ಗ್ರಾಮೀಣ ಬ್ಯಾಂಕ್ ಉದ್ಯೋಗಿಗಳ ಧರಣಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ

 ಕರ್ನಾಟಕ ಗ್ರಾಮೀಣ ಬ್ಯಾಂಕ್ ನೌಕರರು ಹಾಗೂ ಅಧಿಕಾರಿಗಳ ಸಂಘದಿಂದ ಪ್ರತಿಭಟನೆ ನಡೆಸಲಾಯಿತು.
ಕರ್ನಾಟಕ ಗ್ರಾಮೀಣ ಬ್ಯಾಂಕ್ ನೌಕರರು ಹಾಗೂ ಅಧಿಕಾರಿಗಳ ಸಂಘದಿಂದ ಪ್ರತಿಭಟನೆ ನಡೆಸಲಾಯಿತು.
Published on
ಮಂಡ್ಯ: ಅಗತ್ಯ ಸೇವಾ ಅವಧಿಯನ್ನು ಕಡಿಮೆ ಮಾಡಿ ಮೇಲ್ದರ್ಜೆಯ ಹುದ್ದೆಗಳ ಸೃಷ್ಟಿ ಮಾಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ಗ್ರಾಮೀಣ ಬ್ಯಾಂಕ್ ನೌಕರರು ಹಾಗೂ ಅಧಿಕಾರಿಗಳ ಸಂಘದಿಂದ ನಗರದಲ್ಲಿ ಒಂದು ದಿನದ ಧರಣಿ ನಡೆಸಲಾಯಿತು.
ಬ್ಯಾಂಕ್ ಪ್ರಧಾನ ಕಚೇರಿ ಎದುರು ಧರಣಿ ನಡೆಸಿದ ಉದ್ಯೋಗಿಗಳು, ಹಲವು ವರ್ಷದಿಂದ ಮನವಿ ಮಾಡುತ್ತಿದ್ದರೂ ಸ್ಪಂದನೆ ಸಿಗುತ್ತಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು. ಅಂತೆಯೇ ತಮ್ಮ ನ್ಯಾಯಯುತ ಬೇಡಿಕೆಗಳನ್ನು ತಕ್ಷಣ ಈಡೇರಿಸಬೇಕೆಂದು ಆಗ್ರಹಿಸಿದರು.
ಗ್ರಾಮೀಣ ಬ್ಯಾಂಕ್‌ಗಳು ದೇಶದ ಗ್ರಾಮೀಣ ಆರ್ಥಿಕತೆಯ ಪ್ರಮುಖ ಪಾತ್ರ ವಹಿಸಿವೆ. ಆದರೆ ಇಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ಸಮಾನ ಹಕ್ಕುಗಳು ಮತ್ತು ಸೌಲಭ್ಯಗಳು ಇನ್ನೂ ಲಭ್ಯವಾಗಿಲ್ಲ. ಆದ್ದರಿಂದ ರಜೆ ನಿಯಮಗಳು ಸೇರಿದಂತೆ ಎಲ್ಲ ಸೇವಾ ನಿಯಮಗಳನ್ನು ಇತರೆ ಸಾರ್ವಜನಿಕ ವಲಯದ ಬ್ಯಾಂಕ್‌ನಲ್ಲಿರುವಂತೆ ತಿದ್ದುಪಡಿ ಮಾಡಬೇಕು. ಹಲವು ವರ್ಷದಿಂದ ಕಾಲ ಸೇವೆ ಸಲ್ಲಿಸುತ್ತಿರುವ ದಿನಗೂಲಿ, ಹೊರಗುತ್ತಿಗೆ, ಕ್ಯಾಸುವಲ್ ಕಾರ್ಮಿಕರನ್ನು ಖಾಯಂಗೊಳಿಸಲು ಸ್ಪಷ್ಟವಾದ ಯೋಜನೆ ರೂಪಿಸಬೇಕು. ಪಿಎಲ್‌ಐ ಅನ್ನು ತಕ್ಷಣ ಜಾರಿಗೆ ತರಬೇಕು. ಇತರೆ ಬ್ಯಾಂಕ್‌ಗಳ ಮಾನದಂಡದಂತೆ ನ್ಯಾಯಸಮ್ಮತ ವರ್ಗಾವಣೆ ನೀತಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ಎಲ್ಲ ಹುದ್ದೆಗಳಲ್ಲಿನ ಖಾಲಿ ಸ್ಥಾನಗಳನ್ನು ತಕ್ಷಣ ಭರ್ತಿ ಮಾಡಬೇಕು. ಪದೋನ್ನತಿ ಹುದ್ದೆಗಳಲ್ಲಿ ನಿಯೋಜಿಸಲಾದ ಡೆಪ್ಯುಟೇಶನ್ ಅಧಿಕಾರಿಗಳನ್ನು ಹಿಂಪಡೆದು ಸ್ಥಳೀಯ ಸಿಬ್ಬಂದಿಗೆ ಅವಕಾಶ ನೀಡಬೇಕು. ವೇತನ, ಭತ್ಯೆಗಳು ಹಾಗೂ ಇತರೆ ಸೌಲಭ್ಯಗಳಲ್ಲಿ ಇತರೆ ಬ್ಯಾಂಕ್‌ಗಳಂತೆ ಸಮಾನತೆ ಕಲ್ಪಿಸಬೇಕು. ಈ ಬೇಡಿಕೆಗಳು ಕೇವಲ ಉದ್ಯೋಗಿಗಳ ಹಿತಕ್ಕಾಗಿ ಮಾತ್ರವಲ್ಲದೆ, ಗ್ರಾಮೀಣ ಬ್ಯಾಂಕ್‌ಗಳ ಕಾರ್ಯಕ್ಷಮತೆ ಹೆಚ್ಚಿಸಲು ಮತ್ತು ಗ್ರಾಹಕರಿಗೆ ಉತ್ತಮ ಸೇವೆ ನೀಡಲು ಸಹ ಅತ್ಯಾವಶ್ಯಕ. ಕೇಂದ್ರ ಸರ್ಕಾರ ತಮ್ಮ ಬೇಡಿಕೆಗಳನ್ನು ತಕ್ಷಣ ಪರಿಗಣಿಸಿ ಜಾರಿಗೆ ತರಬೇಕು. ಒಂದು ವೇಳೆ ನಿರ್ಲಕ್ಷಿೃಸಿದರೆ ಮುಂದಿನ ದಿನಗಳಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.
ಹಿರಿಯ ಹೋರಾಟಗಾರ ಎಚ್.ನಾಗಭೂಷಣರಾವ್, ಸಂಘದ ಪ್ರಧಾನ ಕಾರ್ಯದರ್ಶಿ ಕೀರ್ತಿರಾಜ್, ಖಜಾಂಚಿ ನರಸಿಂಹರಾವ್, ಕಾರ್ಯಾಧ್ಯಕ್ಷ ಆರ್.ವಸಂತ್‌ಕುಮಾರ್, ಜಿಲ್ಲಾ ಕಾರ್ಯದರ್ಶಿ ಹರೀಶ್, ಬಿಂದಿಯ, ನಿತಿನ್, ವಿಜಯ್‌ಕುಮಾರ್, ಕೇಂದ್ರ ಸಮಿತಿ ಸದಸ್ಯ ರಾಜಶೇಖರ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net