ಕಾಸರಗೋಡಿನಲ್ಲಿ ಮಲೆಯಾಳಂ ಭಾಷೆ ಕಡ್ಡಾಯಕ್ಕೆ ಖಂಡನೆ: ಕದಂಬ ಸೈನ್ಯ ಸಂಘಟನೆ ಪ್ರತಿಭಟನೆ

ಮಂಡ್ಯ ನಗರದಲ್ಲಿ ಕದಂಬ ಸೈನ್ಯ ಕನ್ನಡ ಸಂಘಟನೆಯಿಂದ ಜಿಲ್ಲಾಧಿಕಾರಿ ಡಾ.ಕುಮಾರ ಅವರ ಮೂಲಕ ಮನವಿ ಸಲ್ಲಿಸಲಾಯಿತು.
ಮಂಡ್ಯ ನಗರದಲ್ಲಿ ಕದಂಬ ಸೈನ್ಯ ಕನ್ನಡ ಸಂಘಟನೆಯಿಂದ ಜಿಲ್ಲಾಧಿಕಾರಿ ಡಾ.ಕುಮಾರ ಅವರ ಮೂಲಕ ಮನವಿ ಸಲ್ಲಿಸಲಾಯಿತು.
Published on

ಪ್ರಮುಖ ಮುಖ್ಯಾಂಶಗಳು

  • ಕಾಸರಗೋಡಿನಲ್ಲಿ ಮಲೆಯಾಳಂ ಭಾಷೆ ಕಡ್ಡಾಯ
  • ಕನ್ನಡಿಗರ ಮೇಲೆ ದೌರ್ಜನ್ಯ
  • ಕೇರಳ ಸರ್ಕಾರದ ವಿರುದ್ಧ ಪ್ರತಿಭಟನೆ
ಮಂಡ್ಯ: ಕಾಸರಗೋಡಿನಲ್ಲಿ ಸರ್ಕಾರಿ ಮತ್ತು ಖಾಸಗಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಕಡ್ಡಾಯವಾಗಿ ಮಲೆಯಾಳಂ ಭಾಷೆಯಾಗಿ ಕಲಿಸಬೇಕೆನ್ನುವ ಕೇರಳ ಸರ್ಕಾರದ ನಡೆ ಖಂಡಿಸಿ ನಗರದಲ್ಲಿ ಶನಿವಾರ ಕದಂಬ ಸೈನ್ಯ ಕನ್ನಡ ಸಂಘಟನೆಯಿಂದ ಪ್ರತಿಭಟನೆ ನಡೆಸಲಾಯಿತು.
ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ಕಾರ್ಯಕರ್ತರು, ಕೇರಳ ಸಿಎಂ ಪಿಣರಾಯಿ ವಿಜಯನ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಡಿಸಿ ಡಾ.ಕುಮಾರ ಅವರ ಮೂಲಕ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು. ಕಾಸರಗೋಡಿನ ಶಾಲೆಗಳಲ್ಲಿ ಮಲೆಯಾಳಂ ಭಾಷೆ ಕಡ್ಡಾಯಗೊಳಿಸಲು ಕೇರಳ ಸರ್ಕಾರ ಕನ್ನಡ ಮಸೂದೆ ಜಾರಿಗೆ ತರಲು ಹೊರಟಿದೆ. ಈ ಮೂಲಕ ಕನ್ನಡಿಗರ ಮೇಲೆ ನೇರವಾಗಿ ಗದಾಪ್ರಹಾರ ಮಾಡುತ್ತಿದೆ. ಮಾತ್ರವಲ್ಲದೆ ಕನ್ನಡಿಗರನ್ನು ಪಾತಾಳಕ್ಕೆ ತಳ್ಳುವ ಕಾರ್ಯ ಮಾಡುತ್ತಿದ್ದಾರೆ. ಇತ್ತ ಕರ್ನಾಟಕ ಸರ್ಕಾರ ರಾಜ್ಯದಲ್ಲಿ ಕನ್ನಡ ಶಾಲೆಗಳನ್ನು ಮುಚ್ಚುವ ಕಾರ್ಯ ನಿರಂತರವಾಗಿ ಮಾಡುತ್ತಾ ಬಂದಿದೆ. ಇಲ್ಲಿಯೂ ಕನ್ನಡದ ಮೇಲೆ ನಿರಂತರವಾಗಿ ಗದಾಪ್ರಹಾರ ನಡೆಯುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
