ಜೂ.14ರಿಂದ ಪಿಇಟಿಯಲ್ಲಿ ಬ್ಯಾಡ್ಮಿಂಟನ್ ಪಂದ್ಯಾವಳಿ: ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್ ಅಧ್ಯಕ್ಷ ಕುಮಾರ್ ಬಂಗಾರಪ್ಪ ಮಾಹಿತಿ

ಮಂಡ್ಯ ನಗರದಕ್ಕೆ ಭೇಟಿ ನೀಡಿದ ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್ ಅಧ್ಯಕ್ಷ ಕುಮಾರ್ ಬಂಗಾರಪ್ಪ ಅವರನ್ನು ಪಿಇಟಿ ಕೆ.ಎಸ್.ವಿಜಯಾನಂದ ಅಭಿನಂದಿಸಿದರು.
ಮಂಡ್ಯ ನಗರದಕ್ಕೆ ಭೇಟಿ ನೀಡಿದ ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್ ಅಧ್ಯಕ್ಷ ಕುಮಾರ್ ಬಂಗಾರಪ್ಪ ಅವರನ್ನು ಪಿಇಟಿ ಕೆ.ಎಸ್.ವಿಜಯಾನಂದ ಅಭಿನಂದಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಜನತಾ ಶಿಕ್ಷಣ ಟ್ರಸ್ಟ್‌ನಿಂದ ಪೂರಕ ವ್ಯವಸ್ಥೆ
  • ಪಂದ್ಯಾವಳಿಯಲ್ಲಿ 700 ಬಾಲಕ-ಬಾಲಕಿಯರು, ಮಹಿಳೆಯರು ಹಾಗೂ ಪುರುಷರು ಭಾಗವಹಿಸುವ ನಿರೀಕ್ಷೆ
ಮಂಡ್ಯ: ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್ ವತಿಯಿಂದ 19 ವರ್ಷದೊಳಗಿನ ಬಾಲಕ-ಬಾಲಕಿಯರು, ಹಿರಿಯರ ರಾಜ್ಯ ಮಟ್ಟದ ಬ್ಯಾಡ್ಮಿಂಟನ್ ರ‌್ಯಾಂಕಿಂಗ್ ಪಂದ್ಯಾವಳಿಯನ್ನು ಜೂ.14 ರಿಂದ ಜೂ.20ರವರೆಗೆ ನಗರದ ಪಿಇಟಿ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಮಾಜಿ ಸಚಿವ, ಅಸೋಸಿಯೇಷನ್ ಅಧ್ಯಕ್ಷ ಕುಮಾರ್ ಬಂಗಾರಪ್ಪ ತಿಳಿಸಿದರು.
ಪಂದ್ಯಾವಳಿಯಲ್ಲಿ 700 ಬಾಲಕ-ಬಾಲಕಿಯರು, ಮಹಿಳೆಯರು ಹಾಗೂ ಪುರುಷರು ಭಾಗವಹಿಸುವ ನಿರೀಕ್ಷೆ ಇದೆ. ಅವರಿಗೆ ಅಗತ್ಯವಿರುವ ವಸತಿ ವ್ಯವಸ್ಥೆಯನ್ನು ಕಲ್ಪಿಸಲಾಗುವುದಲ್ಲದೆ, ಅಸೋಸಿಯೇಷನ್ ವತಿಯಿಂದ ಕ್ರೀಡಾಪಟುಗಳು, ತೀರ್ಪುಗಾರರರು, ಕೋಚ್ ಹಾಗೂ ಕ್ರೀಡಾಪಟುಗಳ ಜತೆ ಬರುವವರಿಗೆ ಉಚಿತವಾಗಿ ಊಟದ ವ್ಯವಸ್ಥೆ ಮಾಡಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಜನತಾ ಶಿಕ್ಷಣ ಟ್ರಸ್ಟ್‌ನಿಂದ ಕೆ.ಎಸ್.ವಿಜಯಾನಂದ ಅವರು ಪಂದ್ಯಾವಳಿ ಸುಗಮವಾಗಿ ನಡೆಯುವುದಕ್ಕೆ ಪೂರಕವಾದ ವ್ಯವಸ್ಥೆಗಳೆಲ್ಲವನ್ನೂ ಮಾಡಿಕೊಡುತ್ತಿದ್ದಾರೆ. ಮಂಡ್ಯ ಬ್ಯಾಡ್ಮಿಂಟನ್ ಅಸೋಸಿಯೇಷನ್‌ನವರ ಸಹಕಾರದೊಂದಿಗೆ ರಾಜ್ಯಮಟ್ಟದ ರ‌್ಯಾಂಕಿಂಗ್ ಪಂದ್ಯಾವಳಿಯನ್ನು ಅತ್ಯುತ್ತಮವಾಗಿ ನಡೆಸಲಾಗುವುದು. ಪಂದ್ಯಾವಳಿಯಲ್ಲಿ ಮೊದಲ ಬಹುಮಾನವಾಗಿ 19 ವರ್ಷದೊಳಗಿನ ಬಾಲಕ-ಬಾಲಕಿಯರಿಗೆ 2.40 ಲಕ್ಷ ರೂ., ಹಿರಿಯರಿಗೆ 2.60 ಲಕ್ಷ ರೂ.ವರೆಗೆ ಬಹುಮಾನ ನೀಡಲಾಗುವುದು ಎಂದು ತಿಳಿಸಿದರು.
ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್ ಪ್ರತಿಷ್ಠಿತ ವಜ್ರ ಮಹೋತ್ಸವ ವರ್ಷವನ್ನು ಸ್ಮರಿಸಲು ಸಿದ್ಧತೆ ನಡೆಸುತ್ತಿರುವಾಗ ಸಂಘವು ಕರ್ನಾಟಕದಾದ್ಯಂತ ವರ್ಷಪೂರ್ತಿ ಆಚರಣೆಗಳನ್ನು ಪ್ರಾರಂಭಿಸಲು ಸಜ್ಜಾಗಿದೆ. ಮಂಡ್ಯದಿಂದಲೇ 75ನೇ ವರ್ಷದ ವಜ್ರಮಹೋತ್ಸವ ಆಚರಣೆಗೆ ಚಾಲನೆ ನೀಡಲಾಗುತ್ತಿದೆ ಎಂದರು.
ಜಿಲ್ಲೆಯು ದಶಕಗಳಿಂದ ಬ್ಯಾಡ್ಮಿಂಟನ್ ಅಭಿವೃದ್ಧಿ ಮತ್ತು ಪ್ರಚಾರದಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ. ದಕ್ಷಿಣ ವಲಯ ಅಂತರರಾಜ್ಯ ಚಾಂಪಿಯನ್‌ಷಿಪ್, ಜೂನಿಯರ್ ರಾಷ್ಟ್ರೀಯ ಚಾಂಪಿಯನ್‌ಷಿಪ್‌ಗಳು, ಹಲವಾರು ರಾಜ್ಯ ಚಾಂಪಿಯನ್‌ಷಿಪ್‌ಗಳು ಸೇರಿದಂತೆ ಪ್ರಮುಖ ಪಂದ್ಯಾವಳಿಗಳನ್ನು ಯಶಸ್ವಿಯಾಗಿ ಆಯೋಜಿಸಲಾಗಿದೆ. ಸಕ್ಕರೆ ನಾಡು ಕರ್ನಾಟಕ ಮತ್ತು ದೇಶಕ್ಕೆ ಪ್ರಶಸ್ತಿಗಳನ್ನು ತಂದ ಹಲವಾರು ಸಾಧನೆ ಮಾಡಿದ ಆಟಗಾರರನ್ನು ಸಹ ನೀಡಿದೆ. ಅವರಲ್ಲಿ ಜೂನಿಯರ್ ರಾಷ್ಟ್ರೀಯ ಚಾಂಪಿಯನ್ ಆದಿತ್ಯ ಪ್ರಕಾಶ್, ರಾಷ್ಟ್ರೀಯ ಚಾಂಪಿಯನ್ ಎಂ.ರಘು ಸಾಧನೆಗಳು ಯುವ ಆಟಗಾರರಿಗೆ ಸ್ಫೂರ್ತಿ ನೀಡುತ್ತಿವೆ ಎಂದು ಹೇಳಿದರು.
ಡಾ.ಕೆ.ಎಂ.ಶಿವಕುಮಾರ್, ಡಾ.ಎಚ್.ಅನಿಲ್‌ಕುಮಾರ್, ಮನು, ಸುಧೀರ್, ಹರೀಶ್, ಮುರಳಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net