ಕಿಕ್ಕೇರಮ್ಮನವರ ಅದ್ದೂರಿ ಬ್ರಹ್ಮ ರಥೋತ್ಸವ

ಕಿಕ್ಕೇರಿಯಲ್ಲಿ ಬುಧವಾರ ಮುಸ್ಸಂಜೆಯಲ್ಲಿ ಕಿಕ್ಕೇರಮ್ಮನವರ ಬ್ರಹ್ಮ ರಥೋತ್ಸವ ಸದ್ಭಕ್ತರ ಮೇಳದೊಂದಿಗೆ ಜರುಗಿತು.
ಕಿಕ್ಕೇರಿಯಲ್ಲಿ ಬುಧವಾರ ಮುಸ್ಸಂಜೆಯಲ್ಲಿ ಕಿಕ್ಕೇರಮ್ಮನವರ ಬ್ರಹ್ಮ ರಥೋತ್ಸವ ಸದ್ಭಕ್ತರ ಮೇಳದೊಂದಿಗೆ ಜರುಗಿತು.
Published on
ಕಿಕ್ಕೇರಿ: ಕಿಕ್ಕೇರಿ-ಲಕ್ಷ್ಮೀಪುರ ಗ್ರಾಮದ ಗ್ರಾಮದೇವತೆ ಕಿಕ್ಕೇರಮ್ಮನವರ ಬ್ರಹ್ಮ ರಥೋತ್ಸವ ಬುಧವಾರ ಸಹಸ್ರಾರು ಭಕ್ತ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.
ಮಹಾಲಕ್ಷ್ಮೀ, ಕಿಕ್ಕೇರಮ್ಮ, ಲಕ್ಕಮ್ಮ ಉಘೇ ಉಘೇ ಎಂದು ಜೈಕಾರ ಹಾಕುತ್ತ ಸಾಗುತ್ತಿದ್ದ ನೋಟ ದೇವಿ ಮಹಿಮೆಗೆ ಪುಷ್ಟೀಕರಿಸಿತು. ಸುಮಾರು 2ಕಿ.ಮೀ. ದೂರದಲ್ಲಿನ ಊರ ಹೊರಗಿನ ಅಮ್ಮನವರ ಗುಡಿಯವರೆಗೆ ಸಾಗಿದ ಮಹಾರಥವನ್ನು ಕಣ್ತುಂಬಿಕೊಳ್ಳಲು ರಸ್ತೆಯ ಇಕ್ಕೆಲಗಳಲ್ಲಿ ಜನಸಾಗರವೇ ಜಮಾಯಿಸಿತ್ತು. ರಂಗು ರಂಗಿನ ವರ್ಣದ ಜರತಾರಿಗಳ ಧ್ವಜಕೇಸರಿ, ಸುಗಂಧಪುಷ್ಪಗಳ ಅಲಂಕೃತ ಮಾಲೆಯ ರಥದಲ್ಲಿ ಕಿಕ್ಕೇರಮ್ಮ ರಥಾರೂಢಳಾಗಿ ಸಾಗುತ್ತಿದ್ದ ನೋಟವನ್ನು ಕಣ್ತುಂಬಿಕೊಂಡು ಭಕ್ತರು ಹಣ್ಣು ದವನವನ್ನು ರಥಕ್ಕೆ ಎಸೆದು ಭಕ್ತಿ ಪರಾಕಾಷ್ಠೆಯಲ್ಲಿ ಮಿಂದರು.
