ರೋಟರಿ ಕಾವೇರಿ ಸಿರಿ ಹಾಗೂ ಮೈಸೂರಿನ ಮಹಾರಾಜ ಆಯುರ್ವೇದ ಕಾಲೇಜು ಮತ್ತು ಫಾರ್ಮಸಿ ಕಾಲೇಜಿನ ವಿದ್ಯಾರ್ಥಿ
ಶ್ರೀರಂಗಪಟ್ಟಣ: ಪ್ರಜ್ಞಾವಂತ ಜನರೇ ಪವಿತ್ರ ನದಿಗಳಿಗೆ ತ್ಯಾಜ್ಯ ಎಸೆದು ನೀರನ್ನು ಮಲಿನಗೊಳಿಸುತ್ತಿದ್ದು, ನದಿಗಳನ್ನು ಸ್ವಚ್ಛವಾಗಿಡುವುದು ನಮ್ಮ ಆದ್ಯ ಕರ್ತವ್ಯ ಎಂದು ಚಂದ್ರವನದ ಪೀಠಾಧಿಪತಿ ಡಾ.ಶ್ರೀ ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿ ತಿಳಿಸಿದರು.
ಪಟ್ಟಣದ ಹೊರವಲಯದ ಚಂದ್ರವನ ಆಶ್ರಮ ಆವರಣದಲ್ಲಿ ರೋಟರಿ ಕಾವೇರಿ ಸಿರಿ ಹಾಗೂ ಮೈಸೂರಿನ ಮಹಾರಾಜ ಆಯುರ್ವೇದ ಕಾಲೇಜು ಮತ್ತು ಫಾರ್ಮಸಿ ಕಾಲೇಜಿನ ವಿದ್ಯಾರ್ಥಿಗಳ ವತಿಯಿಂದ ಆಯೋಜಿಸಿದ್ದ ಆಶ್ರಮ ಆವರಣ ಮತ್ತು ಕಾವೇರಿ ನದಿಯ ಸ್ವಚ್ಛತಾ ಆಂದೋಲನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಇತ್ತೀಚಿನ ದಿನಮಾನಗಳಲ್ಲಿ ಕಾವೇರಿ ಸೇರಿದಂತೆ ಪವಿತ್ರ ನದಿಗಳಿಗೆ ವಿದ್ಯಾವಂತ ಹಾಗೂ ನಾಗರಿಕ ಸಮಾಜದ ಜನರೇ ಕಸ ಮತ್ತು ತ್ಯಾಜ್ಯಗಳನ್ನು ಹಾಕಿ ಕಲುಷಿತಗೊಳಿಸುತ್ತಿರುವುದು ನೋವಿನ ಸಂಗತಿ. ಹಾಗಾಗಿ ನದಿಗಳನ್ನು ಉಳಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳೊಂದಿಗೆ ನಾವೂ ಕೈಜೋಡಿಸುವ ಮೂಲಕ ಸ್ವಚ್ಛತಾ ಆಂದೋಲನ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದ ಅವರು, ಇಂದಿನ ಯುವಕರು ದೇಶ ಮತ್ತು ಧರ್ಮವನ್ನು ಕಟ್ಟುವ ಕೆಲಸ ಮಾಡುವುದರ ಜತೆಗೆ ಪರಿಸರದ ಬಗ್ಗೆಯೂ ಕಾಳಜಿ ವಹಿಸಬೇಕೆಂದು ತಿಳಿಸಿದರು.
ರೋಟರಿ ಕಾವೇರಿ ಸಿರಿ ಅಧ್ಯಕ್ಷ ಕೆ.ಎಸ್.ಶಿವಲಿಂಗಪ್ಪ, ಉಪಾಧ್ಯಕ್ಷ ಟಿ.ಪಿ.ಶಿವಕುಮಾರ್, ನಾಗರಾಜ್ ಶಾಸ್ತ್ರಿ, ಕಾಲೇಜಿನ ಉಪನ್ಯಾಸಕರಾದ ಎಲ್.ಕಿರಣ್‌ಕುಮಾರ್, ಜಿ.ಡಿ.ಶಿವರಾಜ್, ಅಶ್ವಿನಿ ಮುರಳಿ ಇತರರಿದ್ದರು.