ನೂರು ವರ್ಷ ಪೂರೈಸಿದ ಪಕ್ಷದವರು ಬಿಹಾರ ಚುನಾವಣೆ ಬಳಿಕ ನಿಶಬ್ಧವಾಗಿದ್ದಾರೆ: ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ವ್ಯಂಗ್ಯ JDS criticism against Congress

ಮಂಡ್ಯದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿ ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ಮಾತನಾಡಿದರು.
ಮಂಡ್ಯದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿ ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ಮಾತನಾಡಿದರು.
Published on

ಪ್ರಮುಖ ಮುಖ್ಯಾಂಶಗಳು

  • ಬಿಹಾರ ಚುನಾವಣೆ ಫಲಿತಾಂಶದ ಬಳಿಕ ಅದ್ಯಾಕೋ ನಿಶಬ್ಧ
  • ಶತಮಾನ ಪೂರೈಸಿರುವ ಪಕ್ಷಕ್ಕೆ ಭವಿಷ್ಯದ ಚಿಂತೆ
  • ಜೆಡಿಎಸ್ ಪಕ್ಷದ 25ನೇ ವರ್ಷದ ಸಂಸ್ಥಾಪನಾ ದಿನ
ಮಂಡ್ಯ: ರಾಜ್ಯದಲ್ಲಿ ಜೆಡಿಎಸ್ ಅಸ್ಥಿತ್ವವೇ ಇರುವುದಿಲ್ಲವೆಂದು ಟೀಕೆ ಮಾಡಿದ್ದರು. ಆದರೆ ಬಿಹಾರ ಚುನಾವಣೆ ಫಲಿತಾಂಶದ ಬಳಿಕ ಅದ್ಯಾಕೋ ನಿಶಬ್ಧವಾಗಿದ್ದಾರೆ. ಅಲ್ಲಿ ಒಂದಂಕಿ ಸ್ಥಾನಕ್ಕೆ ಇಳಿದಿದ್ದಾರೆಂದು ಕಾಂಗ್ರೆಸ್ ವಿರುದ್ಧ ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ವ್ಯಂಗ್ಯವಾಡಿದರು.
ನೂರು ವರ್ಷ ಪೂರೈಸಿರುವ ಪಕ್ಷದವರು ಜೆಡಿಎಸ್ ಬಗ್ಗೆ ಲಘುವಾಗಿ ಮಾತನಾಡಿದ್ದರು. ಆದರೆ ಮೂರ‌್ನಾಲ್ಕು ದಿನದಿಂದ ಹೇಳಿಕೆಗಳೇ ಬರುತ್ತಿಲ್ಲ. ಬಿಹಾರ ರಾಜ್ಯದ ಫಲಿತಾಂಶ ಶತಮಾನ ಪೂರೈಸಿರುವ ಪಕ್ಷದ ಭವಿಷ್ಯವನ್ನು ಬಿಂಬಿಸಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ರಾಜ್ಯದ ಅಭಿವೃದ್ದಿಯ ಮುನ್ನೋಟದ ಗುರಿ ಹಾಗೂ ಜನ ಸಾಮಾನ್ಯರ ದನಿಯಾಗಿ ಕಾರ್ಯನಿರ್ವಹಿಸುವ ಪ್ರಾದೇಶಿಕ ಪಕ್ಷದ ಅವಶ್ಯಕತೆಯನ್ನು ಮನಗಂಡ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಸ್ಥಾಪಿಸಿರುವ ಜೆಡಿಎಸ್ ಪಕ್ಷದ 25ನೇ ವರ್ಷದ ಸಂಸ್ಥಾಪನಾ ದಿನವನ್ನು ಬೆಳ್ಳಿ ಹಬ್ಬವಾಗಿ ನ.21, 22 ರಂದು ಬೆಂಗಳೂರಿನ ಜೆ.ಪಿ.ಭವನದಲ್ಲಿ ಆಚರಿಸಲಾಗುತ್ತಿದೆ. ನೆಲ, ಜಲದ ರಕ್ಷಣೆ ಜತೆಗೆ ನಾಡಿನ ರೈತಾಪಿ ವರ್ಗದ ದನಿಯಾಗಿರುವ ಜೆಡಿಎಸ್ ಪ್ರಾದೇಶಿಕ ಪಕ್ಷವಾಗಿ 25 ವರ್ಷ ಪೂರೈಸಿರುವ ಸಂಭ್ರಮಾಚರಣೆಯಲ್ಲಿ ಪಕ್ಷದ ಹೋರಾಟ, ಅಧಿಕಾರಾವಧಿಯ ಜನಹಿತ ಹಾಗೂ ಕೃಷಿ ಮತ್ತು ನೀರಾವರಿ ಕ್ಷೇತ್ರದ ಸಾಧನೆಗಳನ್ನು ಮೆಲಕು ಹಾಕಲಾಗುವುದೆಂದು ವಿವರಿಸಿದರು.
