ ಸಂಗೀತಾ ಅಕಾಡೆಮಿ ಟ್ರಸ್ಟ್, ಸ್ಪಂದನಾ ಫೌಂಡೇಷನ್, ಕನ್ನಡ ಕಲಾ ಸಂಘ ಸಹಯೋಗದಲ್ಲಿ ಜರುಗಿದ ಸುಗಮ ಸಂಗೀತ, ನಾಡಗೀತೆ, ಸುಗಮ ಸಂಗೀತ ಶತಮಾನೋತ್ಸವ ಸಂಭ್ರಮ ಸಮಾರಂಭದಲ್ಲಿ ಮಾತನಾಡಿದರು.
ಕವಿ ಹುಯಿಲಗೋಳ ನಾರಾಯಣರಾಯರ ‘ಉದಯವಾಗಲಿ ನಮ್ಮ ಚಲುವ ಕನ್ನಡ ನಾಡು’ ಕನ್ನಡದ ಪ್ರಥಮ ಸುಗಮ ಸಂಗೀತ ಗೀತೆಯಾದರೆ, ರಸಋಷಿ ಕುವೆಂಪು ಅವರ ‘ಜೈ ಭಾರತ ಜನನಿಯ ತನುಜಾತೆ’ ನಾಡಗೀತೆಯಾಗಿದೆ. ನಮ್ಮ ನಾಡು, ನುಡಿ, ಸಂಸ್ಕೃತಿ ಉಳಿಸಿ ಬೆಳೆಸಲು ಈ ಗೀತೆ ಪ್ರಧಾನ ಪೀಠಿಕೆಯಾಗಿದ್ದು ಮಕ್ಕಳಲ್ಲಿ ಸುಲಲಿತವಾಗಿ ಹಾಡಿಸಿ ಮನದಟ್ಟು ಮಾಡಿದರೆ ಭಾಷೆ ಹೆಮ್ಮರವಾಗಿ ಬೆಳೆದು ಉಳಿಯಲಿದೆ ಎಂದರು.
ಗಾಂಧೀಜಿ ಮನಸೋತ ಗೀತೆ: 1924ರಲ್ಲಿ ಬೆಳಗಾವಿಯ ಕಾಂಗ್ರೆಸ್ ಅಧಿವೇಶನದಲ್ಲಿ ಗಾಂಧೀಜಿ ಭಾಗವಹಿಸಿದ್ದಾಗ ಉದಯವಾಗಲಿ ನಮ್ಮ ಚಲುವ ಕನ್ನಡ ನಾಡು ಗೀತೆ ಮಾಧುರ್ಯ ಕೇಳಿ ಮನಸೋತರು. ನಂತರ ಅದೇ ವೇದಿಕೆಯಲ್ಲಿ ಈ ಗೀತೆಯನ್ನು ಹಿಂದಿಗೆ ತರ್ಜುಮೆ ಮಾಡಿಸಿಕೊಂಡು ಕೇಳಿ ಕವಿ ಹುಯಿಲಗೋಳ ನಾರಾಯಣರಾಯರನ್ನು ಗೌರವಿಸಿದ ಸಂಗತಿ ಕನ್ನಡ ನಾಡಿಗೆ ದೊರೆತ ಮರೆಯಲಾಗದ ಗೌರವವಾಗಿದೆ ಎಂದು ಸ್ಮರಿಸಿದರು.
ರಾಷ್ಟ್ರಕವಿ ಕುವೆಂಪು 1924ರಲ್ಲಿ ರಚಿಸಿದ ಜೈಭಾರತ ಜನನಿಯ ತನುಜಾತೆ ಗೀತೆ 2004ರಲ್ಲಿ ಅಧಿಕೃತವಾಗಿ ನಾಡಗೀತೆಯಾಗಿ ಘೋಷಣೆಯಾಗಿ ಎಲ್ಲರ ಮನೆ, ಮನದಲ್ಲಿ ಉಳಿಯುವಂತಾಗಿದೆ. ಗೀತೆ ಸುಂದರವಾಗಿದ್ದು, ಗೀತೆಗೆ ಧ್ವನಿಯಾಗಿ ವಿಜಯಭಾಸ್ಕರ್, ಮೈಸೂರು ಅನಂತಸ್ವಾಮಿ, ಸಿ. ಅಶ್ವಥ್, ಹಂಸಲೇಖಾ, ಜಿ.ವಿ.ಅತ್ರಿ ವಿವಿಧ ಧಾಟಿಗಳಲ್ಲಿ ಸ್ವರ ಸಂಯೋಜನೆ ಮಾಡಿರುವುದು ಗೀತೆಯ ಸುಂದರ ವಿಸ್ತಾರತೆಗೆ ಸಾಕ್ಷಿಯಾಗಿದೆ ಎಂದು ಗೀತೆಯ ಭಾವ ಅರ್ಥೈಸಿದರು.
