ಕಷ್ಟ, ಕಾರ್ಪಣ್ಯ ಕಳೆಯುವ ಕಾಳಿಕದೇವಿ

 ಕಾಳಿಕದೇವಿ
ಕಾಳಿಕದೇವಿ
Published on
ಪಾಂಡವಪುರ: ನಿಷ್ಕಲ್ಮಶ ಮನಸ್ಸಿನಿಂದ ಸಾನ್ನಿಧ್ಯಕ್ಕೆ ಬರುವ ಭಕ್ತರ ಇಷ್ಟಾರ್ಥ ನೆರವೇರಿಸುವ ಹೊಸಬಾವಿ ಕಾಳಿಕದೇವಿಯು ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಮೇಲುಕೋಟೆಯಲ್ಲಿ ನೆಲೆ ನಿಂತಿದ್ದಾಳೆ.
ಶಕ್ತಿದೇವತೆಗೆ ಭಕ್ತಿಯಿಂದ ಕೈ ಮುಗಿದು ಶರಣಾದರೆ ಕಷ್ಟ, ಕಾರ್ಪಣ್ಯ, ದುಃಖ ದುಮ್ಮಾನ ಶಮನವಾಗಿ ಬಾಳಿನಲ್ಲಿ ಸುಖ ಸಂತೋಷ ನೆಲೆಸುತ್ತದೆ ಎಂಬ ಭಾವ ಭಕ್ತರ ಮನದಲ್ಲಿದೆ.
ಪುರಾಣ ಪ್ರಸಿದ್ಧ, ಐತಿಹಾಸಿಕ ಹಾಗೂ ದಕ್ಷಿಣ ಬದರಿ ಎಂದು ಕರೆಯಲ್ಪಡುವ ಮೇಲುಕೋಟೆಯ ಚೆಲುವನಾರಾಯಣಸ್ವಾಮಿ ಮತ್ತು ಯೋಗಾನರಸಿಂಹಸ್ವಾಮಿ ನೆಲೆಸಿರುವ ಧಾರ್ಮಿಕ ಕ್ಷೇತ್ರದಲ್ಲಿನ ಪಂಚಕಲ್ಯಾಣಿಗೆ ಹೊಂದಿಕೊಂಡಂತಿರುವ ಬೆಟ್ಟ-ಗುಡ್ಡಗಳ ನಡುವೆ ಹೊಸಬಾವಿ ಎಂಬ ಹೆಸರಿನ ಕೆರೆಯ ಮೇಲೆ ಶಕ್ತಿದೇವತೆ ಕಾಳಿಕದೇವಿ ನೆಲೆಯಾಗಿ ನಿಂತಿದ್ದು, ಭಕ್ತರ ಆರಾಧ್ಯ ದೇವಿಯಾಗಿ ಪೂಜಿಸಲ್ಪಡುತ್ತಿದ್ದಾಳೆ. ಕೌಟುಂಬಿಕ ಸಮಸ್ಯೆಗಳಿಗೆ ಪರಿಹಾರ ಮತ್ತು ಕಷ್ಟ ಎಂದು ಹರಕೆ ಹೊತ್ತು ಬರುವ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ದೇವಿಯಾಗಿದ್ದಾಳೆ. ಮದುವೆ, ಸಂತಾನ, ಕೌಟುಂಬಿಕ ಕಲಹ, ಮನೋರೋಗ, ವ್ಯಾಪಾರ, ವ್ಯಾಜ್ಯ, ಶುಭಕಾರ್ಯಗಳಿಗೆ ಎದುರಾಗುವ ಅಡ್ಡಿ ಆತಂಕ, ದಾಯಾದಿ ಕಲಹ ಇತರ ಅನೇಕ ಸಮಸ್ಯೆಗಳಿಗೆ ಪರಿಹಾರ ನೀಡುವಂತೆ ಬೇಡಿಕೊಂಡು ಪೂಜೆ ಸಲ್ಲಿಸಿದರೆ ಕಷ್ಟಗಳೆಲ್ಲ ಮಂಜಿನಂತೆ ಕರಗುತ್ತದೆ ಎಂಬುದು ಭಕ್ತರ ಅಚಲ ನಂಬಿಕೆ.\
