ಬಡವರಿಗೆ ನಿವೇಶನ ಹಂಚಿಕೆಗೆ ಅಡ್ಡಿ ಸರಿಯಲ್ಲ

ರೈತಸಂಘ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ ಕಿಡಿ
ರೈತಸಂಘ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ ಕಿಡಿ
Published on
ಪಾಂಡವಪುರ: ಪಟ್ಟಣ ವ್ಯಾಪ್ತಿಯ ನಿವೇಶನ ರಹಿತ ಕುಟುಂಬಗಳಿಗೆ ನಿವೇಶನ ಹಂಚಿಕೆ ಮಾಡಲು ಮುಂದಾಗಿರುವ ಕ್ರಮಕ್ಕೆ ಮಾಜಿ ಶಾಸಕ ಸಿ.ಎಸ್.ಪುಟ್ಟರಾಜು ಅಡ್ಡಿಪಡಿಸುತ್ತಿರುವುದು ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿದೆ ಎಂದು ರೈತಸಂಘ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ ಹೇಳಿದರು.
ಉಪವಿಭಾಗಾಧಿಕಾರಿ, ತಹಸೀಲ್ದಾರ್ ಹಾಗೂ ಹಿಂದಿನ ಪುರಸಭೆ ಅಧ್ಯಕ್ಷರನ್ನು ಒಳಗೊಂಡಂತೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅಧ್ಯಕ್ಷತೆಯಲ್ಲಿ ನಡೆದ ಆಶ್ರಯ ಸಮಿತಿ ಸಭೆಯಲ್ಲಿ ನಿವೇಶನ ರಹಿತ ಅರ್ಹ ಫಲಾನುಭವಿಗಳಿಗೆ 176 ನಿವೇಶನ ಹಂಚಿಕೆ ಮಾಡಲು ನಿರ್ಣಯ ಮಾಡಲಾಗಿದೆ. ನಗರಾಭಿವೃದ್ಧಿ ಇಲಾಖೆ ಕೂಡ ಲಭ್ಯವಿರುವ ನಿವೇಶನಗಳನ್ನು ಹಂಚಿಕೆ ಮಾಡಲು ಅಗತ್ಯ ಕ್ರಮ ಕೈಗೊಳ್ಳದಿರುವುದಕ್ಕೆ ಪುರಸಭೆ ಮುಖ್ಯಾಧಿಕಾರಿಗೆ ನೋಟಿಸ್ ಜಾರಿ ಮಾಡಿದೆ. ಹೀಗಾಗಿ ಶಾಸಕರು ನಿವೇಶನ ಹಂಚಿಕೆಗೆ ಕ್ರಮ ಕೈಗೊಂಡಿದ್ದಾರೆ. ಬಡವರಿಗೆ ನಿವೇಶನ ಹಂಚಿಕೆ ಮಾಡುವುದನ್ನು ಸ್ವಾಗತಿಸಬೇಕು. ಅದನ್ನು ಬಿಟ್ಟು ವಿರೋಧ ವ್ಯಕ್ತಪಡಿಸುವುದು ಸರಿಯಲ್ಲ. ನಿಮ್ಮದೇ ಪಕ್ಷದ ಆಡಳಿತ ಮಂಡಳಿ ಪುರಸಭೆ ಚುಕ್ಕಾಣಿ ಹಿಡಿದಿತ್ತು. ಆಗಲೇ ನಿವೇಶನ ಹಂಚಿಕೆ ಮಾಡಬಹುದಿತ್ತು. ಆದರೆ ಮಾಡಲಿಲ್ಲ. ಮಾಜಿ ಶಾಸಕರು ಮತ್ತು ಸಚಿವರಾದವರು ಯಾವುದೇ ವಿಚಾರಕ್ಕೆ ಅಡ್ಡಿಪಡಿಸಿದರೆ ಅದರಲ್ಲಿ ಗಂಭೀರತೆ ಇರಬೇಕು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.