ಬ್ರಾಹ್ಮಿ ಮುಹೂರ್ತದಲ್ಲಿ ದೇವಿಯ ಮೂಲ ವಿಗ್ರಹಕ್ಕೆ ಗಂಗಾಜಲಾಭಿಷೇಕ, ಪಂಚಾಮೃತ ಅಭಿಷೇಕ ನೆರವೇರಿಸಿದರು. ವಿವಿಧ ಪರಿಮಳ ಪುಷ್ಪಗಳಿಂದ ಅಲಂಕರಿಸಿ, ವಸ್ತ್ರ ಆಭರಣಗಳಿಂದ ಶೃಂಗರಿಸಲಾಗಿತ್ತು. ಬೆಳಗ್ಗಿನಿಂದಲೇ ಭಕ್ತರು ಸರತಿಯಲ್ಲಿ ನಿಂತು ದೇವಿ ದರ್ಶನ ಪಡೆಯಲು ಕಾದು ನಿಂತಿದ್ದರು. ಬೆಳಗ್ಗೆ ಕಳಸ ಪೂಜೆ, ಬಲಿಯನ್ನ, ಧೂಪ ಪೂಜೆ, ಧ್ವಜಪಟ ಪೂಜೆಗಳು ಜರುಗಿ, ಗುಡಿಯಿಂದ ರಥಬೀದಿ ಹಾಗೂ ಊರಲೆಲ್ಲ ಮೆರವಣಿಗೆ ಸಾಗಿತು. ನಂತರ ಉತ್ಸವ ಮೂರ್ತಿಯಾದ ಚಿಕ್ಕಮ್ಮ ದೇವಿಯ ಮೆರವಣಿಗೆ ಮಂಗಳ ವಾಧ್ಯದೊಂದಿಗೆ ಹೊರಟಿತು. ಪ್ರತಿ ಬೀದಿಗಳಲ್ಲಿ ಮೆರವಣಿಗೆ ಮೂಲಕ ಸಾಗಿದ ದೇವಿಯನ್ನು ಭಕ್ತರು ಬಣ್ಣ ಬಣ್ಣದ ರಂಗೋಲಿ ಬಿಡಿಸಿ, ಹಸಿರು ತೋರಣ ಕಟ್ಟಿ, ಆರತಿ ಎತ್ತಿ ಬರಮಾಡಿಕೊಂಡರು. ಅಲ್ಲಲ್ಲಿ ವಿವಿಧ ಸಂಘ ಸಂಸ್ಥೆ, ದಾನಿಗಳಿಂದ ರಸಾಯನ, ಮೊಸರನ್ನ, ನೀರುಮಜ್ಜಿಗೆ, ಪಾನಕ, ಫ್ರೂಟ್ ಸಲಾಡ್, ಸಿಹಿತಿನಿಸು, ಹಣ್ಣು ತುಪ್ಪವನ್ನು ಭಕ್ತರಿಗೆ ನೀಡಿ ಹಸಿವು ದಾಹ ತಣಿಸಿದರು.
ಅಂತಿಮವಾಗಿ ಉತ್ಸವ ಮೂರ್ತಿ ದೇವಿಯನ್ನು ರಥದ ಸುತ್ತ ಮೂರು ಪ್ರದಕ್ಷಿಣೆ ಹಾಕಿಸಿ ರಥದಲ್ಲಿ ಪ್ರತಿಷ್ಠಾಪಿಸಲಾಯಿತು. ಶುಭಲಗ್ನದಲ್ಲಿ ರಥೋತ್ಸವಕ್ಕೆ ಚಾಲನೆ ದೊರೆತ ಕೂಡಲೇ ಭಕ್ತರು, ನವಜೋಡಿಗಳು ಹಣ್ಣು ದವನ ಎಸೆದು ದೇವಿಗೆ ನಮಸ್ಕರಿಸುತ್ತ ರಥದೊಂದಿಗೆ ಸಾಗಿದರು. ರಥ ಸಂಭ್ರಮದಲ್ಲಿ ದೇವಿಯ ಆರಾಧಕರಾದ ಕೆಂಚಮ್ಮ, ದೊಡ್ಡಹಟ್ಟಿ, ಬೂನಾಸಿ, ಮಾರಮ್ಮ ವಠಾರದವರು, ಪಕ್ಷಾತೀತವಾಗಿ ವಿವಿಧ ಪಕ್ಷಗಳ ಮುಖಂಡರು, ಹೋಬಳಿಯ ಮುಖಂಡರು, ಹೊರ ರಾಜ್ಯಗಳಿಂದ ಭಕ್ತರು ಬಹುಸಂಖ್ಯೆಯಲ್ಲಿ ಆಗಮಿಸಿದ್ದರು. ಜಾನಪದ ಪ್ರಕಾರಗಳಾದ ಪಟಕುಣಿತ, ನಾಸಿಕ ಮೇಳ ವಾದ್ಯ ರಂಜಿಸಿತು. ಕಿಕ್ಕೇರಿ ಪೊಲೀಸರು ಸೂಕ್ತ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net