2017ರಲ್ಲಿ ಇದೇ ರೀತಿ ಕಡ್ಡಾಯ ಮಲೆಯಾಳಂ ಭಾಷೆ ಹೇರುವ ಪ್ರಯತ್ನ ಮಾಡಿತ್ತು. ಆದರೆ ಅಂದು ಕನ್ನಡ ಪರ ಸಂಘಟನೆಗಳು ಸರ್ಕಾರದ ಒತ್ತಡ ಫಲವಾಗಿ ಅದು ಜಾರಿಗೆ ಬಂದಿರಲಿಲ್ಲ. ಇದೀಗ ಮತ್ತೆ ಕೇರಳ ಸರ್ಕಾರ ಅದೇ ಕೆಲಸಕ್ಕೆ ಮುಂದಾಗಿದೆ. ಕನ್ನಡ ಶಾಲೆಗಳಿಗೆ ಕನ್ನಡ ಮಾಧ್ಯಮ ಶಿಕ್ಷಕರನ್ನು ಬಿಟ್ಟು ಮಲೆಯಾಳಂ ಶಿಕ್ಷಕರನ್ನು ನೇಮಕ ಮಾಡಿತ್ತು. ಈ ಮೂಲಕ ಕನ್ನಡ ಭಾಷೆ, ಕನ್ನಡಿಗರನ್ನು ತುಳಿಯುವ ಪ್ರಯತ್ನವನ್ನು ಪಿಣರಾಯಿ ವಿಜಯನ್ ಮಾಡುತ್ತಿದ್ದಾರೆ. ಇದಕ್ಕೆ ಪ್ರಮುಖ ಕಾರಣ ರಾಜ್ಯ ಸರ್ಕಾರದ ಕನ್ನಡ ಇಚ್ಛಾಶಕ್ತಿ ಕೊರತೆ. ಹೊರನಾಡು ಗಡಿ ಭಾಗದಲ್ಲಿರುವ ಕನ್ನಡಿಗರು ಸಂಕಷ್ಟಕ್ಕೆ ಸಿಲುಕಿ ಕಣ್ಣೀರಿನಲ್ಲೇ ಬದುಕು ಸಾಗಿಸುತ್ತಿದ್ದರು. ಅವರ ನೆರವಿಗೆ ಸರ್ಕಾರ ಬರದೆ ಉದಾಸೀನ ತೋರುತ್ತಿದೆ ಎಂದು ಆರೋಪಿಸಿದರು.
ಕನ್ನಡ ನಾಡಿನಲ್ಲಿ ಈಗಾಗಲೇ ಸಾವಿರಾರು ಕನ್ನಡ ಶಾಲೆಗಳನ್ನು ಮುಚ್ಚಿವೆ. ಈ ವರ್ಷ 7000 ಶಾಲೆಗಳನ್ನು ಮುಚ್ಚಿ ಕರ್ನಾಟಕ ಪಬ್ಲಿಕ್ ಶಾಲೆಗಳಿಗೆ ಸೇರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇದರಿಂದ ವಿದ್ಯಾರ್ಥಿಗಳು ಏಳೆಂಟು ಕಿ.ಮೀ ದೂರದ ಕರ್ನಾಟಕ ಪಬ್ಲಿಕ್ ಶಾಲೆಗೆ ಹೋಗಬೇಕಿದೆ. ಕನ್ನಡ ಸರ್ಕಾರಿ ಶಾಲೆಗಳ ಅವನತಿಗೆ ನಮ್ಮ ರಾಜ್ಯ ಸರ್ಕಾರವೂ ಕಾರಣ. ಆದ್ದರಿ.ದ ಯಾವುದೇ ಕಾರಣಕ್ಕೂ ಕನ್ನಡ ಸರ್ಕಾರಿ ಶಾಲೆಗಳನ್ನು ಮುಚ್ಚಬಾರದು ಎಂದು ಆಗ್ರಹಿಸಿದರು.
