ಶ್ರೀರಂಗಪಟ್ಟಣದ ಕುವೆಂಪು ವೃತ್ತದಲ್ಲಿ ಮೈಸೂರಿನ ಶೇಷಾದ್ರಿಪುರ ಇಂಜಿನಿಯರ್ ಕಾಲೇಜಿನ ಎನ್‌ಎಸ್‌ಎಸ್, ಅಚೀವರ್ಸ್ ಅಕಾಡೆಮಿ, ರೋಟರಿ ಸಂಸ್ಥೆ ಹಾಗೂ ಪಟ್ಟಣದ ಗೃಹರಕ್ಷಕ ದಳ ಘಟಕ ವತಿಯಿಂದ ಭಾನುವಾರ ಕಾರ್ಗಿಲ್ ವಿಜಯ ದಿವಸ ಆಚರಿಸಲಾಯಿತು. ಡಾ.ಬಿ.ಸುಜಯ್ ಕುಮಾರ್, ಡಾ.ರಾಘವೇಂದ್ರ, ನಾಗೇಂದ್ರ, ಯೋಧ ನಾಗರಾಜು ಇದ್ದರು.
ಶ್ರೀರಂಗಪಟ್ಟಣ: ಭಾರತವನ್ನು ತಮ್ಮ ಪ್ರಾಣಕ್ಕಿಂತ ಹೆಚ್ಚು ಪ್ರೀತಿಸಿ ನಮಗೆ ರಕ್ಷಣೆ ನೀಡಿರುವ ಹಾಗೂ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿರುವ ವೀರ ಯೋಧರ ಸ್ಮರಿಸುವ ಮತ್ತು ಗೌರವಿಸುವ ಕರ್ತವ್ಯ ಪ್ರತಿಯೊಬ್ಬ ಭಾರತೀಯನದು ಎಂದು ಹಿರಿಯ ಗಾಂಧಿವಾದಿ ಮತ್ತು ಮಕ್ಕಳ ತಜ್ಞ ಡಾ.ಬಿ.ಸುಜಯ್ ಕುಮಾರ್ ತಿಳಿಸಿದರು.
ಪಟ್ಟಣದ ಕುವೆಂಪು ವೃತ್ತದಲ್ಲಿ ಮೈಸೂರಿನ ಶೇಷಾದ್ರಿಪುರ ಇಂಜಿನಿಯರ್ ಕಾಲೇಜಿನ ಎನ್‌ಎಸ್‌ಎಸ್ ಘಟಕ, ಅಚೀವರ್ಸ್ ಅಕಾಡೆಮಿ, ರೋಟರಿ ಸಂಸ್ಥೆ ಹಾಗೂ ಪಟ್ಟಣದ ಗೃಹರಕ್ಷಕ ದಳ ಘಟಕ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಕಾರ್ಗಿಲ್ ವಿಜಯ ದಿವಸ ಆಚರಣೆಯಲ್ಲಿ ಮಾತನಾಡಿದರು.
ಯೋಧರು ಹಗಲು, ರಾತ್ರಿ ವಿಶ್ರಾಂತಿ ಇಲ್ಲದೆ ರಾಷ್ಟ್ರವನ್ನು ರಕ್ಷಿಸುತ್ತಿದ್ದಾರೆ. ನಮ್ಮೆಲ್ಲ ರಕ್ಷಣೆ ತಮ್ಮ ಸ್ವಂತ ಬದುಕನ್ನು ತ್ಯಾಗ ಮಾಡಿದ್ದಾರೆ. ಹಾಗಾಗಿ ವೀರ ಸೈನಿಕರಿಗೆ ನಮ್ಮ ಕೃತಜ್ಞತೆ ಸದಾಕಾಲ ಸಲ್ಲಬೇಕು. ಅಂತೆಯೇ 1999ರ ಜು.26 ಈ ದಿನ ಅಖಂಡ ಭಾರತಕ್ಕೆ ಜೀವ ನೀಡಿದ ಕಾರ್ಗಿಲ್ ವಿಜಯೋತ್ಸವ ಪ್ರತಿಯೊಬ್ಬ ಭಾರತೀಯನು ಮರೆಯಲಾಗದ ಅವಿಸ್ಮರಣೀಯ ದಿನ ಎಂದು ಹೇಳಿದರು.
ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಡಾ.ರಾಘವೇಂದ್ರ ಮಾತನಾಡಿ, ಕಾರ್ಗಿಲ್ ವಿಜಯ ದಿವಸ್ ಜು.26ರಂದು ಕಾರ್ಗಿಲ್ ಯುದ್ಧದ ಹುತಾತ್ಮರಿಗೆ ಈ ದಿನವನ್ನು ಸಮರ್ಪಿಸಲಾಗಿದೆ. ಶತ್ರುಗಳ ಆಕ್ರಮಣದ ವಿರುದ್ಧ ವಿಜಯ ಸಾಧಿಸಲು ಮುಂಚೂಣಿಯಲ್ಲಿ ತಮ್ಮ ಪ್ರಾಣವನ್ನು ಅರ್ಪಿಸಿದ ವೀರ ಸೈನಿಕರು ನಮ್ಮ ಆದರ್ಶ. ಅವರ ಸೇವೆಗೆ ನಾವುಗಳು ಕೃತಜ್ಞರಾಗಿರಬೇಕು ಎಂದರು.
ಕಾರ್ಯಕ್ರಮಕ್ಕೂ ಆರಂಭದಲ್ಲಿ ಕಾರ್ಗಿಲ್ ಯುದ್ಧದಲ್ಲಿ ಮಡಿದಂತ ವೀರ ಯೋಧರಿಗೆ ಗೌರವ ಮೌನಚರಣೆ ಸಲ್ಲಿಸಲಾಯಿತು. ರೋಟರಿ ಅಧ್ಯಕ್ಷ ನಾಗೇಂದ್ರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಭಾರತೀಯ ಸೇನೆಯಲ್ಲಿ ಸೇವೆ ಮಾಡಿ ನಿವೃತ್ತಿ ಹೊಂದಿದ ಯೋಧ ನಾಗರಾಜ್ ಅವರನ್ನು ಸನ್ಮಾನಿಸಲಾಯಿತು.
ಬಳಿಕ ಬೆಂಗಳೂರು-ಮೈಸೂರು ಹಳೆಯ ರಾಷ್ಟ್ರೀಯ ಹೆದ್ದಾರಿಯ ಕುವೆಂಪು ವೃತ್ತದಿಂದ ಪಟ್ಟಣದ ಮುಖ್ಯ ರಸ್ತೆಗಳ ಮಾರ್ಗವಾಗಿ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದವರೆಗೆ ಜಯ ಘೋಷಗಳೊಂದಿಗೆ ಜಾಥಾ ನಡೆಸಲಾಯಿತು.
ರೋಟರಿ ಕಾರ್ಯದರ್ಶಿ ಸರಸ್ವತಿ, ರೇವಣ್ಣ, ಜಿಲ್ಲಾ ಗೃಹರಕ್ಷಕ ದಳದ ಘಟಕದ ಉಮೇಶ್, ವೆಂಕಟೇಶ್, ಅತಿವಸನ ಅಕಾಡೆಮಿಯ ನಿರ್ದೇಶಕ ಗುರುಪ್ರಸಾದ್, ಶ್ರೀಧರ್, ಹರೀಶ್, ಎನ್‌ಎಸ್‌ಎಸ್ ವಿದ್ಯಾರ್ಥಿಗಳಾದ ಶಾಂಭವಿ, ಹೃದಯ, ಚಂದನ್, ಪ್ರಶಾಂತ್, ರೇವಣ್ಣ ರಜತ್ ಇದ್ದರು.