ಎಚ್.ಡಿ.ದೇವೇಗೌಡರು ಮುಖ್ಯಮಂತ್ರಿ ಹಾಗೂ ಪ್ರಧಾನ ಮಂತ್ರಿ ಹುದ್ದೆಯಲ್ಲಿ ಅಲ್ಪ ಕಾಲ ಕಾರ್ಯ ನಿರ್ವಹಿಸಿದ್ದರೂ ತಮ್ಮ ಅಧಿಕಾರಾವಧಿಯಲ್ಲಿ ಬೆಂಗಳೂರು ನಗರದ ಅಭಿವೃದ್ದಿಗೆ ವಿಶೇಷ ಒತ್ತು ನೀಡಿದ್ದಾರೆ. ಮೇಲ್ಸೇತುವೆ ನಿರ್ಮಾಣ, ಮೆಟ್ರೋ ಅವಶ್ಯಕತೆ, ನೀರಾವರಿ ಕ್ಷೇತ್ರದ ಅಭ್ಯುದಯಕ್ಕೆ ಕೇಂದ್ರದ ನೆರವು ಕೊಡಿಸುವಲ್ಲಿ ಅಹರ್ನಿಷಿ ದುಡಿದಿದ್ದಾರೆ. ಎಚ್.ಡಿ.ಕುಮಾರಸ್ವಾಮಿ ಅವರು ರಾಜ್ಯದಲ್ಲಿ 2 ಬಾರಿ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಗ್ರಾಮ ವಾಸ್ತವ್ಯ ಮಾಡಿ ಸ್ಥಳೀಯ ಸಮಸ್ಯೆಗಳ ನಿವಾರಣೆಗೆ ಶ್ರಮಿಸಿದ್ದಾರೆ. ರೈತರು ಸಂಕಷ್ಟಕ್ಕೆ ಸಿಲುಕಿ ನೇಣಿಗೆ ಶರಣಾದಾಗ ರಾಜ್ಯ ವ್ಯಾಪ್ತಿ ಪ್ರವಾಸ ನಡೆಸಿ ಅವರಲ್ಲಿ ಆತ್ಮ ಸ್ಥೈರ್ಯ ತುಂಬಿ ಅಧಿಕಾರಕ್ಕೆ ಬಂದಾಗ ಸಾಲ ಮನ್ನಾ ಮಾಡಿ ನೆರವಾಗಿದ್ದಾರೆ ಎಂದು ವಿವರಿಸಿದರು.
