ಕಿಕ್ಕೇರಮ್ಮ ಜಾತ್ರೋತ್ಸವಕ್ಕೆ ಚಾಲನೆ

ಕಿಕ್ಕೇರಿ ಗ್ರಾಮದೇವತೆ ಕಿಕ್ಕೇರಮ್ಮನವರ ಜಾತ್ರಾ ಮಹೋತ್ಸವಕ್ಕೆ ಮಾರುತಿ ದೇವರ ಧ್ವಜಪಟ ಮೆರವಣಿಗೆ ಮೂಲಕ ಗುರುವಾರ ಚಾಲನೆ ನೀಡಲಾಯಿತು.
ಕಿಕ್ಕೇರಿ ಗ್ರಾಮದೇವತೆ ಕಿಕ್ಕೇರಮ್ಮನವರ ಜಾತ್ರಾ ಮಹೋತ್ಸವಕ್ಕೆ ಮಾರುತಿ ದೇವರ ಧ್ವಜಪಟ ಮೆರವಣಿಗೆ ಮೂಲಕ ಗುರುವಾರ ಚಾಲನೆ ನೀಡಲಾಯಿತು.
Published on
ಕಿಕ್ಕೇರಿ: ಲಕ್ಷ್ಮೀಪುರ-ಕಿಕ್ಕೇರಿ ಅವಳಿ ಗ್ರಾಮಗಳ ಅದಿದೇವತೆ ಉಜ್ಜಯಿನಿಯಿಂದ ಬಂದು ನೆಲೆಸಿರುವ ಕಿಕ್ಕೇರಮ್ಮನವರ ಜಾತ್ರಾ ಮಹೋತ್ಸವ ಪರಾಭವ ಸಂವತ್ಸರದ ಯುಗಾದಿ ದಿನದ ಗುರುವಾರ ಆರಂಭವಾಯಿತು.
ಯುಗಾದಿ ನಂತರ ಏಳು ದಿನಗಳ ಕಾಲ ನಡೆಯುವ ಜಾತ್ರಾ ಮಹೋತ್ಸವಕ್ಕೆ ಅಮ್ಮನವರ ಗುಡಿಯ ಮೆಟ್ಟಲು ಪೂಜೆ ಸೇವೆ ಸಲ್ಲಿಸಲಾಯಿತು. ಮೂಲ ದೇವಿಗೆ ವಿಶೇಷ ಆರತಿ ಬೆಳಗಿ ಅರ್ಚಕರು ನಿರ್ವಿಘ್ನವಾಗಿ ಜಾತ್ರೆ ನಡೆಯಲು ಪ್ರಾರ್ಥಿಸಿದರು. ಹಾಲುಮತ ಸಮುದಾಯದ ಲಕ್ಷ್ಮೀಪುರ ಗ್ರಾಮದ ದೇವಿಯ ಒಕ್ಕಲಿನವರಾದ ಬೂನಾಸಿ, ಹುಚ್ಚಮ್ಮ, ಕೆಂಚಮ್ಮ, ಮಾರಮ್ಮ ವಠಾರದವರು ಗುಡಿಯಲ್ಲಿ ಜಮಾಯಿಸಿದ್ದರು.
ವಿಶ್ವಕರ್ಮ ಸಮುದಾಯದವರು ವೀರಾಂಜನೇಯ ಚಿತ್ರವನ್ನು ಬಿಡಿಸುವ ಮೂಲಕ ಧ್ವಜಪಟ ತಯಾರಿಸಿದರು. ಗುಡಿಯಿಂದ ಧ್ವಜಪಟದ ಮೆರವಣಿಗೆ ಮೇಳವಾದ್ಯದೊಂದಿಗೆ ಹೊಸಬೀದಿ, ರಥಬೀದಿ, ನರಸಿಂಹಸ್ವಾಮಿ ಬೀದಿಯಲ್ಲಿ ಸಾಗಿ, ಗುಡಿಗೆ ವಾಪಸು ಮರಳಿತು. ಗುಡಿಯ ದ್ವಾರಮಂಟಪದ ಮೇಲೆ ಮಾರುತಿಯ ಧ್ವಜ ಸ್ಧಾಪಿಸಿ ಜಾತ್ರೆ ಸುಗಮವಾಗಿ ನಡೆಯಲು ಭಕ್ತರು ಮಾರುತಿದೇವರಿಗೆ ನಮಿಸಿದರು. ಉತ್ಸವ ಮೂರ್ತಿಯಾದ ಚಿಕ್ಕಮ್ಮ ದೇವಿಗೆ ವಿವಿಧ ವಸ್ತ್ರ, ಒಡವೆ, ಪುಷ್ಪಾಲಂಕಾರ ಮಾಡಿ ಮೆರವಣಿಗೆ ಮಾಡಲಾಯಿತು. ಭಕ್ತಗಣ ದೇವಿಯನ್ನು ಸಂಭ್ರಮದಿಂದ ಆರತಿ ಎತ್ತಿ ಸ್ವಾಗತಿಸಿದರು.
ಜಾತ್ರೆಯ ಏಳುದಿನವೂ ವಿಶೇಷ ಪೂಜೆ, ಅಲಂಕಾರ, ಪಂಚಮಿ ಪೂಜೆ, ಅಭಿಷೇಕ ನಡೆಯಲಿದೆ. ರಥೋತ್ಸವದ ಮರುದಿನ ಜಾನಪದ ಕಲಾಪ್ರಕಾರ, ಬಾಣ ಬಿರುಸಿನೊಂದಿಗೆ ಹೂವಿನ ಹಾಗೂ ಮುತ್ತಿನ ಪಲ್ಲಕ್ಕಿ ಉತ್ಸವ ವಿಶೇಷವಾಗಿದೆ ನಡೆಯಲಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net