ಮೈಸೂರು, ಶಿವಮೊಗ್ಗ ರಾಜ್ಯ ಹೆದ್ದಾರಿಗೆ ಹೊಂದಿಕೊಂಡು ಈ ಸ್ಥಳದ ರಸ್ತೆಯ ಎರಡು ಬದಿಯಲ್ಲಿ ಕಟ್ಟೆಗಳುಂಟು. ಆನೆಗೊಳಕ್ಕೆ ಸಾಗುವಾಗ ಎಡಬದಿಯಲ್ಲಿ ದೊಡ್ಡ ಪ್ರಮಾಣದ ಕಟ್ಟೆ ಇದ್ದು, ಆನೆಗೊಳದಿಂದ ಕಿಕ್ಕೇರಿಗೆ ಸಾಗುವಾಗ ಚಿಕ್ಕ ಕಟ್ಟೆ ಇದೆ. ಎದುರು ಬದುರು ಎರಡು ವಾಹನಗಳು ಮುಖಾಮುಖಿಯಾದಾಗ ಈ ಸ್ಥಳದಲ್ಲಿ ರಸ್ತೆ ಬದಿಗೆ ಪಾದಚಾರಿಗಳು, ವಾಹನ ಸವಾರರು ರಸ್ತೆ ಬದಿಗೆ ಇಳಿಯುವುದು ಕಷ್ಟವಾಗಿದೆ. ನಾಮ್ ಕಿ ವಾಸ್ತೆಗೆ ಎನ್ನುವಂತೆ ಸ್ವಲ್ಪ ಪ್ರಮಾಣದಲ್ಲಿ ತಡೆಗೋಡೆಯಂತೆ ಕಬ್ಬಿಣದ ಸರಳು ಅಳವಡಿಸಲಾಗಿದ್ದು, ಮುಕ್ಕಾಲು ಭಾಗ ಕಟ್ಟೆಗೆ ತಡೆಗೋಡೆ ಇಲ್ಲವಾಗಿದ್ದು ಜೀವಭಯ ಕಟ್ಟಿಟ್ಟ ಬುತ್ತಿಯಂತಿದೆ. ಕಟ್ಟೆಯ ರಸ್ತೆ ಬದಿಯಲ್ಲಿ ಗಿಡಗಂಟಿ, ಲಾಂಟಾನಗಳು ದೊಡ್ಡದಾಗಿ ಪೊದೆಯಂತೆ ಬೆಳೆದು ರಸ್ತೆಗೆ ಚಾಚಿದಂತಿರುವುದು ಅಪಾಯಕ್ಕೆ ಮತ್ತಷ್ಟು ಆಹ್ವಾನ ನೀಡುವಂತಿದೆ. ತಡೆಗೋಡೆಯೂ ಇಲ್ಲದೆ ದಾರಿಹೋಕರಿಗೆ ರಸ್ತೆ ಬದಿಯಲ್ಲಿ ಗಿಡಗಂಡಿಯ ಪೊದೆಗೆ ಸಾಗಿ ರಸ್ತೆ ಕೆಳಗಿನ ಕಟ್ಟೆಗೆ ಉರುಳುವುದು ಸಹಜವಾಗಿದೆ. ಗಿಡಗಂಟಿಗಳ ನಡುವೆ ಹಗಲುವೇಳೆಯೇ ಹಾವು, ಚೇಳಿನಂತಹ ವಿಷಜಂತು ಎಗ್ಗಿಲ್ಲದೆ ಓಡಾಡುತ್ತಿವೆ. ಅಲ್ಲಲ್ಲಿ ಗೆದ್ದಲು ಹುತ್ತಗಳು ಬೆಳೆದಿದ್ದು, ಜೀವಭಯ ಕಾಡುವಂತಿದೆ. ದೊಡ್ಡ ವಾಹನಗಳು ಬಂದಾಗ ಹಲವು ದ್ವಿಚಕ್ರ ವಾಹನಗಳ ಸವಾರರು ಹೆದ್ದಾರಿಯ ರಸ್ತೆ ಬದಿಗೆ ವಾಹನ ಇಳಿಸಿದಾಗ ವಾಹನಗಳ ಚಕ್ರಗಳಿಗೆ ಮುಳ್ಳು ಚುಚ್ಚಿ ಸಾಕಷ್ಟು ಪ್ರಮಾದವಾಗುತ್ತಿದೆ.