ವರ್ಷಕ್ಕೆ ಎರಡು ಮೇಳ ಆಯೋಜನೆ: ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿಕೆ

ಮಂಡ್ಯ ನಗರದಲ್ಲಿ ಆಯೋಜಿಸಿದ್ದ ಉದ್ಯೋಗ ಮೇಳದಲ್ಲಿ ವಿವಿಧ ಹುದ್ದೆಗೆ ಆಯ್ಕೆಯಾದ ಅಂಗವಿಕಲರಿಗೆ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ನೇಮಕಾತಿ ಪತ್ರ ನೀಡಿ ಅಭಿನಂದಿಸಿದರು.
ಮಂಡ್ಯ ನಗರದಲ್ಲಿ ಆಯೋಜಿಸಿದ್ದ ಉದ್ಯೋಗ ಮೇಳದಲ್ಲಿ ವಿವಿಧ ಹುದ್ದೆಗೆ ಆಯ್ಕೆಯಾದ ಅಂಗವಿಕಲರಿಗೆ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ನೇಮಕಾತಿ ಪತ್ರ ನೀಡಿ ಅಭಿನಂದಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • 202 ಯುವಜನರಿಗೆ ನೇಮಕಾತಿ ಪತ್ರ ವಿತರಣೆ
  • 929 ಅಭ್ಯರ್ಥಿಗಳನ್ನು ಎರಡನೇ ಹಂತಕ್ಕೆ ಆಯ್ಕೆ
ಮಂಡ್ಯ: ಜಿಲ್ಲೆಯಲ್ಲಿ ನಿರುದ್ಯೋಗಿ ಸಮಸ್ಯೆಯನ್ನು ಹೋಗಲಾಡಿಸಲು ಜಿಲ್ಲಾ ಮಟ್ಟದ ಉದ್ಯೋಗ ಮೇಳವನ್ನು ಏರ್ಪಡಿಸಲಾಗಿದೆ. ಇದಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಇನ್ನು ಮುಂದೆ ವರ್ಷಕ್ಕೆ ಎರಡು ಬಾರಿ ಎಲ್ಲ ತಾಲೂಕಿನಲ್ಲೂ ಉದ್ಯೋಗ ಮೇಳ ಆಯೋಜಿಸೋಣ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
ಉದ್ಯೋಗ ಮೇಳ ಸರ್ಕಾರದ ಒಂದು ಕಾರ್ಯಕ್ರಮ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ವರ್ಷದಲ್ಲಿ ಒಂದು ಬಾರಿ ಉದ್ಯೋಗ ಮೇಳ ಮಾಡಲು ಸಚಿವಾಲಯ ಹಾಗೂ ಜಿಲ್ಲಾಡಳಿತ ಮಾಡಲು ಆದೇಶ ನೀಡಿದೆ. ಮುಂದಿನ ದಿನದಲ್ಲಿ ಕೃತಕ ಬುದ್ಧಿಮತ್ತೆ ಹೆಚ್ಚು ಪ್ರಚಲಿತಕ್ಕೆ ಬರಬಹುದು. ಇದರಿಂದ ಯುವಜನತೆಗೆ ಉದ್ಯೋಗಾವಕಾಶಗಳ ಪ್ರಮಾಣ ಕಡಿಮೆಯಾಗಲಿದೆ. ಆದರೆ ಈ ಬಗ್ಗೆ ಆತಂಕಪಡುವ ಅವಶ್ಯಕತೆ ಇಲ್ಲ. ತಮ್ಮ ಕೌಶಲದ ಮೂಲಕ ಸ್ವಯಂ ಉದ್ಯೋಗ ಪಡೆಯಬಹುದು. ಇದರಿಂದ ಆರ್ಥಿಕ ಸಬಲತೆಯ ಜತೆಗೆ ಇತರರಿಗೂ ಉದ್ಯೋಗ ನೀಡಬಹುದು ಎಂದು ಯುವಜನತೆಗೆ ಸಲಹೆ ನೀಡಿದರು.
ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಎಲ್ಲವನ್ನು ಎದುರಿಸುವ ಮಟ್ಟಿಗೆ ತಾಂತ್ರಿಕವಾಗಿ ಜ್ಞಾನ ಪಡೆದು ಮುಂದುವರೆಯಬೇಕು. ಮತ್ತು ಜಿಲ್ಲೆಯಲ್ಲಿ ಯುವ ಜನತೆ ಗೋಸ್ಕರ ಯುವ ಉತ್ಸವವನ್ನು ಶೀಘ್ರದಲ್ಲಿ ಮಾಡುತ್ತೇವೆ. ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳು ಜತೆಗೆ ಜಿಲ್ಲೆಯ ಸಾರ್ವಜನಿಕರಾಗಿ ನೂತನವಾಗಿ ಕಾರ್ಯಕ್ರಮವನ್ನು ಮಾಡುವ ನಿಟ್ಟಿನಲ್ಲಿ ಬೂದನೂರು ಉತ್ಸವ ಪ್ರಯುಕ್ತ ಹೆಲಿ ಟೂರಿಸಂ ಹೆಲಿಪ್ಯಾಡ್ ಸವಾರಿ ಪ್ರದರ್ಶನವು ಯಶಸ್ವಿಯಾಗಿದೆ ಎಂದು ಹೇಳಿದರು.
ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಉಪಾಧ್ಯಕ್ಷ, ಎಂಎಲ್‌ಸಿ ದಿನೇಶ್ ಗೂಳಿಗೌಡ ಮಾತನಾಡಿ, ಕೃಷಿ, ಕೈಗಾರಿಕೆ, ಶಿಕ್ಷಣ, ವೈದ್ಯಕೀಯ ಕ್ಷೇತ್ರದಲ್ಲಿ ಕೃತಕ ಬುದ್ದಿಮತ್ತೆ ಹಾಗೂ ಆಧುನಿಕ ತಂತ್ರಜ್ಞಾನ ಕಾಲಕಾಲಕ್ಕೆ ಹೊಂದಾಣಿಕೆಯಾಗುವ ಜತೆಗೆ ಬದಲಾವಣೆಯಗುತ್ತಿದೆ. ರಾಜ್ಯ ಸರ್ಕಾರ ಪದವೀಧರರು ಹಾಗೂ ಡಿಪ್ಲೋಮೋ ವ್ಯಾಸಂಗ ಮಾಡಿದವರಿಗೆ ಯುವ ನಿಧಿ ಯೋಜನೆಯಲ್ಲಿ ಆರ್ಥಿಕ ನೆರವು ನೀಡುತ್ತಿದೆ. ಯೋಜನೆಯ ಮೂಲಕ ಇದುವರೆಗೂ ರಾಜ್ಯದಲ್ಲಿ 3,08,672 ವಿದ್ಯಾರ್ಥಿಗಳಿಗೆ 912 ಕೋಟಿ ರೂ ಹಾಗೂ ಮಂಡ್ಯ ಜಿಲ್ಲೆಯಲ್ಲಿ 7,222 ನಿರುದ್ಯೋಗಿ ಪದವೀಧರರಿಗೆ ಇಪ್ಪತ್ತೊಂದುವರೆ ಕೋಟಿ ರೂಗಳನ್ನು ಅವರ ಖಾತೆಗೆ ಜಮೆ ಮಾಡಲಾಗಿದೆ. ಯುವಜನತೆ ತಮ್ಮ ಕೌಶಲತೆ ಹೆಚ್ಚಿಸಿಕೊಂಡು ಉದ್ಯೋಗವನ್ನು ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಶ್ರೀರಂಗಪಟ್ಟಣ ಶಾಸಕ ರಮೇಶ ಬಂಡಿಸಿದ್ದೇಗೌಡ, ಮನ್‌ಮುಲ್ ನಿರ್ದೇಶಕ ಎನ್.ಅಪ್ಪಾಜಿಗೌಡ, ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ ನಿಯಮಿತ ಉಪಾಧ್ಯಕ್ಷೆ ವಿಜಯಲಕ್ಷ್ಮೀ ರಘುನಂದನ್, ಜಿಲ್ಲಾಧಿಕಾರಿ ಡಾ.ಕುಮಾರ, ಜಿಪಂ ಸಿಇಒ ಕೆ.ಆರ್.ನಂದಿನಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿ.ಜೆ.ಶೋಭಾರಾಣಿ, ಮಂಡ್ಯ ವಿಶ್ವವಿದ್ಯಾಲಯ ಕುಲಪತಿ ಎಂ.ಪಿ.ಕೃಷ್ಣಕುಮಾರ್, ಜಿಪಂ ಯೋಜನಾ ನಿರ್ದೇಶಕ ಎಸ್.ಸುಂದರ್‌ರಾಜ್ ಉಪಸ್ಥಿತರಿದ್ದರು.
