ಕಿಕ್ಕೇರಿ: ಶಕ್ತಿ, ಭಕ್ತಿಯ ಆರಾಧನೆಯ ಕ್ಷೇತ್ರಪಾಲಕಿ ದೇವಿ ಕಿಕ್ಕೇರಮ್ಮ ದೇವಿಯ ಜಾತ್ರಾ ಮಹೋತ್ಸವ ಇಲ್ಲಿನ ಸಿರಿಗೆರೆ(ಅಮಾನಿಕೆರೆ)ಯ ಸುಂದರ ತಾಣದಲ್ಲಿ ತೆಪ್ಪೋತ್ಸವದ ಮೂಲಕ ಭಾನುವಾರ ರಾತ್ರಿ ಸಂಪನ್ನವಾಯಿತು.
ಯುಗಾದಿಯಂದು ಆರಂಭವಾದ ಜಾತ್ರಾ ಸಡಗರ ಹತ್ತು ದಿನಗಳ ಕಾಲ ವಿಜೃಂಭಣೆಯಿಂದ ಜರುಗಿತು. ನಿತ್ಯ ವಿವಿಧ ಧಾರ್ಮಿಕ ಕಾರ್ಯಗಳು ನಡೆದವು. ಮುಂಜಾನೆ, ಮುಸ್ಸಂಜೆಯಲ್ಲಿ ದೇವಿಯ ಮೆರವಣಿಗೆ, ಭಕ್ತರಿಗೆ ದೇವಿ ದರ್ಶನ, ಹಣ್ಣು, ತುಪ್ಪ ರಸಾಯನ ಪ್ರಸಾದ ಸೇವೆ ನಡೆಯಿತು.
ಓಕುಳಿ ಹಬ್ಬ, ಬಾಣಬಿರುಸು ಪ್ರದರ್ಶನ, ಕುರುಕ್ಷೇತ್ರ ನಾಟಕ, ಹೂವಿನ ಪಲ್ಲಕ್ಕಿ ಉತ್ಸವ ಜರುಗಿತು. ಅಂತಿಮವಾಗಿ ಗ್ರಾಮದೇವಿಯನ್ನು ತೆಪ್ಪದಲ್ಲಿ ಮಾಡಲಾದ ವಿಶೇಷ ಸೇವೆಗೆ ವಿವಿಧ ಗ್ರಾಮಗಳಿಂದ ದೇವಿಯ ಭಕ್ತರು ಆಗಮಿಸಿ ಕಣ್ತುಂಬಿಕೊಂಡರು. ಯಲ್ಲಕ್ಕಿಗೌಡರ ಕುಟುಂಬದವರು ತೆಪ್ರೋತ್ಸವ ಉಸ್ತುವಾರಿ ವಹಿಸಿದ್ದರು.
ಲಕ್ಕಮ್ಮನ ವಠಾರದ ಬೂನಾಸಿ, ಕೆಂಚಮ್ಮ, ಮಾರಮ್ಮ, ದೊಡ್ಡಹಟ್ಟಿ ಪ್ರಮುಖರು, ಕಿಕ್ಕೇರಿ ಹಾಗೂ ಸುತ್ತಮುತ್ತಲ ಗ್ರಾಮಸ್ಥರು ಹಾಜರಿದ್ದರು.