ಇನ್ನು ಬಾಂಗ್ಲಾ ದೇಶ ಹಾಗೂ ಹೊರ ರಾಜ್ಯದ ಸಾವಿರಾರೂ ಜನರು ಅಕ್ರಮವಾಗಿ ಕನ್ನಡ ನೆಲದಲ್ಲೇ ನೆಲೆಸಿದ್ದಾರೆ. ಮಾತ್ರವಲ್ಲದೆ ಕನ್ನಡ, ಕನ್ನಡಿಗರ ಮೇಲೆ ದೌರ್ಜನ್ಯ ಪುಂಡಾಟಿಕೆ ನಡೆಸುತ್ತಿದ್ದಾರೆ. ಕೇರಳದ ಮುಖ್ಯಮಂತ್ರಿ ಆಗ್ರಹ ಮಾಡಿದರೆಂದು ಬೆಂಗಳೂರು ಕೊಗಿಲೆ ನಗರದಲ್ಲಿ ಅಕ್ರಮವಾಗಿ ನೆಲೆಸಿದ್ದ ಕೇರಳ ಮುಸ್ಲಿಂ ಕುಟುಂಬದವರಿಗೆ ಹೊಸ ಮನೆಗಳನ್ನು ನೀಡಲು ಮುಂದಾಗಿದ್ದಾರೆ. ಬಾಂಗ್ಲಾ ದೇಶದವರು ಬೆಂಗಳೂರು, ಕೊಡಗು ಸೇರಿದಂತೆ ಎಲ್ಲ ಜಿಲ್ಲಾ ಕೇಂದ್ರ, ಗ್ರಾಮಾಂತರ ಪ್ರದೇಶದಲ್ಲಿ ಅಕ್ರಮವಾಗಿ ನೆಲೆಸಿದ್ದಾರೆ. ಇವರಿಗೆ ಆಧಾರ್ ಕಾರ್ಡ್ ಮುಂತಾದ ನೆರವು ನೀಡುತ್ತಿದ್ದಾರೆ. ಈ ಬಗ್ಗೆ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಉದಾಸೀನ ತೋರುತ್ತಿದೆ. ಇದಲ್ಲದೆ ಕೆಲ ಬ್ಯಾಂಕ್‌ನಿಂದ ಬಾಂಗ್ಲಾ ವಲಸಿಗರಿಗೆ ಲಕ್ಷಾಂತರ ರೂಗಳನ್ನು ಸಾಲ ರೂಪದಲ್ಲಿ ನೀಡುವ ಮೂಲಕ ದೇಶದ ಭದ್ರತೆಗೆ ಧಕ್ಕೆ ತಂದಿದೆ. ಈ ಬಗ್ಗೆ ರಾಜ್ಯಸರ್ಕಾರ ಗಮನಹರಿಸಬೇಕು. ಅಕ್ರಮವಾಗಿ ನೆಲೆಸಿರುವ ಬಾಂಗ್ಲಾದವರನ್ನು ದೇಶದಿಂದ ಹೊರ ಹಾಕಬೇಕು. ಇಲ್ಲದಿದ್ದರೆ ಮುಂದೆ ಘನಘೋರ ಸಂಕಷ್ಟ ಎದುರಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಕದಂಬ ಸೈನ್ಯದ ಸಂಸ್ಥಾಪಕ ಬೇಕ್ರಿ ರಮೇಶ್, ರಾಜ್ಯ ಸಹ ಕಾರ್ಯದರ್ಶಿ ಉಮ್ಮಡಹಳ್ಳಿ ನಾಗೇಶ್, ರಾಜ್ಯ ಸಮಿತಿ ಸದಸ್ಯ ಆರಾಧ್ಯ ಗುಡೇಗೆನಹಳ್ಳಿ, ಕೃಷ್ಣಪ್ಪ ಶೆಟ್ಟಿ, ಜಿಲ್ಲಾ ಸಂಚಾಲಕ ಸಲ್ಮಾನ್, ಉಪಾಧ್ಯಕ್ಷ ರಾಮು ಚಿಕ್ಕೇಗೌಡನದೊಡ್ಡಿ, ಭಾರತೀಯ ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ಬಿ.ಪಿ.ಅಪ್ಪಾಜಿ ಬೂದನೂರು, ಕಾರ್ಯದರ್ಶಿ ಜಯರಾಂ ತೂಬಿನಕೆರೆ, ಸ್ವಾಮಿ, ಕೃಷ್ಣಮೂರ್ತಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net