"

ಮಂಡ್ಯದಲ್ಲಿ ಉದ್ಯೋಗದ ಅವಕಾಶ ಕಡಿಮೆ. ಈ ನಿಟ್ಟಿನಲ್ಲಿ ನಿರುದ್ಯೋಗ ಹೋಗಲಾಡಿಸಲು ನಮ್ಮ ಸರ್ಕಾರ ಮುಂದಾಗಿದ್ದು, ಮಂಡ್ಯದಲ್ಲಿ ಅಮೆರಿಕಾದ ಕಂಪನಿಯೊಂದು ಶೀಘ್ರದಲ್ಲೇ ಆರಂಭವಾಗಲಿದೆ. ಈ ಮೂಲಕ ಸ್ಥಳೀಯರಿಗೆ ಉದ್ಯೋಗ ನೀಡಲು ಮುಂದಾಗಿದೆ. ಅಂತೆಯೇ ಇನ್ನು 6 ತಿಂಗಳಿನಲ್ಲಿ ಸಾವಿರ ಜನರಿಗೆ ಉದ್ಯೋಗ ಅವಕಾಶ ಕಲ್ಪಿಸುತ್ತೇವೆ.

202 ಯುವಜನರಿಗೆ ನೌಕರಿ ಖಾತರಿ
ನಗರದ ಮಂಡ್ಯ ವಿಶ್ವವಿದ್ಯಾಲಯದ ಕಲಾಭವನದಲ್ಲಿ ಆಯೋಜಿಸಿದ್ದ ಜಿಲ್ಲಾಮಟ್ಟದ ಉದ್ಯೋಗ ಮೇಳದಲ್ಲಿ 202 ಯುವಜನರಿಗೆ ಸ್ಥಳದಲ್ಲಿಯೇ ನೇಮಕಾತಿ ಪತ್ರ ವಿತರಿಸಲಾಯಿತು. ಅಂತೆಯೇ 929 ಅಭ್ಯರ್ಥಿಗಳನ್ನು ಎರಡನೇ ಹಂತಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ.
ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯ, ರಾಜ್ಯ ಸರ್ಕಾರದ ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ದೀನ್ ದಯಾಳ್ ಅಂತ್ಯೋದಯ ಯೋಜನೆ-ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ, ದೀನ್ ದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ ಯೋಜನೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಮತ್ತು ಮಂಡ್ಯ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಆಯೋಜಿಸಿದ್ದ ಉದ್ಯೋಗ ಮೇಳಕ್ಕೆ ಅಭೂತಪೂರ್ವ ಸ್ಪಂದನೆ ವ್ಯಕ್ತವಾಯಿತು.