ನೆರೆ ರಾಜ್ಯಗಳಾದ ಆಂಧ್ರ, ತಮಿಳುನಾಡು, ತೆಲಂಗಾಣ ರಾಜ್ಯಗಳ ಅಭಿವೃದ್ದಿಯನ್ನು ಮನಗಂಡು ರಾಜ್ಯದ ಜನತೆ ಪ್ರಾದೇಶಿಕ ಪಕ್ಷವಾಗಿರುವ ಜೆಡಿಎಸ್ ಅನ್ನು ಬೆಂಬಲಿಸಬೇಕೆಂದು ರಾಜ್ಯ ವ್ಯಾಪಿ ಪಕ್ಷದ ವರಿಷ್ಟರು ಪ್ರವಾಸ ಮಾಡಿ ಪಕ್ಷದ ಬಲವರ್ಧನೆಗೆ ಶ್ರಮಿಸಲಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಪ್ರಣಾಳಿಕೆಯಲ್ಲಿ ಶಿಕ್ಷಣ, ಆರೋಗ್ಯ ಮತ್ತು ಸ್ವಯಂ ಉದ್ಯೋಗ ಭರಿಸುವ ಆಶಯದೊಂದಿಗೆ ಚುನಾವಣೆ ಎದುರಿಸಲಾಯಿತು. ಆದರೆ ಶತಮಾನ ಪೂರೈಸಿರುವ ರಾಷ್ಟ್ರೀಯ ಪಕ್ಷವೊಂದು ತೋರಿದ ತಾತ್ಕಾಲಿಕ ಆಮಿಷಕ್ಕೆ ಮತದಾರ ಮನಸೋತ ಪರಿಣಾಮ ಜೆಡಿಎಸ್ ಅಧಿಕಾರ ಕಳೆದುಕೊಂಡಿದೆ. ಭವಿಷ್ಯದಲ್ಲಿ ಪಕ್ಷಕ್ಕೆ ಉತ್ತಮ ಬುನಾದಿ ದೊರೆಯಲಿದೆ. ಹಣವಂತರ ಕಪಿಮುಷ್ಟಿಯಲ್ಲಿ ಸಿಲುಕಿರುವ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಿಂದ ಜನತೆ ಬಸವಳಿದಿದ್ದು, ಪ್ರಾದೇಶಿಕ ಪಕ್ಷದ ಬಲವರ್ದನೆಗೆ ಬೆಂಬಲಿಸುವ ನಿರೀಕ್ಷೆಯೊಂದಿಗೆ ನಿಖಿಲ್ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಪಕ್ಷ ಬಲವರ್ದನೆಗೆ ಮುಂದಾಗುತ್ತೇವೆಂದು ತಿಳಿಸಿದರು.
ಮಾಜಿ ಎಂಎಲ್‌ಸಿ ಕೆ.ಟಿ.ಶ್ರೀಕಂಠೇಗೌಡ ಮಾತನಾಡಿ, ಜಲದ ರಕ್ಷಣೆ ಜತೆ ಪ್ರಾದೇಶಿಕ ಅಸ್ಮಿತೆಯ ಬಲವರ್ಧನೆಗಾಗಿ ಜೆಡಿಎಸ್ ಪಕ್ಷವನ್ನು ರಾಜ್ಯದ ಮತದಾರರು ಬೆಂಬಲಿಸಬೇಕು. ಸಾರಾಯಿ, ಲಾಟರಿ ನಿಷೇಧ ನಮ್ಮ ಆಡಳಿತ ವೈಖರಿಗೆ ಸಾಕ್ಷಿ. ದೇವರಾಜ ಅರಸು, ಬಿ.ಎಸ್.ಯಡಿಯೂರಪ್ಪ, ಕೆಂಗಲ್ ಹನುಮಂತಯ್ಯ ಅವರಂತಹ ಪ್ರಭಾವಿ ನಾಯಕರಿಂದಲೂ ಮುನ್ನೆಡೆಸಲಾಗದ ಪ್ರಾದೇಶಿಕ ಪಕ್ಷವನ್ನು ಎಚ್.ಡಿ.ದೇವೇಗೌಡರು ಬಲಗೊಳಿಸಲು ಮುಂದಾಗಿರುವುದು ನಮ್ಮೆಲ್ಲರ ಸೌಭಾಗ್ಯವೆಂದು ಅಭಿಪ್ರಾಯಿಸಿದರು.
ಕೆ.ಆರ್.ಪೇಟೆ ಶಾಸಕ ಎಚ್.ಟಿ.ಮಂಜು, ಮಾಜಿ ಶಾಸಕರಾದ ಕೆ.ಸುರೇಶ್‌ಗೌಡ, ಡಾ.ಅನ್ನದಾನಿ, ಮುನ್‌ಮುಲ್ ನಿರ್ದೇಶಕ ಬಿ.ಆರ್.ರಾಮಚಂದ್ರು, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ಶ್ರೀರಂಗಪಟ್ಟಣ ತಾಲೂಕು ಜೆಡಿಎಸ್ ಅಧ್ಯಕ್ಷ ದಶರಥ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net