ದೇವಿ ಪ್ರತಿಷ್ಠಾಪನೆಗೊಂಡ ಇತಿಹಾಸ: 20ನೇ ಶತಮಾನದಲ್ಲಿ ದೇವಿಯ ಭಕ್ತ ಗುಡ್ಡಪ್ಪ ಜವರಶೆಟ್ಟಿ ಅವರ ಸ್ವಪ್ನದಲ್ಲಿ ಕಾಳಿಕದೇವಿ ಕಾಣಿಸಿಕೊಂಡು ಮೇಲುಕೋಟೆ ಬೆಟ್ಟಕ್ಕೆ ಹೊಂದಿಕೊಂಡಂತೆ ಗುಡಿ ನಿರ್ಮಾಣ ಮಾಡಿ ವಿಗ್ರಹ ಪ್ರತಿಷ್ಠಾಪಿಸಿ ನನ್ನನ್ನು ಭಕ್ತಿಯಿಂದ ಆರಾಧನೆ ಮಾಡಿದರೆ ಇಲ್ಲೆ ನೆಲೆ ನಿಂತು ಭಕ್ತರ ಕಷ್ಟ ನಿವಾರಿಸುವುದಾಗಿ ಹೇಳಿದಂತೆ ಭಾಸವಾಯಿತಂತೆ. ದೇವಿ ಕನಸ್ಸಿನಲ್ಲಿ ನೀಡಿದ ಆಜ್ಞೆಯಂತೆ ಗುಡ್ಡಪ್ಪ ಜವರಶೆಟ್ಟಿ ತಮ್ಮ ಶಕ್ತಿಗನುಸಾರ ಸಣ್ಣದೊಂದು ಗುಡಿ ನಿರ್ಮಿಸಿ ಅಂದಿನಿಂದ ಪೂಜೆ ಸಲ್ಲಿಸಿಕೊಂಡು ಬರುತ್ತಿದ್ದರು. ಭಕ್ತರು ಸಹಾಯದಿಂದ ದೇವಸ್ಥಾನ ಜೀರ್ಣೋದ್ಧಾರಗೊಂಡು ಗಮನ ಸೆಳೆಯುತ್ತಿದೆ.
ಹೊಸಬಾವಿಯಲ್ಲಿ ಬತ್ತದ ನೀರು : ಐತಿಹಾಸಿಕ ಹೊಸಬಾವಿ ಕೊಳ ವಿಶೇಷವಾಗಿದ್ದು, ಕಾಳಿಕದೇವಿ ದೇವಸ್ಥಾನದ ಬಲಭಾಗದಲ್ಲಿದೆ. ಕಾಳಿಕದೇವಿಯ ಕೃಪೆಯಿಂದ ಈ ಕೊಳದ ನೀರು ಎಂತಹ ಬರಗಾಲದಲ್ಲೂ ಬತ್ತಿಲ್ಲ. ಬೇಸಿಗೆಯೇ ಇರಲಿ, ಮಳೆಗಾಲವೇ ಇರಲಿ ಎಲ್ಲ ಕಾಲದಲ್ಲೂ ಈ ಕೊಳದಲ್ಲಿ ನೀರು ಇದ್ದೇ ಇರುತ್ತದೆ. ಈ ಕೊಳದ ನೀರು ಸಿಹಿಯಾಗಿದ್ದು, ಇಲ್ಲಿನ ಜನ ಈ ನೀರನ್ನು ಕುಡಿಯಲು ಯೋಗ್ಯವಾಗಿದೆ ಎಂದು ಬಳಕೆ ಮಾಡುತ್ತಾರೆ.
ಕಾಳಿಕದೇವಿ ಶಕ್ತಿ ದೇವತೆಯಾಗಿದ್ದು, ಕಷ್ಟದಲ್ಲಿದ್ದ ಅನೇಕ ಭಕ್ತರು ದೇವಿಯ ಕೃಪೆಯಿಂದ ಒಳಿತು ಕಂಡಿದ್ದಾರೆ. ದೇವಸ್ಥಾನಕ್ಕೆ ಬಂದು ದೇವಿಗೆ ಭಕ್ತಿಯಿಂದ ಪೂಜೆ ಸಲ್ಲಿಸಿ ಹರಕೆ ಹೊತ್ತ ಫಲವಾಗಿ ಕೆಲವೇ ಮಾಸಗಳಲ್ಲಿ ಪರಿಹಾರ ಕಂಡುಕೊಂಡಿರುವ ಉದಾಹರಣೆಗಳು ಸಿಗುತ್ತವೆ.