ಜಿಪಂ ಸಿಇಒ ಕೆ.ಆರ್.ನಂದಿನಿ ಅವರು ಉದ್ಯೋಗ ಮೇಳದ ಕುರಿತು ಹಲವು ಸಭೆ ಆಯೋಜಿಸಿ ಅಧಿಕಾರಿಗಳ ಮೂಲಕ ಹೆಚ್ಚಿನ ಪ್ರಚಾರ ಮಾಡಿ ಯುವಜನರನ್ನು ಮೇಳಕ್ಕೆ ಕರೆಸಿಕೊಳ್ಳುವಲ್ಲಿ ಯಶಸ್ವಿಯಾದರು. ಅದರಂತೆ ಜಿಲ್ಲೆಯಲ್ಲಿ 2,733 ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡರು. ಇನ್ನೊಂದೆಡೆ ನೋಂದಣಿ ಮಾಡಿಕೊಳ್ಳದ ನೂರಾರೂ ಅಭ್ಯರ್ಥಿಗಳು ಸಂದರ್ಶನದಲ್ಲಿ ಪಾಲ್ಗೊಂಡರು. ಇದಲ್ಲದೆ ನೆರೆಯ ಜಿಲ್ಲೆಯಿಂದಲೂ 150ಕ್ಕೂ ಹೆಚ್ಚು ಉದ್ಯೋಗಾಕಾಂಕ್ಷಿಗಳು ಭಾಗವಹಿಸಿದ್ದರು.
ಯುವ ಜನರಿಗೆ ಉದ್ಯೋಗ ದೊರಕಿಸಿಕೊಡಬೇಕೆನ್ನುವ ಸದುದ್ದೇಶದೊಂದಿಗೆ ಕಂಪನಿಗಳನ್ನು ಮೇಳಕ್ಕೆ ಆಹ್ವಾನಿಸಲಾಗಿತ್ತು. ಅದರಂತೆ ಕೃಷಿ ಉತ್ಪನ್ನ ಉತ್ಪಾದನೆ, ಸೇವಾ ವಲಯ, ಬ್ಯಾಂಕಿಂಗ್, ಫೈನಾನ್ಸ್ ಸೇರಿದಂತೆ 150ಕ್ಕೂ ಹೆಚ್ಚು ವಿವಿಧ ಕೈಗಾರಿಕೆ ಸಂಸ್ಥೆಗಳು ಆಗಮಿಸಿದವು. ಭ್ಯರ್ಥಿಗಳಿಗೆ ಗೊಂದಲವಾಗಬಾರದೆಂದು ತಾಲೂಕುವಾರು ಪ್ರತ್ಯೇಕ ಕೌಂಟರ್ ತೆರೆಯಲಾಗಿತ್ತು. ಮಾತ್ರವಲ್ಲದೆ ಎಲ್ಲರಿಗೂ ಊಟ, ಕುಡಿಯುವ ನೀರು ಸೇರಿದಂತೆ ಮೂಲ ಸೌಕರ್ಯ ಕಲ್ಪಿಸಲಾಗಿತ್ತು. ಜತೆಗೆ ಅಭ್ಯರ್ಥಿಗಳಿಗೆ ಮಾರ್ಗದರ್ಶನ ನೀಡಲು ಸಿಬ್ಬಂದಿ ನಿಯೋಜನೆ ಮಾಡಲಾಗಿತ್ತು. ಅಧಿಕೃತ ನೋಂದಣಿಯಂತೆ ಕೆ.ಆರ್.ಪೇಟೆ ತಾಲೂಕಿನಿಂದ 216, ನಾಗಮಂಗಲದಿಂದ 191, ಮಂಡ್ಯದಿಂದ 881, ಪಾಂಡವಪುರ 223, ಶ್ರೀರಂಗಪಟ್ಟಣ 209, ಮಳವಳ್ಳಿ 563 ಹಾಗೂ ಮದ್ದೂರು ತಾಲೂಕಿನಿಂದ 450 ಅಭ್ಯರ್ಥಿಗಳು ಭಾಗವಹಿಸಿದ್ದರು. ಅಂತೆಯೇ ಜಿಲ್ಲಾಡಳಿತ, ಜಿಪಂನಿಂದ ಅಚ್ಚುಕಟ್ಟಾದ ಆಯೋಜನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net