ಕೊಲೆ ಆರೋಪಿ ಕಾಲಿಗೆ ಖಾಕಿ ಗುಂಡು

ಪೊಲೀಸರ ಗುಂಡೇಟಿನಿಂದ ಗಾಯಗೊಂಡಿರುವ ಕೊಲೆ ಆರೋಪಿ ಸಿದ್ದರಾಜು ನನ್ನು ಮಳವಳ್ಳಿ ಪಟ್ಟಣದ ಆಸ್ಪತ್ರೆಗೆ ಸಾಗಿಸುತ್ತಿರುವುದು.
ಪೊಲೀಸರ ಗುಂಡೇಟಿನಿಂದ ಗಾಯಗೊಂಡಿರುವ ಕೊಲೆ ಆರೋಪಿ ಸಿದ್ದರಾಜು ನನ್ನು ಮಳವಳ್ಳಿ ಪಟ್ಟಣದ ಆಸ್ಪತ್ರೆಗೆ ಸಾಗಿಸುತ್ತಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಗೆ ಯತ್ನಿಸಿದ ವೇಳೆ ಫೈರಿಂಗ್
ಮಳವಳ್ಳಿ: ತಾಲೂಕಿನ ಹಾಡ್ಲಿ ಸಮೀಪದ ಹುಲ್ಲೇಗಾಲ ಗ್ರಾಮದ ಬಳಿ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ಕೊಲೆ ಆರೋಪಿಯ ಕಾಲಿಗೆ ಗುಂಡು ಹಾರಿಸಿ ಬಂಧಿಸಲಾಗಿದೆ.
ತಾಲೂಕಿನ ರಾಮನಾಥಮೋಳೆ ಗ್ರಾಮದ ಸಿದ್ದರಾಜು ಬಂಧಿತ. ಈತನನ್ನು ಜೂ.16 ರಂದು ಭೀಮನಹಳ್ಳಿ ಗ್ರಾಮದ ಮಹೇಶ ಎಂಬಾತನ ಕೊಲೆ ಪ್ರಕರಣದ ಸಂಬಂಧ ಕಿರುಗಾವಲು ಪೊಲೀಸರು ಬಂಧಿಸಿದ್ದರು. ಆರೋಪಿಯನ್ನು ಸ್ಥಳ ಮಹಜರು ನಡೆಸಲು ಹುಲ್ಲೇಗಾಲ ಬಳಿ ಕರೆದೊಯ್ದಿದ್ದು, ಈ ವೇಳೆ ಮೂತ್ರ ವಿಸರ್ಜನೆ ನೆಪದಲ್ಲಿ ರಸ್ತೆ ಬದಿಗೆ ಹೋದ ಆರೋಪಿ ಅಲ್ಲೇ ಬಿದ್ದಿದ್ದ ಮದ್ಯ ಖಾಲಿ ಬಾಟಲಿಯಿಂದ ಮುಖ್ಯ ಪೇದೆ ಪ್ರಭುಸ್ವಾಮಿ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಮುಂದಾಗಿದ್ದಾನೆ.
ಕೂಡಲೇ ಸ್ಥಳದಲ್ಲಿದ್ದ ಪಿಎಸ್‌ಐ ರವಿಕುಮಾರ್ ಎಚ್ಚರಿಕೆ ನೀಡಿದರೂ ಲೆಕ್ಕಿಸದೆ ಪೊಲೀಸರೆಡೆಗೆ ಕಲ್ಲು ತೂರುತ್ತಾ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಜೀವ ರಕ್ಷಣೆಗಾಗಿ ಪಿಸ್ತೂಲು ತೆಗೆದು ಆರೋಪಿ ಕಾಲಿಗೆ ಗುಂಡುಹಾರಿಸಿ ವಶಕ್ಕೆ ಪಡೆದಿದ್ದಾರೆ.
ಗುಂಡೇಟಿನಿಂದ ಗಾಯಗೊಂಡಿದ್ದ ಆರೋಪಿಯನ್ನು ಪಟ್ಟಣದ ತಾಲೂಕು ಸರ್ಕಾರಿ ಆಸ್ಪತ್ರೆಗೆ ಕರೆತಂದು ಪ್ರಥಮ ಚಿಕಿತ್ಸೆ ನಂತರ ಮಂಡ್ಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡಿದ್ದ ಪೇದೆ ಪ್ರಭುಸ್ವಾಮಿಗೆ ತಾಲೂಕು ಆಸ್ಪತ್ರೆಯಲ್ಲೇ ಚಿಕಿತ್ಸೆ ನೀಡಲಾಗಿದೆ. ವಿಷಯ ತಿಳಿದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶೋಭಾರಾಣಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net