ಮಕ್ಕಳ ಸಹಸ್ರ ಕಂಠದಲ್ಲಿ ಮೊಳಗಿದ ಕನ್ನಡ ಡಿಂಡಿಮ: ನಾಡಗೀತೆ, ಸುಗಮ ಸಂಗೀತ ಶತಮಾನೋತ್ಸವದ ಸವಿನೆನಪಿನಲ್ಲಿ ವಿವಿಧ ಶಾಲೆ, ಕಾಲೇಜಿನ ಸುಮಾರು 3 ಸಾವಿರಕ್ಕೂ ಹೆಚ್ಚು ಮಕ್ಕಳು ಒಂದೆಡೆ ಸೇರಿ ಏಕಕಂಠದಲ್ಲಿ ಕನ್ನಡ ಸುಗಮ ಸಂಗೀತ ಗೀತೆಗಳನ್ನು ಮೊಳಗಿಸಿದರು.
ಕಿಕ್ಕೇರಿಯ ಕವಿ ಕೆ.ಎಸ್.ನರಸಿಂಹಸ್ವಾಮಿಯ ನಾವು ಭಾರತೀಯರು ಆಕಾಶಕ್ಕೆದ್ದು ನಿಂತ ಪರ್ವತ ಹಿಮ ಮೌನದಲಿ, ಜತೆಗೆ ಹಚ್ಚೇವು ಕನ್ನಡ ದೀಪ(ಡಿ.ಎಸ್.ಕರ್ಕಿ), ಬಾರಿಸು ಕನ್ನಡ ಡಿಂಡಿಮವಾ(ಕುವೆಂಪು), ಕನ್ನಡವೆಂದರೆ ಬರೀ ನುಡಿಯಲ್ಲ(ನಿಸಾರ್ ಅಹಮದ್), ಕಟ್ಟೋಣಾ ನಾಡನ್ನು ಕಟ್ಟೋಣ(ಎಚ್.ಎಸ್.ವಿ), ಕಲ್ಪ ಕಲ್ಪದಲ್ಲಿ ಕಂಗೊಳಿಸಲಿ ಕನ್ನಡ(ದೊಡ್ಡರಂಗೇಗೌಡ), ವಿಶ್ವ ಭಾರತಿಗೆ ಕನ್ನಡದಾರತಿ(ಚನ್ನವೀರ ಕಣವಿ) ಮುಂತಾದ ಕನ್ನಡ ಗೀತೆಗಳು ಮಕ್ಕಳ ಮನದಲ್ಲಿ ಗಟ್ಟಿ ಬೇರು ಅಂಕುರಗೊಳಿಸಿತು. ಮಕ್ಕಳು ಒಕ್ಕೊರಲಿನಿಂದ ಹಾಡಿದ ಕನ್ನಡ ಗೀತೆಯ ಕಂಪು ಇಡೀ ಪರಿಸರಕ್ಕೆ ಕನ್ನಡದ ಪರಿಮಳ ಸೂಸಿತು.