ಕೆ.ಎಸ್.ಪುಟ್ಟಣ್ಣಯ್ಯ ಅವರು 1998ರಲ್ಲಿ ಶಾಸಕರಾಗಿದ್ದಾಗ ನಿವೇಶನ ರಹಿತರಿಗೆ ಏಕಕಾಲಕ್ಕೆ 1051 ನಿವೇಶನ ಹಂಚಿಕೆ ಮಾಡಿದ್ದರು. ಅದನ್ನು ಬಿಟ್ಟರೆ ಬೇರ‌್ಯಾವ ಶಾಸಕರು ಸರ್ಕಾರಿ ಜಮೀನು ಗುರುತಿಸಿ ನಿಯಮದಂತೆ ಸ್ವಾಧೀನಕ್ಕೆ ಪಡೆದು ನಿವೇಶನ ಹಂಚಿಕೆಗೆ ಮುಂದಾಗಲಿಲ್ಲ. ಸಿ.ಎಸ್.ಪುಟ್ಟರಾಜು ಅವರು ತಮ್ಮ ಅವಧಿಯಲ್ಲಿ ಪಟ್ಟಣದ ವಿಶ್ವೇಶ್ವರಯ್ಯ ನಾಲಾ ಪಕ್ಕದಲ್ಲಿ ನೀರಾವರಿ ಇಲಾಖೆಗೆ ಸೇರಿದ್ದ ಜಾಗದಲ್ಲಿ ಗುಡಿಸಲು ಕಟ್ಟಿಕೊಂಡು ವಾಸವಿದ್ದ ಬಡವರಿಗೆ ಹಕ್ಕು ಪತ್ರ ವಿತರಿಸಿದ್ದಾರೆ. ಆದರೆ ನಿಯಮದಂತೆ ನೀರಾವರಿ ಇಲಾಖೆಯ ಈ ಜಾಗವನ್ನು ವಸತಿ ಇಲಾಖೆಗೆ ವರ್ಗಾಯಿಸಿಕೊಂಡು ಹಕ್ಕು ಪತ್ರ ವಿತರಿಸುವ ಕೆಲಸ ಮಾಡಿಲ್ಲ. ನಾಳೆ ಏನಾದರು ತೊಂದರೆಯಾದರೆ ಬಡವರು ಎಲ್ಲಿಗೆ ಹೋಗಬೇಕು ಎಂದು ಪ್ರಶ್ನಿಸಿದರು.
ಪುರಸಭೆ ವ್ಯಾಪ್ತಿಯ ಹಾರೋಹಳ್ಳಿ ಬಳಿ ಇರುವ ನಿವೇಶನಗಳನ್ನು ಅದೇ ಗ್ರಾಮದ ಬಡವರಿಗೆ ವಿತರಿಸಬೇಕೆಂದು ಮಾಜಿ ಶಾಸಕ ಸಿ.ಎಸ್.ಪುಟ್ಟರಾಜು ಅವರು ಪ್ರತಿಭಟನೆ ಮೂಲಕ ಒತ್ತಾಯಿಸಿದ್ದಾರೆ. ಆದರೆ, ಅವರು ಶಾಸಕರಾಗಿದ್ದಾಗ ಅದೇ ಜಾಗವನ್ನು ಪೊಲೀಸ್ ವಸತಿ ಗೃಹ ನಿರ್ಮಾಣ ಮತ್ತು ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿನಿಲಯ ನಿರ್ಮಾಣಕ್ಕೆ ನಿವೇಶನ ಕಾಯ್ದಿರಿಸುವಂತೆ ನಿರ್ಣಯ ಮಾಡಿದ್ದಾರೆ. ಅಂದು ಹಾರೋಹಳ್ಳಿ ಗ್ರಾಮದ ಬಡವರ ಬಗ್ಗೆ ಇಲ್ಲದ ಕಾಳಜಿ ಈಗ ಬಂದಿದ್ದೀಯ? ನಿವೇಶನ ರಹಿತರಿಗೆ ಚಂದ್ರೆ ಗ್ರಾಮದ ಬಳಿ 25 ಎಕರೆ ಜಮೀನು ಗುರುತಿಸಿದ್ದೆ ಎಂದು ಹೇಳಿಕೆ ನೀಡಿದ್ದೀರಾ. ಈ ಸಂಬಂಧ ನೀವು ಸರ್ಕಾರದ ವಿವಿಧ ಇಲಾಖೆಗಳಿಗೆ ಸಲ್ಲಿಸಿರುವ ಅರ್ಜಿ ಮತ್ತು ಇತರ ದಾಖಲೆಗಳನ್ನು ನಮಗೆ ಕೊಡಿ. ಬಡವರಿಗೆ ಬಳ್ಳೆಯದಾಗುವುದಾದರೆ ನಾವೇ ಹೋರಾಟ ಮಾಡುತ್ತೇವೆ. ಅದನ್ನು ಬಿಟ್ಟು ಸುಳ್ಳು ಹೇಳಬಾರದು ಎಂದು ಕಿಡಿಕಾರಿದರು.
