ಮದ್ದೂರು ತಾಲೂಕಿನ ಕೊಪ್ಪದಲ್ಲಿ ರೈತ ಸಂಘದ ಕಾರ್ಯಕರ್ತರ ಸಭೆ ನಡೆಯಿತು. ಗೊಲ್ಲರದೊಡ್ಡಿ ಅಶೋಕ್, ದೊಡ್ಡಮರಿಯಪ್ಪ, ಲಿಂಗಪ್ಪಾಜಿ, ಜಿ.ಎ.ಶಂಕರ್, ಹೊನ್ನಶೆಟ್ಟಿ, ವರದರಾಜು, ವಿನೋದ್‌ಬಾಬು, ಸತೀಶ್, ಕುಮಾರ್, ರವೀಶ್ ಇದ್ದರು.
ಮದ್ದೂರು: ತಾಲೂಕಿನ ಕೊಪ್ಪದ ಎನ್‌ಎಸ್‌ಎಲ್ ಮತ್ತು ಚಾಂಶುಗರ್ಸ್ ಕಾರ್ಖಾನೆಗಳು ಟನ್ ಕಬ್ಬಿಗೆ ಬಾಕಿ 50 ರೂ.ಗಳನ್ನು ನೀಡದೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿರುವುದು ಸರಿಯಲ್ಲ ಎಂದು ರೈತ ಸಂಘದ ಮುಖಂಡ ಗೊಲ್ಲರದೊಡ್ಡಿ ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು.
ಕೊಪ್ಪದಲ್ಲಿ ಶುಕ್ರವಾರ ನಡೆದ ರೈತ ಸಂಘದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು. ಕಾರ್ಖಾನೆಗಳ ವಿರೋಧಿ ನೀತಿ ಖಂಡಿಸಿ ಜೂ.15 ರಂದು ತಾಲೂಕು ರೈತ ಸಂಘದ ವತಿಯಿಂದ ಏಕಕಾಲದಲ್ಲಿ ಬೃಹತ್ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ ಎಂದರು.
ಸರ್ಕಾರ ಘೋಷಿಸಿರುವ ಕಾರ್ಖಾನೆಯ ಪಾಲು ಟನ್‌ವೊಂದಕ್ಕೆ 50 ರೂ.ಗಳನ್ನು ರಾಜ್ಯದ ಕೆಲವು ಕಾರ್ಖಾನೆಗಳು ಈಗಾಗಲೇ ರೈತರಿಗೆ ಪಾವತಿಸಿವೆ. ಆದರೆ ಕೊಪ್ಪದ ಎನ್‌ಎಸ್ ಎಲ್ ಹಾಗೂ ಕೆ.ಎಂ.ದೊಡ್ಡಿಯ ಚಾಂಶುಗರ್ಸ್ ಸೇರಿದಂತೆ ಜಿಲ್ಲೆಯ ಹಲವು ಕಾರ್ಖಾನೆಗಳು 50 ರೂ. ಪಾವತಿ ಮಾಡದೆ ಅದರ ವಿರುದ್ಧ ನ್ಯಾಯಾಲಯದಲ್ಲಿ ತಡೆಯಾಜ್ಞೆ ತಂದಿರುವುದು ಖಂಡನೀಯ ಎಂದು ಹೇಳಿದರು.
ಕೂಡಲೇ ಕಾರ್ಖಾನೆಗಳು ತಡೆಯಾಜ್ಞೆ ವಾಪಸ್ ಪಡೆದು ರೈತರಿಗೆ 50 ರೂ. ಪ್ರೋತ್ಸಾಹಧನ ಪಾವತಿಸಬೇಕು. ನಂತರ ಕಾರ್ಖಾನೆಗಳಲ್ಲಿ ಕಬ್ಬು ಅರೆಯಬೇಕು ಹಾಗೂ ಕೇಂದ್ರ ಸರ್ಕಾರ ಎಫ್‌ಆರ್‌ಪಿ ದರ ನಿಗದಿಗೊಳಿಸಿಗೊಳಿಸಬೇಕೆಂದು ಒತ್ತಾಯಿಸಿದರು.
ಸಭೆಯಲ್ಲಿ ರೈತ ಮುಖಂಡರಾದ ಸ್ವಾಮಿ, ದೊಡ್ಡಮರಿಯಪ್ಪ, ಲಿಂಗಪ್ಪಾಜಿ, ಜಿ.ಎ.ಶಂಕರ್, ಹೊನ್ನಶೆಟ್ಟಿ, ವರದರಾಜು, ವಿನೋದ್‌ಬಾಬು, ಸತೀಶ್, ಕುಮಾರ್, ರವೀಶ್, ಶ್ರೀನಿವಾಸ್, ತಮ್ಮಯ್ಯ, ಮರಿಯಪ್ಪ ಸೇರಿದಂತೆ ಇತರರು ಇದ್ದರು.