ನಾಡಗೀತೆ, ಸುಗಮ ಸಂಗೀತ ಗೀತೆ ವರ್ಷಾಚರಣೆ: ಕನ್ನಡದ ಕಂಪಿನ ಗೀತೆಗೆ ಏಕಕಾಲದಲ್ಲಿ ಸಹಸ್ರಾರು ಮಕ್ಕಳು ಮಾಡಿದ ಕಂಠಾಭಿಷೇಕಕ್ಕೆ ಮನಸೋತಿರುವೆ. ತಾನು ಹುಟ್ಟಿದ ಊರಿನಲ್ಲಿ ವಿಧ್ಯುಕ್ತವಾಗಿ ಚಾಲನೆ ನೀಡಲಾಗಿದೆ. ಈ ಕಾರ್ಯಕ್ರಮವನ್ನು ವರ್ಷಪೂರ್ತಿ ರಾಜ್ಯದ ವಿವಿಧೆಡೆ ಹಮ್ಮಿಕೊಳ್ಳಲಾಗುವುದು. ವರ್ಷಾಂತ್ಯಕ್ಕೆ ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ತರಬೇತಿ ಪಡೆದ ವಿವಿಧ ಜಿಲ್ಲೆ, ರಾಜ್ಯ, ದೇಶಗಳ ಕಲಾವಿದರನ್ನು ಒಂದೇ ವೇದಿಕೆಯಲ್ಲಿ ಹಾಡಿಸಿ ಮತ್ತೊಂದು ವಿಶ್ವದಾಖಲೆ ಮಾಡುವ ಬೃಹತ್ ಯೋಜನೆ ರೂಪಿಸಲಾಗಿದೆ ಎಂದು ಡಾ.ಕಿಕ್ಕೇರಿ ಕೃಷ್ಣಮೂರ್ತಿ ತಿಳಿಸಿದರು.
ಕೆಪಿಎಸ್ ಪಿಯು ಕಾಲೇಜು, ಪ್ರೌಢಶಾಲೆ, ಹಿರಿಯ ಬಾಲಕರ ಹಾಗೂ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆ, ರೋಹಿತ್ ಕಾನ್ವೆಂಟ್, ಕೇಂಬ್ರಿಡ್ಜ್ ಶಾಲೆ, ರಾಯಲ್ ಸ್ಕೂಲ್, ಚೈತನ್ಯ ಪ್ರೌಢಶಾಲೆ, ಮಾದಾಪುರ, ಕೃಷ್ಣಾಪುರ ಸರ್ಕಾರಿ ಪ್ರೌಢಶಾಲೆ, ಊಗಿನಹಳ್ಳಿ, ಲಕ್ಷ್ಮೀಪುರ, ತುಳಸಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಹೊಯ್ಸಳ ವಿದ್ಯಾಲಯ ಸೇರಿದಂತೆ ವಿವಿಧ ಶಾಲೆಯ ಮಕ್ಕಳು ಸಂಭ್ರಮದಿಂದ ಭಾಗವಹಿಸಿ ಕನ್ನಡಾಂಬೆಗೆ ತಮ್ಮ ಸುಮಧುರ ಕಂಠದ ಗೀತೆಯ ಅಭಿಷೇಕ ಮಾಡಿದರು.
ಹಲವು ಮಕ್ಕಳು ಹಳದಿ, ಕೆಂಪು ಧಿರಿಸು ಧರಿಸಿ, ಕನ್ನಡ ಬಾವುಟ ಹಿಡಿದು ಕಾರ್ಯಕ್ರಮಕ್ಕೆ ಕಳೆ ಕಟ್ಟಿದರು. ಸಾಲುಮರದ ತಿಮ್ಮಕ್ಕನ ಸ್ಮರಣೆಯೊಂದಿಗೆ ಗಿಡಕ್ಕೆ ನೀರು ಎರೆಯುವ ಮೂಲಕ ಕಾರ್ಯಕ್ರಮಕ್ಕೆ ಎಸ್‌ಡಿಎಂಸಿ ಅಧ್ಯಕ್ಷ ಐಕನಹಳ್ಳಿ ಕೃಷ್ಣೇಗೌಡ ಚಾಲನೆ ನೀಡಿ ಹಸಿರೇ ಉಸಿರೇ ಎಂದು ಘೋಷಣೆ ಮೊಳಗಿಸಲಾಯಿತು.
ಪ್ರಾಂಶುಪಾಲ ಸಹದೇವ, ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ, ಪರಿಸರ ಪ್ರೇಮಿ ವೆಂಕಟೇಶ್ ಅವರಿಗೆ ಗಿಡ ನೀಡಿ ಗೌರವಿಸಲಾಯಿತು. ಭಾಗವಹಿಸಿದ ಸಂಸ್ಥೆಗೆ ನೆನಪಿನ ಕಾಣಿಕೆ ನೀಡಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net