ರೈತಸಂಘ ಹಿಂದಿನಿಂದಲೂ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡಿಕೊಂಡು ಬಂದಿದೆ. ಪಾಂಡವಪುರ ಪುರಸಭೆ ಮುಖ್ಯಾಧಿಕಾರಿ ವಿರುದ್ಧ ರೈತಸಂಘ ಈ ಮೊದಲೇ ಪ್ರತಿಭಟನೆ ನಡೆಸಿದೆ. ನೀವು ಈಗ ಪುರಸಭೆ ಮುಖ್ಯಾಧಿಕಾರಿ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ಆರೋಪಿಸುತ್ತಿದ್ದೀರಾ. ಜೆಡಿಎಸ್ ಆಡಳಿತ ಮಂಡಳಿ ಇದ್ದಾಗಲೇ ಮುಖ್ಯಾಧಿಕಾರಿ ಕರ್ತವ್ಯ ನಿರ್ವಹಿಸುತ್ತಿದ್ದರು. ಆಗ ಮುಖ್ಯಾಧಿಕಾರಿ ಒಳ್ಳೆಯವರಾಗಿದ್ರಾ? ನೀವು ಅಧಿಕಾರದಿಂದ ಇಳಿದ ಮೇಲೆ ಕೆಟ್ಟವರ, ನಿಮ್ಮ ಆಡಳಿತಾವಧಿಯಲ್ಲಿ ಮುಖ್ಯಾಧಿಕಾರಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಸರ್ಕಾರ ಅಥವಾ ಜಿಲ್ಲಾಧಿಕಾರಿಗೆ ಪತ್ರ ಬರೆದು ಒತ್ತಾಯ ಮಾಡಿದ್ದೀರಾ ಎಂದು ಮಾಜಿ ಶಾಸಕ ಸಿ.ಎಸ್.ಪುಟ್ಟರಾಜು ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ನಿವೇಶನ ರಹಿತರಿಗೆ ಮಹಾತ್ಮಗಾಂಧಿ ನಗರ, ಸುಭಾಷ್ ನಗರ ಮತ್ತು ಹನುಮಂತ ನಗರದಲ್ಲಿ 1998ರಿಂದ ಇತ್ತೀಚಿನವರೆಗೂ ಪಟ್ಟಣ ವ್ಯಾಪ್ತಿಯಲ್ಲಿ ಬಡವರಿಗೆ ಹಂಚಿಕೆಯಾಗಿರುವ ನಿವೇಶನಗಳಲ್ಲಿ ಕೆಲವರು ಅಕ್ರಮ ನಡೆಸಿರುವ ಬಗ್ಗೆ ಅನುಮಾನವಿದೆ. ಈ ಬಗ್ಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಗಮನಹರಿಸಿ ಸಮಗ್ರ ಮಾಹಿತಿಯೊಂದಿಗೆ ಸಿಐಡಿ ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ರೈತಸಂಘ ತಾಲೂಕು ಅಧ್ಯಕ್ಷ ವೈ.ಪಿ.ಮಂಜು, ಕಾರ್ಯದರ್ಶಿ ಅಶೋಕ್, ಮಾಜಿ ಅಧ್ಯಕ್ಷ ನಾಗರಾಜು, ಜಿಪಂ ಮಾಜಿ ಸದಸ್ಯ ಕೆ.ಟಿ.ಗೋವಿಂದೇಗೌಡ, ಪುರಸಭೆ ನಾಮನಿರ್ದೇಶಿತ ಸದಸ್ಯರಾದ ಮುರಳೀಧರ್, ಪಟೇಲ್ ರಮೇಶ್ ಮುಖಂಡರಾದ ಹಾರೋಹಳ್ಳಿ ಹುಚ್ಚೇಗೌಡ, ಸೋಮು, ಶರತ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net