ಭಕ್ತರು ತಮ್ಮ ಕಷ್ಟ ಕಾರ್ಪಣ್ಯ ನಿವಾರಣೆಯಾದರೆ, ಇಷ್ಟಾರ್ಥ ಈಡೇರಿದರೆ ಆರ್ಥಿಕ ಶಕ್ತಿಗನುಗುಣವಾಗಿ ದೇವಸ್ಥಾನದ ಹುಂಡಿಗೆ ಕಾಣಿಕೆ ಸಲ್ಲಿಸುವುದು, ಕುರಿ, ಕೋಳಿ, ಮೇಕೆಗಳನ್ನು ಒಪ್ಪಿಸುವುದು, ದೇವಿಗೆ ಮಹಾಮಂಗಳಾರತಿ, ವಿವಿಧ ರೀತಿಯ ಅಭಿಷೇಕಗಳು, ತಾಳಿ, ಸೀರೆ, ಬಳೆ ಹಾಗೂ ಮಡಿಲಕ್ಕಿ ತುಂಬುವುದು ಸೇರಿದಂತೆ ಯಾವುದೇ ಹರಕೆಗಳನ್ನು ದೇವಸ್ಥಾನಕ್ಕೆ ಬಂದು ಒಪ್ಪಿಸಿ ಪೂಜೆ ಸಮರ್ಪಿಸುತ್ತಾರೆ.
ವರ್ಷಕ್ಕೊಮ್ಮೆ ಜಯಂತ್ಯುತ್ಸವ: ಕಾಳಿಕದೇವಿಗೆ ವಾರದ ಎಲ್ಲ ದಿನದಲ್ಲೂ ಪೂಜೆ ಸಲ್ಲಿಸಲಾಗುತ್ತದೆ. ಆದರೆ ಶಕ್ತಿ ದೇವತೆಗೆ ಪ್ರಿಯವಾದ ದಿನಗಳಾದ ಮಂಗಳವಾರ, ಶುಕ್ರವಾರ, ಹುಣ್ಣಿಮೆ, ಅಮಾವಾಸ್ಯೆ ಹಾಗೂ ಹಬ್ಬ ಹರಿದಿನಗಳಲ್ಲಿ ದೇವಸ್ಥಾನವನ್ನು ಹೂವು, ತಳಿರು -ತೋರಣಗಳಿಂದ ಸಿಂಗರಿಸಿ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಆಷಾಢ ಮಾಸದ ಭಾನುವಾರದಂದು ದೇವಿಯ ಜಯಂತ್ಯುತ್ಸವ ಜರುಗುತ್ತದೆ. ಅಂದು ಲೋಕ ಕಲ್ಯಾಣಾರ್ಥವಾಗಿ ದೇವಸ್ಥಾನದಲ್ಲಿ ಹೋಮ, ಹವನ, ಮಹಾಭಿಷೇಕ ನೆರವೇರಿದ ಬಳಿಕ ಪುಣ್ಯ ತೀರ್ಥ ನೆರವೇರಿಸಿ ಪಂಚಕಲ್ಯಾಣಿಯಲ್ಲಿ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಗುವುದು. ಬಳಿಕ ಪಂಚನಾದ ಸ್ವರಗಳೊಂದಿಗೆ ಗ್ರಾಮದಲ್ಲಿ ಉತ್ಸವ ನಡೆಸುವುದು ವಿಶೇಷವಾಗಿದೆ. ಇದಾದ ಬಳಿಕ ಐದು ದಿನಗಳವರೆಗೂ ವಿವಿಧ ಧಾರ್ಮಿಕ ಕೈಕಂರ್ಯ ನೆರವೇರಿಸಿ ದೇವಿಯನ್ನು ಪ್ರಸನ್ನಗೊಳಿಸಲಾಗುತ್ತದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net